ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ | ಮೌಲ್ಯಮಾಪನದಲ್ಲಿ ಲೋಪವೇಕೆ: ಪೋಷಕರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 7:54 IST
Last Updated 8 ಜೂನ್ 2024, 7:54 IST

ಮೈಸೂರು: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪುತ್ರಿ ಕೆ.ಎಸ್. ಶ್ರಾವ್ಯಗೆ 545 ಬಂದಿತ್ತು. ಮರು ಮೌಲ್ಯಮಾಪನದ ನಂತರ 606 ಅಂಕಗಳು ದೊರೆತಿವೆ. ಯಾರೋ ಮಾಡಿದ ತಪ್ಪಿನಿಂದಾಗಿ ಹಾಗೂ ಅಂಕ ಕಡಿಮೆ ಆಯಿತೆಂದು ನಾವು ಅನುಭವಿಸಿದ ನೋವಿಗೆ ಬೆಲೆ ಕಟ್ಟಲು ಸಾಧ್ಯವೇ’ ಎಂದು ಬನ್ನೂರು ಹೋಬಳಿ ಕೊಡಗಳ್ಳಿ ಗ್ರಾಮದ ಸುಮಾ ಶ್ರೀನಿವಾಸ್ ಪ್ರಶ್ನಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಲೋಪ ಉಂಟಾಗುತ್ತಿರುವುದೇಕೆ’ ಎಂದು ಪ್ರಶ್ನಿಸಿದರು.

‘ನಮ್ಮ ಮಗಳಿಗೆ ಆದಂತೆ ಬಹಳಷ್ಟು ಮಂದಿಗೆ ಕಡಿಮೆ ಅಂಕ ಕೊಟ್ಟಿರಬಹುದು. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಹೀಗೆ ಆಘಾತ ಉಂಟು ಮಾಡುವುದು ಸರಿಯಲ್ಲ’ ಎಂದು ತಿಳಿಸಿದರು.

ADVERTISEMENT

‘ಮರುಮೌಲ್ಯಮಾಪನದ ನಂತರ ಪಿಯು ಕಾಲೇಜು ಪ್ರವೇಶಕ್ಕೆ ಅರ್ಜಿ ಸಲ್ಲಿಸೋಣ ಎಂದು ಸುಮ್ಮನಿದ್ದೆವು. ಈಗ, ಅಂಕ ಹೆಚ್ಚಾಗಿದ್ದರೂ ದಿನಾಂಕ ಮುಗಿದಿರುವ ಕಾರಣ ಕಾಲೇಜುಗಳಲ್ಲಿ ಸೀಟು ಸಿಗುತ್ತಿಲ್ಲ. ಇದರಿಂದ ಉಂಟಾಗಿರುವ ತೊಂದರೆಗೆ ಯಾರ ಕಾರಣ?’ ಎಂದು ಅಳಲು ತೋಡಿಕೊಂಡರು.

‘ವಿದ್ಯಾರ್ಥಿಗಳು ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲವೆಂದು ಆತಂಕಕ್ಕೆ ಒಳಗಾಗಬಾರದು. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

ವಿದ್ಯಾರ್ಥಿನಿ ಶ್ರಾವ್ಯಾ, ತಂದೆ ಕೊಡಗಳ್ಳಿ ಶ್ರೀನಿವಾಸ್, ದೊಡ್ಡಪ್ಪ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.