ADVERTISEMENT

ಮೈಸೂರು: ಶಾಲೆಗೆ ಬಂದರು ಅತಿಥಿ ಶಿಕ್ಷಕರು!

ಮೈಸೂರು ಜಿಲ್ಲೆಗೆ 1,292 ಬೋಧಕರ ನೇಮಕಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಆರ್.ಜಿತೇಂದ್ರ
Published 10 ಜೂನ್ 2024, 8:24 IST
Last Updated 10 ಜೂನ್ 2024, 8:24 IST
<div class="paragraphs"><p>ಡಿಡಿಪಿಐ ಎಚ್.ಕೆ. ಪಾಂಡು</p></div>

ಡಿಡಿಪಿಐ ಎಚ್.ಕೆ. ಪಾಂಡು

   

ಮೈಸೂರು: ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದು, 1,292 ಮಂದಿ ಶಿಕ್ಷಕರ ಬಳಗ ಸೇರಿಕೊಳ್ಳುತ್ತಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ವರ್ಷ 900 ಪ್ರಾಥಮಿಕ ಶಾಲೆ ಹಾಗೂ 290 ಪ್ರೌಢಶಾಲೆ ಅತಿಥಿ ಶಿಕ್ಷಕರಿಗಾಗಿ ಬೇಡಿಕೆ ಇಟ್ಟಿತ್ತು. ಅದಕ್ಕೆ ಪ್ರತಿಯಾಗಿ 1,001 ಪ್ರಾಥಮಿಕ ಶಾಲೆ ಹಾಗೂ 291 ಪ್ರೌಢಶಾಲೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಅಗತ್ಯಕ್ಕಿಂತ ತುಸು ಹೆಚ್ಚೇ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಮುಂದಿನ 15 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ADVERTISEMENT

2023–24ನೇ ಶೈಕ್ಷಣಿಕ ಸಾಲಿನ ಅಂತ್ಯಕ್ಕೆ ಜಿಲ್ಲೆಯಲ್ಲಿ 7,207 ಪ್ರಾಥಮಿಕ ಹಾಗೂ 1,949 ಪ್ರೌಢಶಾಲೆ ಸೇರಿದಂತೆ ಒಟ್ಟು 9,152 ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 7,431 ಕಾಯಂ ಶಿಕ್ಷಕರಿದ್ದು, ಇನ್ನೂ 1,721 ಹುದ್ದೆಗಳು ಖಾಲಿ ಇದ್ದವು. ಕಳೆದ ಸಾಲಿನಲ್ಲಿ 1,404 ಅತಿಥಿ ಶಿಕ್ಷಕರ ಸೇವೆಯನ್ನು ಎರವಲು ಪಡೆಯಲಾಗಿತ್ತು. ಈ ನಡುವೆ ಹೊಸದಾಗಿ ನೇಮಕಗೊಂಡ ಕಾಯಂ ಶಿಕ್ಷಕರೂ ಜಿಲ್ಲೆಗೆ ಬಂದಿದ್ದರಿಂದ ಈ ವರ್ಷ ಅತಿಥಿ ಶಿಕ್ಷಕರ ನೇಮಕಾತಿ ಪ್ರಮಾಣ ಕಡಿಮೆ ಆಗಿದೆ.

ಕಲಿಕೆಗೆ ಅನುಕೂಲ: ಸರ್ಕಾರ ಈಚಿನ ವರ್ಷಗಳಲ್ಲಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಕೊರತೆ ಇರುವ ಶಿಕ್ಷಕರನ್ನು ತುಂಬುವ ಪ್ರಯತ್ನ ಮಾಡುತ್ತಿದೆ. ಅಗತ್ಯ ಇರುವ ಕಡೆಗಳಿಗೆ ನಿಯೋಜನೆ ಮೇಲೆಯೂ ಶಿಕ್ಷಕರನ್ನು ಕಳುಹಿಸಲಾಗುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ತಕ್ಕ ಮಟ್ಟಿಗೆ ಶಿಕ್ಷಕರ ಕೊರತೆ ನೀಗಿದೆ.

‘ವಿದ್ಯಾರ್ಥಿಗಳಿಗೆ ತಕ್ಕಂತೆ ಶಿಕ್ಷಕರಿರಲಿ’

ಕೆಲವು ಸರ್ಕಾರಿ ಶಾಲೆಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ಇರುವ ಕಡೆ ಅಗತ್ಯಕ್ಕಿಂತ ಹೆಚ್ಚು ಶಿಕ್ಷಕರಿದ್ದಾರೆ. ಇನ್ನೂ ಕೆಲವು ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳಿದ್ದರೂ ಕಡಿಮೆ ಶಿಕ್ಷಕರು ಇದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮವಾದ ಸಿದ್ದರಾಮನ ಹುಂಡಿಯ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಈಗಾಗಲೇ 400ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎಲ್‌ಕೆಜಿಗೆ 60 ಮಕ್ಕಳು ದಾಖಲಾಗಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಶಿಕ್ಷಕರ ಕೊರತೆ ಇದೆ. ಇನ್ನೂ ಐವರು ಕಾಯಂ ಶಿಕ್ಷಕರು ಬೇಕಿದ್ದು, ಸದ್ಯ ಅತಿಥಿ ಶಿಕ್ಷಕರ ಎರವಲು ಸೇವೆ ಪಡೆಯಲಾಗುತ್ತಿದೆ. ವಿಶೇಷವಾಗಿ ಕೆಪಿಎಸ್‌ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿದ್ದು, ಅಂತಹ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕು ಎಂಬುದು ವಿದ್ಯಾರ್ಥಿಗಳ ಪೋಷಕರ ಒತ್ತಾಯವಾಗಿದೆ.

ಜಿಲ್ಲೆಯಲ್ಲಿ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ. ಇನ್ನೆರಡು ವಾರದಲ್ಲಿ ಎಲ್ಲ ಶಾಲೆಗಳಿಗೆ ಅಗತ್ಯ ಶಿಕ್ಷಕರ ನಿಯೋಜನೆ ಆಗಲಿದೆ
ಎಚ್‌.ಕೆ. ಪಾಂಡು, ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.