ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಅಳಿಯಂದಿರಾದ ಡಾ.ಮೋಹನ್ ಹಾಗೂ ಮಾಜಿ ಶಾಸಕ ಬಿ.ಹರ್ಷವರ್ಧನ್ ನಡುವೆ ತೀವ್ರ ಪೈಪೋಟಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗುರುವಾರ ಚರ್ಚೆ ನಡೆಸಿದರು.
ಇಲ್ಲಿನ ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ ವಿಜಯೇಂದ್ರ ಟಿಕೆಟ್ ವಿಚಾರದಲ್ಲಿ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಮೈಸೂರಿಗೆ ಬಂದಾಗ ನಮ್ಮೆಲ್ಲರ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಮುಂದಿನ ತಿಂಗಳು 17ಕ್ಕೆ ಅವರ ರಾಜಕೀಯ ಜೀವನವು 50 ವರ್ಷ ತುಂಬಲಿದೆ. ಅವರಿಂದ ಸಲಹೆ-ಸೂಚನೆಗಳನ್ನು ಪಡೆದಿದ್ದೇನೆ. ಚಾಮರಾಜನಗರ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ವಿಚಾರವಾಗಿ ಮಾತನಾಡಿ ಸಲಹೆ ಪಡೆದಿದ್ದೇನೆ' ಎಂದರು.
'ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಅವರು ಪ್ರತಿನಿಧಿಸುತ್ತಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡುತ್ತಾರೆ' ಎಂದು ಪ್ರತಿಕ್ರಿಯಿಸಿದರು.
ಶ್ರೀನಿವಾಸ ಪ್ರಸಾದ್ ಮಾತನಾಡಿ, 'ಅಳಿಯಂದಿರಾದ ಡಾ.ಮೋಹನ್ ಹಾಗೂ ಬಿ.ಹರ್ಷವರ್ಧನ್ ಇಬ್ಬರೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂಬುದು ಗೊತ್ತಾಗಿದೆ. ನಮ್ಮ ಮನೆಯಲ್ಲಿಯೇ ಇಬ್ಬರು ಆಕಾಂಕ್ಷಿಗಳಿದ್ದಾರೆ. ಇಬ್ಬರ ನಡುವೆಯೂ ಉತ್ತಮ ಸಂಬಂಧವಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ' ಎಂದು ಕುಟುಂಬದವರಿಗೇ ಟಿಕೆಟ್ ದೊರೆಯಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.
'ಚಾಮರಾಜನಗರ ಕ್ಷೇತ್ರದ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ವಿಜಯೇಂದ್ರಗೆ ಹೇಳಿದ್ದೇನೆ' ಎಂದೂ ತಿಳಿಸಿದರು.
'ಮಾರ್ಚ್ 17ರ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ಹೋಗಿವುದಿಲ್ಲ. ಆದರೆ, ಬಿಜೆಪಿಯನ್ನು ಬೆಂಬಲಿಸಿ ಎಂದು ಎಲ್ಲರನ್ನೂ ಕೇಳಿಕೊಳ್ಳುತ್ತೇನೆ' ಎಂದು ಪ್ರತಿಕ್ರಿಯಿಸಿದರು.
ಮಾಜಿ ಶಾಸಕ ಹರ್ಷವರ್ಧನ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.