ಮೈಸೂರು: ಆತಿಥೇಯ ಮೈಸೂರಿನ ಸಮರ್ಥನಂ ಟ್ರಸ್ಟ್ ಹಾಗೂ ಬೆಂಗಳೂರಿನ ವಿನ್ಯಾಸ ಟ್ರಸ್ಟ್ ತಂಡಗಳು ಸೋಮವಾರ ಇಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಟಿ–10 ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ದಿನದ ಎರಡೂ ಪಂದ್ಯ ಗೆಲ್ಲುವ ಮೂಲಕ ಪ್ರಶಸ್ತಿಯತ್ತ ಹೆಜ್ಜೆ ಇಟ್ಟಿವೆ.
ಇಲ್ಲಿನ ಜೆಎಸ್‌ಎಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಮರ್ಥನಂ ಟ್ರಸ್ಟ್ ತಂಡವು 97 ರನ್‌ಗಳ ಅಂತರದಿಂದ ಮೈಸೂರಿನ ಜೆಎಸ್‌ಎಸ್ ಪಿಡಿಎ ತಂಡವನ್ನು ಪರಾಭವಗೊಳಿಸಿತು. ಸಮರ್ಥನಂ ಪರ ಹುಸೇನ್ 32 ಎಸೆತಗಳಲ್ಲಿ 72 ರನ್ ಗಳಿಸಿ ಗೆಲುವಿನ ರೂವಾರಿಯಾದರು.
ಇದೇ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆದ ಮತ್ತೊಂದು ಪಂದ್ಯದಲ್ಲಿ ಸಮರ್ಥನಂ ಮೈಸೂರು ತಂಡವು ಸಮರ್ಥನಂ ಧಾರವಾಡ ಟ್ರಸ್ಟ್ ಅನ್ನು 71 ರನ್ ಅಂತರದಿಂದ ಮಣಿಸಿತು.
ರೈಲ್ವೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರಿನ ವಿನ್ಯಾಸ ಟ್ರಸ್ಟ್ 10 ವಿಕೆಟ್‌ಗಳಿಂದ ಸ್ನೇಹದೀಪ ಟ್ರಸ್ಟ್ ತಂಡವನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರಿನ ದೀಪ ಅಕಾಡೆಮಿ ವಿರುದ್ಧ 7 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿತು.
ಅಂಧರ ಶಾಲೆಗೆ ಜಯ: ಬಲಗೈ ಬ್ಯಾಟರ್‌ಗಳಾದ ಸುಬ್ರಮಣಿ (36) ಹಾಗೂ ಎ.ಎಸ್. ಅಭಿ ಅವರ ಆಟದ ನೆರವಿನಿಂದ ಮೈಸೂರು ಅಂಧರ ಶಾಲೆ ತಂಡವು ಚಿಕ್ಕಬಳ್ಳಾಪುರದ ಆಶಾಕಿರಣ ತಂಡದ ವಿರುದ್ಧ 10 ವಿಕೆಟ್ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು.
ಹಾವೇರಿಯ ಕುಮಾರೇಶ್ವರ ಟ್ರಸ್ಟ್ ಬೆಳಗಾವಿಯ ಸಮೃದ್ಧ ಟ್ರಸ್ಟ್ ತಂಡವನ್ನು 10 ವಿಕೆಟ್ ಅಂತರದಿಂದ ಮಣಿಸಿತು. ವಿಜೇತ ತಂಡದ ಪರ ರವಿ ಅಜೇಯ ಅರ್ಧಶತಕ (51) ದಾಖಲಿಸಿದರು.
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ (ಕೆಸಿಎಬಿ) ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯು ಈ ಟೂರ್ನಿ ಆಯೋಜಿಸಿದ್ದು, ಒಟ್ಟು 12 ತಂಡಗಳು ಪಾಲ್ಗೊಂಡಿವೆ.
ಇತರ ಪಂದ್ಯಗಳ ಫಲಿತಾಂಶ: ಬೆಂಗಳೂರಿನ ದೀಪಾ ಅಕಾಡೆಮಿಗೆ ಸ್ನೇಹದೀಪ ಟ್ರಸ್ಟ್ ವಿರುದ್ಧ 10 ವಿಕೆಟ್ ಅಂತರದ ಜಯ; ಚಿಕ್ಕಬಳ್ಳಾಪುರದ ಆಶಾಕಿರಣ ಟ್ರಸ್ಟ್‌ಗೆ 69 ರನ್‌ಗಳಿಂದ ಬೆಂಗಳೂರಿನ ಸ್ನೇಹಜೀವಿ ಟ್ರಸ್ಟ್ ವಿರುದ್ಧ ಗೆಲುವು; ಬೆಳಗಾವಿಯ ಸಮೃದ್ಧ ಟ್ರಸ್ಟ್‌ಗೆ ಶಿವಮೊಗ್ಗದ ಎಸ್‌ಎವಿಕೆ ವಿರುದ್ಧ 49 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.