ಮೈಸೂರು: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಎನ್ನುವುದು ವಿದ್ಯಾರ್ಥಿಗಳ ಜೀವನದ ತಿರುವಿನ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ಮೈಮರೆಯಬಾರದು’ ಎಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುವೆಂಪುನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರೊಡನೆ ಸಂವಾದ’ ಕಾರ್ಯಕ್ರಮ ಸರಣಿಯ 3ನೇ ಸಭೆಯಲ್ಲಿ ಅವರು ಮಾತನಾಡಿದರು.
‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಲ್ಲಿ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮಕ್ಕಳಿಗೆ ಮಾತ್ರವಲ್ಲ, ಪೋಷಕರಿಗೂ ಅನ್ವಯಿಸುತ್ತದೆ’ ಎಂದರು.
‘ಮಕ್ಕಳನ್ನು ದಾರಿ ತಪ್ಪಿಸುವ ಮಂದಿ ಹೆಚ್ಚಿದ್ದಾರೆ. ಅಂಥವರತ್ತ ಮಕ್ಕಳ ಮನಸ್ಸು ಹರಿಯದಂತೆ ಎಚ್ಚರ ವಹಿಸಬೇಕು. ಮುಂದಿನ ಎರಡು–ಮೂರು ವರ್ಷಗಳು ಅವರ ಮೇಲೆ ಹೆಚ್ಚಿನ ನಿಗಾ ಇರಿಸಿದಲ್ಲಿ ಅವರ ಭವಿಷ್ಯದ ಹಾದಿಯ ಬಗ್ಗೆ ಅರಿವಾಗುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸುವ ಹೊಣೆ ಪೋಷಕರದಾಗಿದೆ. ಮಕ್ಕಳ ವಿಶ್ವಾಸ ಹೆಚ್ಚಿಸುವ ಕೆಲಸವನ್ನೂ ಮಾಡಬೇಕು’ ಎಂದು ಹೇಳಿದರು.
‘ಕ್ಷೇತ್ರದ ವ್ಯಾಪ್ತಿಯಲ್ಲಿ ಪರೀಕ್ಷೆ ತೆಗೆದುಕೊಳ್ಳಲಿರುವ ಎಲ್ಲಾ 4,291 ವಿದ್ಯಾರ್ಥಿಗಳ ಪೋಷಕರಿಗೆ ಪರೀಕ್ಷಾ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪತ್ರವನ್ನು ಬರೆದಿದ್ದೇನೆ. ಉತ್ತಮ ಫಲಿತಾಂಶದ ಗುರಿ ಈಡೇರಬೇಕಾದರೆ ಪರಿಶ್ರಮ ವಹಿಸಬೇಕಾಗುತ್ತದೆ’ ಎಂದು ತಿಳಿಸಿದರು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಾಮಾರಾಧ್ಯ, ಪ್ರಾಂಶುಪಾಲ ಚಿದಾನಂದಮೂರ್ತಿ, ಬಿಆರ್‌ಸಿ ಶ್ರೀಕಂಠಸ್ವಾಮಿ, ಎಸ್‌ಡಿಎಂಸಿ ಉಪಾಧ್ಯಕ್ಷ ಹರೀಶ್, ಬಿಆರ್‌ಪಿ ಶ್ರೀಕಂಠ ಶಾಸ್ತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.