ADVERTISEMENT

ವಿಜೃಂಭಣೆಯ ಶ್ರೀಕಂಠೇಶ್ವರಸ್ವಾಮಿ ಚಿಕ್ಕಜಾತ್ರೆ

ಶುಭ ಮಕರ ಲಗ್ನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವ; ದರ್ಶನ್‌ ಧ್ರುವನಾರಾಯಣ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 15:30 IST
Last Updated 28 ನವೆಂಬರ್ 2023, 15:30 IST
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಚಿಕ್ಕಜಾತ್ರಾ ಮಹೋತ್ಸವದ ಪ್ರಯುಕ್ತ ರಥ ಬೀದಿಯಲ್ಲಿ ಭಕ್ತರು ರಥವನ್ನು ಎಳೆದರು
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಚಿಕ್ಕಜಾತ್ರಾ ಮಹೋತ್ಸವದ ಪ್ರಯುಕ್ತ ರಥ ಬೀದಿಯಲ್ಲಿ ಭಕ್ತರು ರಥವನ್ನು ಎಳೆದರು   

ನಂಜನಗೂಡು: ನಗರದ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಶುಭ ಮಕರ ಲಗ್ನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಿಕ್ಕಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ದೇವಾಲಯದಲ್ಲಿ ಶ್ರೀಕಂಠೇಶ್ವರ ಸ್ವಾಮಿಗೆ ಜಾತ್ರೆಯ ಪ್ರಯುಕ್ತ ವಿವಿಧ ಹೂವುಗಳಿಂದ ಅಲಂಕಾರ ಮಾಡಿ, ಕ್ಷೀರಾಭಿಷೇಕ, ಫಲಪಂಚಾಮೃತ ಅಭಿಷೇಕ ಹಾಗೂ ಮಹಾನ್ಯಾಸ ಪೂರ್ವಕವಾಗಿ ರುದ್ರಾಭಿಷೇಕ, ಮಹಾ ಮಂಗಳಾರತಿ ಗಳನ್ನು ನಡೆಸಲಾಯಿತು. ನಂತರ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗಳಿಗೆ ಚಿನ್ನ, ವಜ್ರ ವೈಢೂರ್ಯಗಳಿಂದ ಅಲಂಕರಿಸಿ, ಬೆಳಿಗ್ಗೆ 10.45 ಗಂಟೆ ಸುಮಾರಿಗೆ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಋತ್ವಿಕರು ದೇವಾಲಯದ ಹೊರಗೆ ಹೊತ್ತು ತಂದರು. ದೇವಾಲಯದ ಮುಂಭಾಗದ ಆವರಣದಲ್ಲಿ ವಿಶೇಷ ಪೂಜೆ ನಡೆಸಿದ ನಂತರ ಶಾಸಕ ದರ್ಶನ್‌ ಧ್ರುವನಾರಾಯಣ ಅವರ ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಜಾತ್ರೆಗೆ ಚಾಲನೆ ನೀಡಿದರು.

ರಥಗಳನ್ನು ವಿವಿಧ ಬಗೆಯ ಹೂವುಗಳು ಹಾಗೂ ಬಣ್ಣ-ಬಣ್ಣದ ಬಾವುಟಗಳಿಂದ ಅಲಂಕರಿಸಲಾಗಿತ್ತು. ಮೊದಲಿಗೆ ಗಣಪತಿ ನಂತರ ಶ್ರೀಕಂಠೇಶ್ವರ ಹಾಗೂ ಕೊನೆಯಲ್ಲಿ ಸುಬ್ರಹ್ಮಣ್ಯೇಶ್ವರ, ಚಂಡಿಕೇಶ್ವರ ಹಾಗೂ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಹೊತ್ತ ರಥಗಳನ್ನು 1.5 ಕಿ.ಮೀ ವ್ಯಾಪ್ತಿಯ ರಥ ಬೀದಿಯಲ್ಲಿ ಭಕ್ತರು ಜೈಕಾರ ಹಾಕುತ್ತಾ ಭಕ್ತಿಭಾವದಿಂದ ಎಳೆದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಭಕ್ತರು ರಥಗಳಿಗೆ ಹಣ್ಣು ದವನ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಗೆ ಮೂರು ರಥಗಳು ಸಾಂಗವಾಗಿ ಸ್ವಸ್ಥಾನ ತಲುಪಿದವು. ನಂತರ ಹಂಸವಾಹನ ಉತ್ಸವ, ಸಂಜೆ ನಟೇಶ ಉತ್ಸವಗಳು ಜರುಗಿದವು.

ADVERTISEMENT

ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಸಂಭ್ರಮ, ಸಡಗರಗಳಿಂದ ದೇವಾಲಯದ ಹೊರಗೆ ಧೂಪ, ದೀಪದ ಸೇವೆ, ಉರುಳು ಸೇವೆ, ಹರಕೆ ಮುಡಿ ಸೇವೆಗಳನ್ನು ಸಲ್ಲಿಸಿದರು.

ಚಿಕ್ಕಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳು ಭಕ್ತರಿಗೆ ಪ್ರಸಾದ ವಿತರಣೆ ಮಾಡಿದವು. ದೇವಾಲಯದ ದಾಸೋಹ ಭವನದಲ್ಲಿ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಮಹೋತ್ಸವದಲ್ಲಿ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್, ಕಾಂಗ್ರೆಸ್‌ ಮುಖಂಡ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ನಾಗರಾಜಯ್ಯ, ಶಶಿರೇಖಾ, ಹುಂಡಿ ನಾಗರಾಜು ಇದ್ದರು.

ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಚಿಕ್ಕಜಾತ್ರಾ ಮಹೋತ್ಸವದ ಪ್ರಯುಕ್ತ ರಥ ಬೀದಿಯಲ್ಲಿ ಭಕ್ತರು ರಥವನ್ನು ಎಳೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.