ADVERTISEMENT

‘ಅರಣ್ಯ ಒತ್ತುವರಿ ಅನಾಹುತಕ್ಕೆ ಮುನ್ನುಡಿ’

ಕೆಆರ್‌ಇಡಿಎಐ ರಾಜ್ಯ ಸಮ್ಮೇಳನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 4:12 IST
Last Updated 25 ಜೂನ್ 2024, 4:12 IST
ಕಾನ್ಫಿಡರೇಶನ್‌ ಆಫ್‌ ರಿಯಲ್‌ ಎಸ್ಟೇಟ್‌ ಡೆವೆಲಪರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಕ್ರೆಡೈ) ವತಿಯಿಂದ ಸೋಮವಾರ ಆಯೋಜಿಸಿದ್ದ ರಾಜ್ಯ ಸಮಾವೇಶವನ್ನು ಶಾಸಕ ತನ್ವೀರ್‌ ಸೇಠ್‌ ಉದ್ಘಾಟಿಸಿದರು. ಕೆ.ಮರಿಗೌಡ, ಕೆ.ಹರೀಶ್‌ ಗೌಡ, ರಾಜ ಶ್ರೀನಿವಾಸ, ರವಿ ಜೇಕಬ್‌, ನಾಗರಾಜ ರೆಡ್ಡಿ, ಟಿ.ಎಸ್‌.ಶ್ರೀವತ್ಸ, ಮಂಜೇಗೌಡ, ಆಸ್ಟಿನ್‌ ರೋಚ್‌ ಭಾಗವಹಿಸಿದ್ದರು – ಪ್ರಜಾವಾಣಿ ವಾರ್ತೆ
ಕಾನ್ಫಿಡರೇಶನ್‌ ಆಫ್‌ ರಿಯಲ್‌ ಎಸ್ಟೇಟ್‌ ಡೆವೆಲಪರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಕ್ರೆಡೈ) ವತಿಯಿಂದ ಸೋಮವಾರ ಆಯೋಜಿಸಿದ್ದ ರಾಜ್ಯ ಸಮಾವೇಶವನ್ನು ಶಾಸಕ ತನ್ವೀರ್‌ ಸೇಠ್‌ ಉದ್ಘಾಟಿಸಿದರು. ಕೆ.ಮರಿಗೌಡ, ಕೆ.ಹರೀಶ್‌ ಗೌಡ, ರಾಜ ಶ್ರೀನಿವಾಸ, ರವಿ ಜೇಕಬ್‌, ನಾಗರಾಜ ರೆಡ್ಡಿ, ಟಿ.ಎಸ್‌.ಶ್ರೀವತ್ಸ, ಮಂಜೇಗೌಡ, ಆಸ್ಟಿನ್‌ ರೋಚ್‌ ಭಾಗವಹಿಸಿದ್ದರು – ಪ್ರಜಾವಾಣಿ ವಾರ್ತೆ   

ಮೈಸೂರು: ‘ಮಾನವ ಪರಿಸರದೊಂದಿಗೆ ಆಟವಾಡುತ್ತಿದ್ದಾನೆ. ಹಣ, ಪ್ರತಿಷ್ಠೆಗಾಗಿ ನೀರಾವರಿ ಪ್ರದೇಶ, ಕಾಡು ಪ್ರದೇಶ ಒತ್ತುವರಿ ಮಾಡುತ್ತಿರುವುದು ಮುಂದಾಗುವ ಅನಾಹುತಕ್ಕೆ ಮುನ್ನುಡಿ ಬರೆಯುವಂತಿದೆ’ ಎಂದು ಶಾಸಕ ತನ್ವೀರ್‌ ಸೇಠ್‌ ಆತಂಕ ವ್ಯಕ್ತಪಡಿಸಿದರು.

ಕಾನ್ಫಿಡರೇಶನ್‌ ಆಫ್‌ ರಿಯಲ್‌ ಎಸ್ಟೇಟ್‌ ಡೆವೆಲಪರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಕ್ರೆಡೈ) ನಗರದ ಹೂಟಗಳ್ಳಿಯಲ್ಲಿಯ ಸೈಲೆಂಟ್‌ ಶೋರೆಸ್‌ ರೆಸಾರ್ಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಸಮಾವೇಶದ‌ಲ್ಲಿ ಅವರು ಮಾತನಾಡಿದರು.

‘ಅಭಿವೃದ್ಧಿಯು ಹೊಸ ಸಮಸ್ಯೆ ಹುಟ್ಟಿಸಬಾರದು. ಸರ್ಕಾರ ರೂಪಿಸಿರುವ ನಿಯಮ ಮೀರಿ ಎಂಜಿನಿಯರ್‌ಗಳು ಕಟ್ಟಡ ನಿರ್ಮಿಸುತ್ತಿದ್ದಾರೆ. ಸರಿಯಾದ ನೀರು, ಒಳ ಚರಂಡಿ, ವಾಹನ ನಿಲುಗಡೆ ಇರದಿದ್ದಾಗ ಕಟ್ಟಡವನ್ನು ದೂರುತ್ತೇವೆ. ಆರಂಭದಲ್ಲೇ ನಿಯಮಬದ್ಧವಾಗಿ ಕಟ್ಟಡ ನಿರ್ಮಿಸಿದರೆ ಸಮಸ್ಯೆಗಳನ್ನು ದೂರವಿಡಬಹುದು’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಜನ ದಟ್ಟಣೆ ಹೆಚ್ಚುತ್ತಿದೆಯೆಂಬ ಕೂಗು ಅನೇಕ ವರ್ಷದಿಂದ ಕೇಳಿ ಬರುತ್ತಲೇ ಇದೆ. ಆದರೆ ಅಲ್ಲಿನ ಎಲ್ಲಾ ಭಾಗಗಳನ್ನೂ ವಿಸ್ತರಿಸುತ್ತಿದ್ದು, ಕಟ್ಟಡ ನಿರ್ಮಾಣವನ್ನು ನಿಲ್ಲಿಸಿಲ್ಲ. ಕಟ್ಟಡ ನಿರ್ಮಾಣ ನಗರದ ಅಭಿವೃದ್ಧಿಗೆ ಎಷ್ಟು ಪೂರಕವಾಗಿದೆ ಎಂಬುದನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಯನ್ನು ಮೈಸೂರಿನಲ್ಲಿ ಅಳವಡಿಸಲು ಯೋಚಿಸಿದಾಗ ಅದಕ್ಕಾಗಿ ಸುಮಾರು 100 ಎಕರೆ ಜಾಗದ ಅವಶ್ಯವಿತ್ತು. ಇಂತಹ ಯೋಜನೆಗಳು ನಗರಕ್ಕೆ ಅವಶ್ಯವೇ ಎಂಬ ಪರಾಮರ್ಶೆ ಅಗತ್ಯ. ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಪ್ರೀಮಿಯರ್‌ ಎಫ್‌ಐಆರ್‌ ಯೋಜನೆ ಬಗ್ಗೆ ಮಂಡಿಸಿದ್ದು, ಅದರ ರೂಪುರೇಷೆ ಸಿದ್ಧವಾಗುತ್ತಿದೆ. ಕಟ್ಟಡ ಕಟ್ಟಿದ ನಂತರದ ನಿರ್ವಹಣೆಯ ಬಗ್ಗೆ ಇಲ್ಲಿ ಗಮನ ಹರಿಸಲಾಗಿದೆ’ ಎಂದು ಹೇಳಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘ಬಿಲ್ಡರ್ಸ್‌ ಕಟ್ಟಡ ನಿರ್ಮಾಣದ ಸಮಯದಲ್ಲಿ ‘ಡಬಲ್‌ ಟ್ಯಾಕ್ಸ್‌ ಡೈವರ್ಷನ್‌’ ಮಾಡಿರುವುದರಿಂದ ಅಲ್ಲಿನ ನಿವಾಸಿ ಎರಡೆರಡು ತೆರಿಗೆ ಕಟ್ಟಬೇಕಾದ ಸಮಸ್ಯೆ ಎದುರಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಆ್ಯಕ್ಟ್‌ (ರೆರಾ) ಮೂಲಕ ನೋಂದಣಿಯಾದ ಬಿಲ್ಡರ್‌ಗಳು ಸಮಯಕ್ಕೆ ಕಟ್ಟಡ ಕೆಲಸ ಪೂರ್ಣ ಮಾಡದ ಬಗ್ಗೆ 1,400 ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 900 ಪ್ರಕರಣಗಳಷ್ಟೇ ಇತ್ಯರ್ಥವಾಗಿದೆ. ರೆರಾದಲ್ಲಿ ಸಿಬ್ಬಂದಿ ಕೊರತೆಯಿದೆ. ಅವರಿಗೆ ಬಿಲ್ಡರ್ಸ್‌ಗಳಿಂದ ಜನರಿಗೆ ಹಣ ವಾಪಸ್‌ ಕೊಡಿಸುವ ಅಧಿಕಾರವಿಲ್ಲ. ಇದರಿಂದ ಜನರಿಗೆ ಸಮಸ್ಯೆ ಹೆಚ್ಚಿದ್ದು, ಶಾಶ್ವತ ಪರಿಹಾರದ ಅಗತ್ಯವಿದೆ’ ಎಂದರು.

‘ಜನಸಾಮಾನ್ಯರ ಕೈಗೆಟಕುವ ಮನೆ ನಿರ್ಮಾಣ ಮಾಡುವ ಯೋಜನೆಗಳು ರೂಪಿಸಬೇಕು. ವಿಧಾನಸಭೆಯಲ್ಲಿ ನಾವು ಅದನ್ನು ಸದನದ ಗಮನಕ್ಕೆ ತರುತ್ತೇವೆ ಹಾಗೂ ಬಿಲ್ಡರ್ಸ್‌ ಅಸೋಸಿಯೇಷನ್‌ನವರು ನಗರದ ಹತ್ತು ವೃತ್ತಗಳನ್ನು ಅಭಿವೃದ್ಧಿ ಪಡಿಸಲು ನಮ್ಮೊಂದಿಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಕೆ.ಹರೀಶ್‌ ಗೌಡ, ವಿಧಾನ ಪರಿಷತ್‌ ಸದಸ್ಯ ಮಂಜೇಗೌಡ, ಮುಡಾ ಅಧ್ಯಕ್ಷ ಕೆ.ಮರಿಗೌಡ, ಕ್ರೆಡೈ ಸಂಸ್ಥೆಯ ರಾಷ್ಟ್ರೀಯ ಸಹ ಕಾರ್ಯದರ್ಶಿ ರಾಜ ಶ್ರೀನಿವಾಸ, ಕೇರಳದ ಅಧ್ಯಕ್ಷ ರವಿ ಜೇಕಬ್‌, ಮಾಜಿ ರಾಷ್ಟ್ರೀಯ ಅಧ್ಯಕ್ಷ ನಾಗರಾಜ ರೆಡ್ಡಿ, ಕರ್ನಾಟಕದ ಪದಾಧಿಕಾರಿಗಳಾದ ಆಸ್ಟಿನ್‌ ರೋಚ್‌, ಭಾಸ್ಕರ್‌ ನಾಗೇಂದ್ರಪ್ಪ, ಸುರೇಶ್‌ ಹರಿ, ಮೈಸೂರು ಘಟಕದ ಅಧ್ಯಕ್ಷ ಶ್ರೀ ಹರಿ ಡಿ., ಎನ್‌.ಎಸ್‌.ಮುರಳೀಧರ, ಅರುಣ್‌ ಪಂಡಿತ್‌, ಸಮ್ಮೇಳನ ಆಯೋಜನ ಸಮಿತಿ ಅಧ್ಯಕ್ಷ ಬಿ.ಧನಂಜಯ, ಕಾರ್ಯದರ್ಶಿ ಕೆ.ಎನ್‌.ರವಿಶಂಕರ್‌ ಇದ್ದರು.

ಕಿರಿದಾದ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ’ ‘

ಕಿರಿದಾದ ಪ್ರದೇಶಗಳಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿದ್ದು ರಸ್ತೆ ಅಗಲ ಕಡಿಮೆ ಒಳಚರಂಡಿ ವ್ಯವಸ್ಥೆಯ ನಿರ್ಲಕ್ಷ್ಯ ವಾಹನ ನಿಲುಗಡೆಗೆ ಕಡಿಮೆ ಸ್ಥಳಾವಕಾಶಗಳನ್ನು ನೀಡಿ ಕಟ್ಟಡ ನಿರ್ಮಿಸುತ್ತಾರೆ. ಇದರಿಂದ ಅಪಾಯವೇ ಹೆಚ್ಚು. ಸಮಸ್ಯೆಯಾದ ಬಳಿಕ ದೂಷಣೆ ಮಾಡುವುದರ ಬದಲಾಗಿ ಕಟ್ಟಡ ನಿರ್ಮಾಣಕ್ಕಾಗಿ ಎಲ್ಲಾ ಬಿಲ್ಡರ್‌ಗಳು ಯೋಜನೆ ರೂಪಿಸಿ ನಿಯಮ ಪಾಲಿಸುವುದು ಒಳಿತು’ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದರು.

ಕಟ್ಟಡ ಎತ್ತರದ ನಿರ್ಬಂಧ ಸಡಿಲಿಸಿ’ ‘ಡಿಜಿಟಲೀಕರಣವು ಉತ್ತಮ ನಡೆಯಾಗಿದೆ. ಆದರೆ ಬಿಲ್ಡರ್ಸ್ ಕಂದಾಯ ಪಾಲಿಕೆ ಮುಂತಾದ ಇಲಾಖೆಗೆ ತೆರಳಿದಾಗ ಸರ್ವರ್‌ ಸಮಸ್ಯೆ ಕಾಡುತ್ತಿದೆ. ಅದನ್ನು ಸರಿಪಡಿಸಲು ಸರ್ಕಾರ ಕಾರ್ಯೋನ್ಮುಖವಾಗಬೇಕು. ಸ್ಥಳೀಯ ನಗರಾಭಿವೃದ್ಧಿ ಸಂಸ್ಥೆಗಳು ಕಟ್ಟಡದ ಎತ್ತರದ ಬಗ್ಗೆ ನೀಡಿರುವ ನಿರ್ಬಂಧ ಸಡಿಲಿಸಬೇಕು. ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಹೊರ ರಾಜ್ಯದ ಕಾರ್ಮಿಕರನ್ನು ನೆಚ್ಚಿಕೊಳ್ಳಬೇಕಾಗಿದೆ. ಸರ್ಕಾರ ರಾಜ್ಯದಲ್ಲಿ ಕೌಶಲ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಇಲ್ಲಿನ ಜನರಿಗೆ ಉದ್ಯೋಗ ದೊರೆಯುವಂತೆ ಮಾಡಬೇಕು’ ಎಂದು ಕ್ರೆಡೈ ಕರ್ನಾಟಕದ ಅಧ್ಯಕ್ಷ ಪ್ರದೀಪ್‌ ಡಿ.ರಾಯ್ಕರ್‌ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.