ADVERTISEMENT

ಮೊಟ್ಟೆ ಕಡೆಗೇ ವಿದ್ಯಾರ್ಥಿಗಳ ಒಲವು

ಶೇ 84ರಷ್ಟು ಮಂದಿಯಿಂದ ಸೇವನೆ; ಪರ್ಯಾಯವಾಗಿ ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 5:59 IST
Last Updated 13 ಮಾರ್ಚ್ 2024, 5:59 IST
ಕೋಳಿ ಮೊಟ್ಟೆ
ಕೋಳಿ ಮೊಟ್ಟೆ   

ಮೈಸೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ಮೊಟ್ಟೆಗೇ ಸೈ ಎಂದಿದ್ದು, ಶೇ 84ರಷ್ಟು ಮಕ್ಕಳು ಸೇವಿಸುತ್ತಿದ್ದಾರೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಮಕ್ಕಳಿಗೆ ಸರ್ಕಾರವು ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದ ಅಡಿ ವಾರಕ್ಕೆ ಮೂರು ದಿನ ಮೊಟ್ಟೆ ವಿತರಿಸುತ್ತಿದೆ. ಮೊಟ್ಟೆ ತಿನ್ನದ ಸಸ್ಯಾಹಾರಿ ಮಕ್ಕಳಿಗೆ ಬಾಳೆಹಣ್ಣು ಇಲ್ಲವೇ ಶೇಂಗಾ ಚಿಕ್ಕಿ ಸೇವನೆಯ ಅವಕಾಶವನ್ನೂ ನೀಡಿದೆ. ಇದೀಗ ಬಿಸಿಹಾಲಿನ ಜೊತೆಗೆ ರಾಗಿ ಮಾಲ್ಟ್‌ ವಿತರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 2361 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇವೆ. ಪ್ರಸಕ್ತ ಸಾಲಿನಲ್ಲಿ ಇವುಗಳಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟು 1,97,047 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಎಲ್ಲ ಮಕ್ಕಳಿಗೆ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಒಟ್ಟು 1,65,550 ಮಕ್ಕಳು ಮೊಟ್ಟೆ ತಿನ್ನುತ್ತಿದ್ದರೆ, 19,457 ಮಕ್ಕಳು ಮಾತ್ರ ಮೊಟ್ಟೆಗೆ ಬದಲಾಗಿ ಬಾಳೆಹಣ್ಣು ಹಾಗೂ 12,040 ಮಕ್ಕಳು ಶೇಂಗಾ ಚಿಕ್ಕಿ ಸೇವನೆ ಮಾಡುತ್ತಿದ್ದಾರೆ.

ADVERTISEMENT

ಎಲ್ಲಿ ಹೆಚ್ಚು?:

ಪಿರಿಯಾಪಟ್ಟಣ ತಾಲ್ಲೂಕಿನ ಶೇ 94.36 ಮಕ್ಕಳು ಮೊಟ್ಟೆಗೆ ಜೈ ಎಂದಿದ್ದಾರೆ. ಇಲ್ಲಿ 687 (ಶೇ 3.52) ವಿದ್ಯಾರ್ಥಿಗಳು ಬಾಳೆಹಣ್ಣು ಹಾಗೂ 394 ( ಶೇ 2.05) ಮಕ್ಕಳು ಚಿಕ್ಕಿ ರುಚಿ ಸವಿಯುತ್ತಿದ್ದಾರೆ. ಹುಣಸೂರು ತಾಲ್ಲೂಕಿನಲ್ಲಿ ಶೇ 93.36 ರಷ್ಟು ವಿದ್ಯಾರ್ಥಿಗಳು ಮೊಟ್ಟೆ ತಿನ್ನತೊಡಗಿದ್ದಾರೆ. ಇಲ್ಲಿ ಶೇ 4.33 ರಷ್ಟು ಮಕ್ಕಳು ಮಾತ್ರ ಬಾಳೆ ಹಣ್ಣು ಹಾಗೂ ಶೇ 2.30 ಮಕ್ಕಳು ಶೇಂಗಾ ಚಿಕ್ಕಿ ಸೇವಿಸುತ್ತಿದ್ದಾರೆ.

ಎಲ್ಲಿ ಕಡಿಮೆ: ಮೈಸೂರು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಶೇ 61.40 ರಷ್ಟು ಮಕ್ಕಳು ಮಾತ್ರ ಮೊಟ್ಟೆ ಸೇವಿಸುತ್ತಿದ್ದರೆ, ಶೇ 23.27 ಮಕ್ಕಳು ಬಾಳೆ ಹಣ್ಣು ಹಾಗೂ ಶೇ 15.33 ಮಕ್ಕಳು ಚಿಕ್ಕಿ ತಿನ್ನುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.