ADVERTISEMENT

ವಿವೇಕಾನಂದರ ಹೆಸರಿನಲ್ಲಿ ಅವಿವೇಕಿಗಳು ಕೆಲಸ ಮಾಡುತ್ತಿದ್ದಾರೆ: ಎಚ್.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 13:01 IST
Last Updated 26 ನವೆಂಬರ್ 2022, 13:01 IST
   

ಮೈಸೂರು: ‘ವಿವೇಕಾನಂದರ ಹೆಸರಿನಲ್ಲಿ ಅವಿವೇಕಿಗಳು ಕೆಲಸ ಮಾಡುತ್ತಿದ್ದಾರೆ. ದೊಡ್ಡವರ ಹೆಸರಿನಲ್ಲಿ ಇತಿಹಾಸ ತಿರುಚಲಾಗುತ್ತಿದೆ. ವಿವೇಕ ಕೊಠಡಿಗಳಿಗೆ ಪಕ್ಷದ ಬಣ್ಣ ಬಳಿಯೋದರಿಂದ ಏನು ಪ್ರಯೋಜನ? ಸಿದ್ಧಾಂತವನ್ನು ಶಾಲಾ ಮಕ್ಕಳ ಮೇಲೆ ಹೇರುವುದು ಅಪವಿತ್ರ ಕಾರ್ಯ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಹೇಳಿದರು.

‘ರಾಜ್ಯದಲ್ಲಿ 9 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಕುಲಪತಿ ನೇಮಕಕ್ಕೆ ₹5 ಕೋಟಿ ನಡೆಯುತ್ತಿದೆ. ಶಾಲಾ– ಕಾಲೇಜುಗಳಲ್ಲಿ ಶಿಕ್ಷಣದ ಹರಣವಾಗುತ್ತಿದೆ. ನೇಮಕಾತಿ ಹಾಗೂ ಕಟ್ಟಡ ನಿರ್ಮಾಣದ ಅಧಿಕಾರ ಕುಲಪತಿಗೆ ನೀಡಬಾರದು. ಅದರಿಂದ ಭ್ರಷ್ಟ ಕುಲಪತಿಗಳು ಬರುವುದು ತಪ್ಪುತ್ತದೆ’ ಎಂದು ಶನಿವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತ್ಯೇಕ ಹಣಕಾಸು ಸಚಿವ ಬೇಕು

ADVERTISEMENT

‘ಮುಖ್ಯಮಂತ್ರಿ ಬಳಿಯಲ್ಲಿ ಯಾವ ಖಾತೆಗಳು ಇರುತ್ತವೆಯೋ ಆ ಖಾತೆಗಳು ಸತ್ತಂತೆ. ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರು ಇರಬೇಕು’ ಎಂದು ವಿಶ್ವನಾಥ್‌ ಪ್ರತಿಪಾದಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 8ರಿಂದ 10 ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಹಣಕಾಸು ಖಾತೆ ನಿಭಾಯಿಸುವುದಕ್ಕೆ ಹೆಚ್ಚು ಸಮಯ ಬೇಕು. ಪಕ್ಕದ ಆಂಧ್ರ, ತಮಿಳುನಾಡಿನಲ್ಲಿ ಪ್ರತ್ಯೇಕ ಸಚಿವರು ಇದ್ದಾರೆ. ಡಿ.ದೇವರಾಜ ಅರಸು ಅಂತಹವರೇ ಖಾತೆ ನಿಭಾಯಿಸಲಾಗದೇ ಬೇರೊಬ್ಬರಿಗೆ ನೀಡಿದ್ದರು’ ಎಂದರು.

‘ಮುಖ್ಯಮಂತ್ರಿ ಮೂಗಿನ ಅಡಿಯಲ್ಲಿರುವ ತೆರಿಗೆ ಇಲಾಖೆಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಆಡಳಿತದ ಮೇಲಿನ ಹಿಡಿತ ಸಡಿಲವಾಗಿದೆ. ಉಪ್ಪಿನ ಮೇಲೂ ಜಿಎಸ್‌ಟಿ ವಿಧಿಸಲಾಗಿದೆ. ತಂಬಾಕು, ಕಬ್ಬಿಣ ಉತ್ಪನ್ನಗಳ ತೆರಿಗೆಯು ಕಳ್ಳದಾರಿ ಹಿಡಿದಿದೆ. ಸೋರಿಕೆ ತಡೆಗಟ್ಟಲು ಮುಂದಾಗದೇ ಸಾಲ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.