ADVERTISEMENT

ಮುಡಾ ಆಯುಕ್ತರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗೆ ಶ್ರೀವತ್ಸ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 13:21 IST
Last Updated 5 ಜುಲೈ 2024, 13:21 IST

ಮೈಸೂರು: ‘ಮುಡಾದಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಹಿಂದಿನ ಆಯುಕ್ತರಾಗಿದ್ದ ಜಿ.ಟಿ. ದಿನೇಶ್‌ಕುಮಾರ್‌ ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಒತ್ತಾಯಿಸಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಗುರುವಾರ ಪತ್ರ ಬರೆದಿದ್ದಾರೆ.

‘ಕಾನೂನುಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, ಅಧಿಕಾರಿಗಳನ್ನು ಕೇವಲ ವರ್ಗಾವಣೆ ಮಾಡಿರುವುದು ಶಿಕ್ಷೆ ನೀಡಿದಂತಾಗುವುದಿಲ್ಲ’ ಎಂದು ಹೇಳಿದ್ದಾರೆ.

‘ತಾಲ್ಲೂಕು ಕಸಬಾ ಹೋಬಳಿ ಹಿನಕಲ್‌ ಗ್ರಾಮದ ಸರ್ವೇ ನಂ. 211ರಲ್ಲಿ 3 ಎಕರೆ 5 ಗುಂಟೆ ಜಮೀನಿಗೆ ಪರಿಹಾರವಾಗಿ 36,753 ಚದರ ಅಡಿಗಳಷ್ಟು ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ’ ಎಂದು ಮತ್ತೊಂದು ಪತ್ರದಲ್ಲಿ ಆರೋಪಿಸಿದ್ದಾರೆ.

ADVERTISEMENT

‘ಆ ಗ್ರಾಮದ ಎ.ಪಾಪಣ್ಣ ಅವರು ಏ.15ರಂದು ಅರ್ಜಿ ಸಲ್ಲಿಸಿದ್ದಾರೆ. ಪ್ರಾಧಿಕಾರವು ಕೇವಲ 2 ತಿಂಗಳಲ್ಲಿ ಅಂದರೆ ಜೂನ್‌ 12ರಂದು ನಿವೇಶನಗಳನ್ನು ಹಂಚಿಕೆ ಮಾಡಿ ಆದೇಶಿಸಿದೆ. ಈ ಮೂಲಕ, 50:50 ಅನುಪಾತದಲ್ಲಿ ನಿವೇಶನ ನೀಡುವ ನಿರ್ಣಯವನ್ನು ರದ್ದುಪಡಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ’ ಎಂದು ದೂರಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.