ADVERTISEMENT

ಡೆಂಗಿ ನಿಯಂತ್ರಣಕ್ಕೆ ಕ್ರಮ: ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:18 IST
Last Updated 29 ಜೂನ್ 2024, 16:18 IST
ಮೈಸೂರಿನಲ್ಲಿ ಡೆಂಗಿ ನಿಯಂತ್ರಣದ ಜಾಗೃತಿಗೆ ಆರೋಗ್ಯ ಇಲಾಖೆಯಿಂದ ಸಿದ್ಧಪಡಿಸಿರುವ ಪ್ರಚಾರ ಸಾಮಗ್ರಿಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಅಧಿಕಾರಿಗಳು ಶನಿವಾರ ಬಿಡುಗಡೆ ಮಾಡಿದರು
ಮೈಸೂರಿನಲ್ಲಿ ಡೆಂಗಿ ನಿಯಂತ್ರಣದ ಜಾಗೃತಿಗೆ ಆರೋಗ್ಯ ಇಲಾಖೆಯಿಂದ ಸಿದ್ಧಪಡಿಸಿರುವ ಪ್ರಚಾರ ಸಾಮಗ್ರಿಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಅಧಿಕಾರಿಗಳು ಶನಿವಾರ ಬಿಡುಗಡೆ ಮಾಡಿದರು   

ಮೈಸೂರು: ‘ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಇದರಿಂದ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿವೆ. 3,493 ಮಂದಿಗೆ ಪರೀಕ್ಷೆ ನಡೆಸಿದ್ದು ಇದರಲ್ಲಿ 481 ಜನರಿಗೆ ಡೆಂಗಿ ಪ್ರಕರಣಗಳು ಕಂಡುಬಂದಿವೆ. ಫೆಬ್ರುವರಿ, ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಶೇ 18ರಷ್ಟಿತ್ತು. ಈಗ ಶೇ 11ಕ್ಕೆ ಪ್ರಕರಣಗಳು ಇಳಿದಿವೆ’ ಎಂದು ತಿಳಿಸಿದರು.

‘ಡೆಂಗಿ ಪ್ರಕರಣಗಳು ಹೆಚ್ಚಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಬಸ್ ಡಿಪೊಗಳು, ಚರಂಡಿಗಳು, ಹಳೆಯ ಟೈರ್‌ಗಳು, ತೆಂಗಿನ ಚಿಪ್‌ಗಳಲ್ಲಿ, ತೊಟ್ಟಿಗಳಲ್ಲಿ ನೀರು ಬಹಳ ಕಾಲದವರೆಗೆ ಸಂಗ್ರಹಗೊಳ್ಳದಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜನರಿಗೆ ಈ ಕುರಿತು ಅರಿವು ಮೂಡಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಸ್ಥಳೀಯ ಸಂಸ್ಥೆಗಳಿಂದ ನಿಯಮಿತವಾಗಿ ಫಾಗಿಂಗ್ ಮಾಡಿಸಬೇಕು. ಶುದ್ಧ ಕುಡಿಯುವ ನೀರು ಪೂರೈಸುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪ್ರತಿ ದಿನವೂ ಪರಿಶೀಲಿಸಬೇಕು. ನೀರಿನ ಟ್ಯಾಂಕ್ ಹಾಗೂ ಓವರ್ ಹೆಡ್ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು’ ಎಂದು ಸೂಚಿಸಿದರು.

‘ಡೆಂಗಿ ಕುರಿತು ಜನರಲ್ಲಿ ಆತಂಕ ಬೇಡ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಖಾಸಗಿ ಆಸ್ಪತ್ರೆಗಳು ಡೆಂಗಿ ಪ್ರಕರಣಗಳ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿಗದಿತ ದರವನ್ನು ಮಾತ್ರ ವಿಧಿಸಬೇಕು. ಹೆಚ್ಚಿನ ದರ ಪಡೆದರೆ ಸಂಬಂಧಿಸಿದ ಆಸ್ಪತ್ರೆ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.