ADVERTISEMENT

ಗುಬ್ಬಚ್ಚಿ ದಿನ|ಹುಣಸೂರು: ಕಡೆಮನುಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ಗುಬ್ಬಿ ಚಿಲಿಪಿಲಿ

ವಿಶ್ವ ಗುಬ್ಬಚ್ಚಿ ದಿನ| ಹುಣಸೂರು: ಕಡೆಮನುಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ಗುಬ್ಬಿಗಳದೇ ಕಲರವ

ಎಚ್.ಎಸ್.ಸಚ್ಚಿತ್
Published 20 ಮಾರ್ಚ್ 2023, 6:07 IST
Last Updated 20 ಮಾರ್ಚ್ 2023, 6:07 IST
ಹುಣಸೂರು ತಾಲ್ಲೂಕಿನ ಕಡೆಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಗೂಡಿನಲ್ಲಿ ಗುಬ್ಬಚ್ಚಿಗಳ ಕಲರವ
ಹುಣಸೂರು ತಾಲ್ಲೂಕಿನ ಕಡೆಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಗೂಡಿನಲ್ಲಿ ಗುಬ್ಬಚ್ಚಿಗಳ ಕಲರವ   

ಹುಣಸೂರು: ತಾಲ್ಲೂಕಿನ ಕಡೆಮನುಗನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಗುಬ್ಬಚ್ಚಿಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ನಾಲ್ಕು ವರ್ಷಗಳಿಂದ ಶಾಲೆ ಅಂಗಳದಲ್ಲಿ ಗುಬ್ಬಚ್ಚಿ ಗೂಡು ನಿರ್ಮಿಸಿ, ಅವುಗಳಿಗೆ ಬೇಕಾದ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ.

8ನೇ ತರಗತಿಯ ಧನುಷ್, 9ನೇ ತರಗತಿಯ ಕಲ್ಪನಾ, ಅಕ್ಷತ್ ಕುಮಾರ್, ಸ್ವಪ್ನಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ತಮ್ಮ ಮನೆ, ಕೈದೋಟಗಳಲ್ಲೂ ಗೂಡು ನಿರ್ಮಿಸಿ ಗುಬ್ಬಚ್ಚಿಗಳು ವಾಸಿಸುವಂತೆ ಮಾಡಿದ್ದಾರೆ. ಇಡೀ ಗ್ರಾಮದಲ್ಲಿ ಗುಬ್ಬಚ್ಚಿಗಳದ್ದೇ ಕಲರವ.

‘ಗುಬ್ಬಚ್ಚಿ ಬೀಜ ತಿನ್ನುವ ಹಕ್ಕಿ. ದಪ್ಪ ಹಾಗೂ ಗಟ್ಟಿ ಬೀಜವನ್ನು ಸುಲಭವಾಗಿ ಒಡೆದು ತಿನ್ನುವ ತ್ರಿಕೋನಾಕೃತಿಯ ಕೊಕ್ಕು ಹೊಂದಿರುವ ಪುಟ್ಟ ಹಕ್ಕಿ. ಗುಬ್ಬಚ್ಚಿ ಗಂಡು ಮತ್ತು ಹೆಣ್ಣು ಜೊತೆಯಲ್ಲೇ ಜೀವಿಸುತ್ತವೆ. ಹೆಣ್ಣು ಗುಬ್ಬಚ್ಚಿ ವರ್ಷಕ್ಕೆ ನಾಲ್ಕು ಬಾರಿ ಮೊಟ್ಟೆ ಇಟ್ಟು ಮರಿ ಮಾಡಿ ಸಂತಾನೋತ್ಪತ್ತಿ ಮಾಡುತ್ತದೆ. ಆಹಾರ ಪೂರೈಕೆ ಜವಾಬ್ದಾರಿ ಗಂಡು ಗುಬ್ಬಿಯದ್ದು. ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳನ್ನು ಸಂರಕ್ಷಣೆ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ’ ಎಂದು ‌ಧನುಷ್ ‘ಪ್ರಜಾವಾಣಿ’ಗೆ ತಿಳಿಸಿದನು.

ADVERTISEMENT

‌‘ಗುಬ್ಬಚ್ಚಿಗಳು ಕಿರಾಣಿ ಅಂಗಡಿ ಹಾಗೂ ಅಕ್ಕಿ ಗಿರಣಿಗಳಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದವು. ಈಗ ಅಲ್ಲಿಯೂ ಕಣ್ಮರೆಯಾಗಿವೆ. ಕಿರಾಣಿ ಅಂಗಡಿಯಲ್ಲಿ ಸಿದ್ಧಪಡಿಸಿದ ಪ್ಯಾಕೆಟ್ ಆಹಾರ, ಮಾರ್ಡನ್ ಅಕ್ಕಿ ಗಿರಣಿಯಿಂದಾಗಿ ಕಾಳುಗಳು ಸಿಗುತ್ತಿಲ್ಲ. ಕೃಷಿಯಲ್ಲಿ ಔಷಧೋಪಚಾರ ಬಳಕೆಯಿಂದ ಹುಳು, ಕೀಟಗಳು ನಾಶವಾಗುತ್ತಿವೆ. ಇದಲ್ಲದೆ ಮೊಬೈಲ್ ನೆಟ್‌ವರ್ಕ್‌ ತರಂಗಗಳಿಂದಲೂ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದನು.

***‌

ಗುಬ್ಬಚ್ಚಿ ಪ್ರಕೃತಿಯ ಒಂದು ಭಾಗ. ಈ ಪಕ್ಷಿಯನ್ನು ಸಂರಕ್ಷಿಸಲು ಜಾಗೃತಿ ಮೂಡಿಸಬೇಕು. ರೈತಸ್ನೇಹಿ ಗುಬ್ಬಚ್ಚಿ ಸಂತತಿಯನ್ನು ಹೆಚ್ಚಿಸಬೇಕು.

–ಅಕ್ಷತ್ ಕುಮಾರ್, 9ನೇ ತರಗತಿ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.