ಮೈಸೂರು: ಲಾಕ್‌ಡೌನ್ ತೆರವುಗೊಂಡ ಬಳಿಕ ಬಹುತೇಕ ಎಲ್ಲ ವ್ಯಾಪಾರ ವಹಿವಾಟುಗಳು ಚೇತರಿಕೆ ಕಾಣುತ್ತಿದ್ದರೂ ಸ್ಟೇಷನರಿ ಅಂಗಡಿಗಳ ಮಾಲೀಕರು ಮಾತ್ರ ಚಿಂತಾಕ್ರಾಂತರಾಗಿದ್ದಾರೆ.
ಕೋವಿಡ್ ಕಾರಣದಿಂದಾಗಿ ಶಾಲಾ–ಕಾಲೇಜುಗಳು ಆರಂಭಗೊಳ್ಳದ ಕಾರಣ, ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಿರುವುದು ಸ್ಟೇಷನರಿ ಅಂಗಡಿಗಳ ಮೇಲೆ ನೇರ ಪರಿಣಾಮ ಬೀರಿದೆ.
ಅಗ್ರಹಾರ, ಸರಸ್ವತಿಪುರಂ, ಪಡುವಾರಹಳ್ಳಿಯಲ್ಲಿ ಅತಿ ಹೆಚ್ಚು ಸ್ಟೇಷನರಿ, ಜೆರಾಕ್ಸ್ ಅಂಗಡಿಗಳು ಇದ್ದು ಅಲ್ಲಿ ಯಾವಾಗಲೂ ವಿದ್ಯಾರ್ಥಿಗಳ ದಂಡೇ ಸೇರಿರುತ್ತಿತ್ತು. ಅಸೈನ್‌ಮೆಂಟ್, ಪ್ರಾಜೆಕ್ಟ್ ವರ್ಕ್, ಇಂಟರ್‌ನೆಟ್ ಬ್ರೌಸಿಂಗ್, ಪ್ರಿಂಟ್‌ಔಟ್, ಬೈಂಡಿಂಗ್ ಮುಂತಾದ ಕೆಲಸಗಳಿಗೆ ಮುಗಿ ಬೀಳುತ್ತಿದ್ದರು. ಆದರೆ, ಈಗ ಅಲ್ಲಿ ಬಿಕೋ ಎನ್ನುವ ವಾತಾವರಣವಿದೆ.
ಕಳೆದ 5 ತಿಂಗಳಿಂದ ಸರಿಯಾಗಿ ವ್ಯಾಪಾರ ನಡೆಯದ ಕಾರಣ ಮೈಸೂರು ನಗರದಲ್ಲಿ ಹಲವರು ಅನಿವಾರ್ಯವಾಗಿ ಸ್ಟೇಷನರಿ ಅಂಗಡಿಯನ್ನು ದಿನಸಿ ಅಂಗಡಿಗಳನ್ನಾಗಿ ಪರಿವರ್ತಿಸಿದ್ದರೆ, ಕೆಲವರು ಅಂಗಡಿಗಳನ್ನುಶಾಶ್ವತವಾಗಿ ಮುಚ್ಚಿದ್ದಾರೆ.
‘ಶಾಲಾ– ಕಾಲೇಜುಗಳು ಇನ್ನೂ ಆರಂಭಗೊಂಡಿಲ್ಲ. ಅವು ಯಾವಾಗ ಆರಂಭಗೊಳ್ಳುತ್ತವೆಯೋ ಎನ್ನುವ ಖಚಿತತೆಯೂ ಇಲ್ಲ. ಈ ನಡುವೆ ಬಾಡಿಗೆಯನ್ನು ಕಟ್ಟಲಾಗದೆ ಅಂಗಡಿಯನ್ನು ಮುಚ್ಚುತ್ತಿದ್ದೇನೆ’ ಎನ್ನುತ್ತಾರೆ ಹೂಟಗಳ್ಳಿಯ ಸ್ಟೇಷನರಿ ಅಂಗಡಿ ಮಾಲೀಕ ವಸಂತ ಕುಮಾರ್.
‘ಲಾಕ್‌ಡೌನ್ ಆರಂಭದಲ್ಲಿ ಹಾಲು, ಹಣ್ಣು, ತರಕಾರಿ, ಔಷಧ, ದಿನಸಿ ಅಂಗಡಿಗಳನ್ನು ಮಾತ್ರ ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಈ ವೇಳೆ ಸ್ಟೇಷನರಿ ಅಂಗಡಿಯನ್ನು ದಿನಸಿ ಅಂಗಡಿಯನ್ನಾಗಿ ಪರಿವರ್ತಿಸಿದೆವು. ಇಲ್ಲದಿದ್ದರೆ ಬಾಡಿಗೆ ಕಟ್ಟಲೂ ಸಾಧ್ಯವಾಗುತ್ತಿರಲಿಲ್ಲ. ಈಗ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಇದೇ ಅಂಗಡಿಯ ಒಂದು ಭಾಗದಲ್ಲಿ ಲೇಖನ ಸಾಮಗ್ರಿಗಳನ್ನೂ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಾರದಾದೇವಿ ನಗರದ ದಿನಸಿ ಅಂಗಡಿ ಮಾಲೀಕ ರವಿಕುಮಾರ್.
‘ಕಾಲೇಜುಗಳು ನಡೆಯುತ್ತಿದ್ದಾಗ, ಅದರಲ್ಲೂ ಪರೀಕ್ಷೆಗಳ ಕಾಲವಾಗಿರುವ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ವಿದ್ಯಾರ್ಥಿಗಳು ಅಸೈನ್‌ಮೆಂಟ್, ಪ್ರಾಜೆಕ್ಟ್ ವರ್ಕ್ ಮುಂತಾದ ಕಾರಣಗಳಿಗೆ ಜೆರಾಕ್ಸ್ , ಪ್ರಿಂಟ್‌ಔಟ್ ತೆಗೆಯುವುದು, ಬೈಂಡಿಂಗ್, ಲ್ಯಾಮಿನೇಷನ್ ಮುಂತಾದ ಕೆಲಸಗಳನ್ನು ಮಾಡಿಸುತ್ತಿದ್ದರು. ಈಗ ಆನ್‌ಲೈನ್‌ನಲ್ಲೇ ಎಲ್ಲವನ್ನು ಮಾಡುತ್ತಿರುವುದರಿಂದ ವ್ಯಾಪಾರವೇ ಇಲ್ಲವಾಗಿದೆ. ಮುಂದೆ ಏನಾಗುತ್ತದೋ ಎನ್ನುವ ಆತಂಕ ಕಾಡುತ್ತಿದೆ’ ಎನ್ನುತ್ತಾರೆ ಸರಸ್ವತಿಪುರಂನ ಜೆರಾಕ್ಸ್ ಅಂಗಡಿಯೊಂದರ ಹರೀಶ್.
ಶಾಲೆ, ಕಾಲೇಜುಗಳ ಅಕ್ಕಪಕ್ಕದಲ್ಲಿ ಲೇಖನ ಸಾಮಗ್ರಿಗಳ ಅಂಗಡಿಗಳನ್ನು ಇಟ್ಟುಕೊಂಡಿದ್ದವರು ಶಾಲೆ, ಕಾಲೇಜು ಆರಂಭವಾಗುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸೆ.21ರಿಂದ 9ನೇ ತರಗತಿಯಿಂದ 12ನೇ ತರಗತಿ ಆರಂಭಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿರುವುದು ಅವರಲ್ಲಿ ಒಂದಿಷ್ಟು ವಿಶ್ವಾಸ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.