ADVERTISEMENT

ರಾಕೆಟ್ ತಂತ್ರಜ್ಞಾನ ಭಾರತದ ಹೆಮ್ಮೆ: ಇಸ್ರೋ ವಿಜ್ಞಾನಿ ಎಂ.ವಿ.ರೂಪಾ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:25 IST
Last Updated 7 ಜುಲೈ 2024, 14:25 IST
ಮೈಸೂರಿನ ಟೆರೇಶಿಯನ್ ಬಾಲಕಿಯರ ಪ್ರೌಢಶಾಲೆಯಿಂದ ನಡೆದ ವಿದ್ಯಾರ್ಥಿ–ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿ ಎಂ.ವಿ.ರೂಪಾ ಮಾತನಾಡಿದರು
ಮೈಸೂರಿನ ಟೆರೇಶಿಯನ್ ಬಾಲಕಿಯರ ಪ್ರೌಢಶಾಲೆಯಿಂದ ನಡೆದ ವಿದ್ಯಾರ್ಥಿ–ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿ ಎಂ.ವಿ.ರೂಪಾ ಮಾತನಾಡಿದರು   

ಮೈಸೂರು: ‘ವಿಶ್ವದಲ್ಲಿ ರಾಕೆಟ್ ತಂತ್ರಜ್ಞಾನ ಹೊಂದಿರುವ ಕೇವಲ ಆರು ದೇಶಗಳಲ್ಲಿ ಭಾರತವು ಒಂದಾಗಿದೆ ಎಂಬುದು ನಮ್ಮ ಹೆಮ್ಮೆ’ ಎಂದು ಇಸ್ರೋ ವಿಜ್ಞಾನಿ ಎಂ.ವಿ.ರೂಪಾ ಹೇಳಿದರು.

ನಗರದ ಟೆರೇಶಿಯನ್ ಬಾಲಕಿಯರ ಪ್ರೌಢಶಾಲೆ, ಮೈಸೂರ್ ಸೈನ್ಸ್ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ವಿದ್ಯಾರ್ಥಿ–ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.

‘ಚಂದ್ರಯಾನ– 1, ಚಂದ್ರಯಾನ– 2, ಚಂದ್ರಯಾನ– 3 ಮತ್ತು ಮಂಗಳಯಾನದಂತಹ ಯೋಜನೆಗಳು ವಿಶ್ವವನ್ನೇ ತಿರುಗಿ ನೋಡುವಂತೆ ಮಾಡಿವೆ. ಇಸ್ರೋ ಪ್ರಾರಂಭವಾದ ದಿನಗಳಲ್ಲಿ ಉಪಗ್ರಹ ಉಡಾವಣೆಗಳಿಗೆ ಬೇರೆ ದೇಶಗಳ ಸಹಾಯ ಕೋರಬೇಕಾಗಿತ್ತು. ಇಂದು ಭಾರತ ಎಲ್ಲಾ ಹಂತಗಳಲ್ಲೂ ಸ್ವಂತವಾಗಿ ರಾಕೆಟ್ ಮತ್ತು ಉಪಗ್ರಹ ತಯಾರು ಮಾಡಿ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ’ ಎಂದು ತಿಳಿಸಿದರು.

ADVERTISEMENT

‘ಬೇರೆ ದೇಶಗಳು ಭಾರತಕ್ಕೆ ಬಂದು ಅವರ ಉಪಗ್ರಹ ಉಡಾವಣೆ ಮಾಡುತ್ತಿವೆ. ಕಾರಣ ಭಾರತದ ತಂತ್ರಜ್ಞಾನವು ಅತ್ಯುನ್ನತವಾಗಿದ್ದು, ಸಫಲತೆಯ ಪ್ರಮಾಣ ಹೆಚ್ಚಾಗಿದೆ. ಭಾರತ ಇನ್ನೂ ಸಾಧಿಸಬೇಕಾದ್ದು ಬಹಳಷ್ಟು ಇದ್ದು, ಆ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ. ಭವಿಷ್ಯದ ವಿಜ್ಞಾನಿಗಳಾದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡಬೇಕಾಗಿದೆ. ಭಾರತವನ್ನು ಮುಂಚೂಣಿಯ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಪಣತೊಡಬೇಕಾಗಿದೆ’ ಎಂದರು.

ಶಾಲಾ ಆಡಳಿತಾಧಿಕಾರಿಯಾದ ಸಿಸ್ಟರ್ ಅನಿಸ್, ಎಂ.ಎಸ್.ಎಫ್ ಕಾರ್ಯದರ್ಶಿ ಜಿ.ಬಿ.ಸಂತೋಷ ಕುಮಾರ್, ಸದಸ್ಯರಾದ ಎಚ್.ವಿ.ಮುರಳೀಧರ, ಶಾಲಾ ಮುಖ್ಯ ಶಿಕ್ಷಕರಾದ ಜಾಯ್, ಎಂ.ಎಸ್.ಎಫ್ ಕ್ಲಬ್ ಸಂಯೋಜಕಿ ಮಮತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.