ADVERTISEMENT

ಅರ್ಜುನನೂ... ದೊಡ್ಡಮಾಸ್ತಿಯ ಪ್ರೀತಿಯೂ...

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 6:25 IST
Last Updated 5 ಡಿಸೆಂಬರ್ 2023, 6:25 IST
ಈ ವರ್ಷದ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ‘ಅರ್ಜುನ’ ಆನೆ 
ಈ ವರ್ಷದ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ‘ಅರ್ಜುನ’ ಆನೆ    

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಎಂಟು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ‘ಅರ್ಜುನ’ ಜನರ ಪ್ರೀತಿಯನ್ನು ಗಳಿಸಿದ್ದ. ಮಾವುತರಾಗಿದ್ದ ಕೂಸ ಹಾಗೂ ದೊಡ್ಡಮಾಸ್ತಿಯ ನೆಚ್ಚಿನ ಆನೆಯಾಗಿದ್ದ.

ಈ ಆನೆಯನ್ನು ಸೆರೆ ಹಿಡಿದಾಗ ಅದಕ್ಕೆ 15 ವರ್ಷ ವಯಸ್ಸಾಗಿತ್ತು. ಆಗ, ಮುಂಗೋಪಿಯಾಗಿದ್ದ. ‘ಕ್ರಾಲ್‌’ನಲ್ಲಿ ಪಳಗಿಸಿದ್ದರೂ ಆತನ ಬಳಿಗೆ ಹೋಗಲು ಮಾವುತರು ಭಯಪಡುತ್ತಿದ್ದರು. ಅರಣ್ಯ ಇಲಾಖೆ ಕೂಸ ಎಂಬ ಮಾವುತನನ್ನು ನಿಯೋಜಿಸಿತ್ತು. ಕೂಸ ಆರೈಕೆಯಲ್ಲಿ ಅರ್ಜುನ ಬೆಳೆದ.

ಕೂಸ ನಿವೃತ್ತಿ ನಂತರ ಅರ್ಜುನನ ಆರೈಕೆಯ ಹೊಣೆಗಾರಿಕೆ ದೊಡ್ಡಮಾಸ್ತಿಗೆ ಬಂತು. ಮೂರು ದಶಕ ಪಾಲನೆ ಮಾಡಿದ್ದ ದೊಡ್ಡಮಾಸ್ತಿ, ಹಟ ಹಾಗೂ ಮುಂಗೋಪಿಯಾಗಿದ್ದ ಅರ್ಜುನನ್ನು ಮೃದು ಸ್ವಭಾವಿಯಾಗಿ ಮಾಡಿದರು. ಮಗನಂತೆ ಪ್ರೀತಿಯಿಂದ ನೋಡಿಕೊಂಡಿದ್ದರು. ಅವರು ಹಾಗೂ ಕುಟುಂಬದವರು ತೋರಿದ ಪ್ರೀತಿಗೆ ಅರ್ಜುನ ಮನಸೋತಿದ್ದ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ADVERTISEMENT

ಇತರ ಆನೆಗಳಂತೆ ಅರ್ಜುನನ್ನೂ ಮೇಯಲು ರಾತ್ರಿ ವೇಳೆ ಶಿಬಿರದಿಂದ ಕಾಡಿಗೆ ಕಳುಹಿಸಲಾಗುತ್ತಿತ್ತು. ಮರುದಿನ ಬೆಳಿಗ್ಗೆ ಎಲ್ಲವೂ ಶಿಬಿರಕ್ಕೆ ಮರಳಿದರೆ, ಅರ್ಜುನ ಮಾವುತ ದೊಡ್ಡಮಾಸ್ತಿ ಮನೆಗೆ ಹೋಗುತ್ತಿತ್ತು. ಮಾವುತ ಅಥವಾ ಅವರ ಕುಟುಂಬದವರ ರಾಗಿಮುದ್ದೆ ಅಥವಾ ಚಪಾತಿ ತಿಂದೇ ಶಿಬಿರಕ್ಕೆ ಬರುತ್ತಿತ್ತು ಎನ್ನುತ್ತಾರೆ ಅವರು.

‘ಬಲರಾಮ’ ವಯೋನಿವೃತ್ತಿ ಬಳಿಕ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ ಅರ್ಜುನ, ಒಮ್ಮೆ ಮದವೇರಿದ ಲಕ್ಷಣವಿದ್ದರೂ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದ. ಮಾವುತ ದೊಡ್ಡಮಾಸ್ತಿಯ ಮಾತು ಕೇಳಿದ್ದ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.