ಮೈಸೂರಿನ ವಿದ್ಯಾ ಕ್ಷೇತ್ರದಲ್ಲಿ ಬಿ.ಎಸ್.ಪಂಡಿತರ ಹೆಸರು ಚಿರಪರಿಚಿತ. ಶೈಕ್ಷಣಿಕ ವಲಯದಲ್ಲಿ ಅವರ ಸಾಧನೆಯ ಹೆಗ್ಗುರುತಾಗಿ ಗೀತಾ ಶಿಶು ಶಿಕ್ಷಣ ಸಂಸ್ಥೆಗಳು ತಲೆಎತ್ತಿ ನಿಂತಿವೆ. ಹೆಣ್ಣು ಮಕ್ಕಳಿಗಾಗಿಯೇ ಇರುವ ಈ ಶಿಕ್ಷಣ ಸಂಸ್ಥೆಗಳ ಶಾಖೆಗಳು ಹತ್ತಾರು ವಿಷಯಗಳಲ್ಲಿ ಅವರನ್ನು ಸಮರ್ಥರನ್ನಾಗಿಸುತ್ತಿವೆ. ಇದು ಪಂಡಿತರ ದೂರದರ್ಶಿತ್ವದ ನಿದರ್ಶನ. ಅವರು ತೀರಿಕೊಂಡ ಹಲವು ವರ್ಷಗಳ ನಂತರ ಇದೀಗ ಗೀತಾ ಶಿಶು ಶಿಕ್ಷಣ ಸಂಘವು ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಸಂಗೀತ ಕಛೇರಿಯನ್ನು ಏರ್ಪಡಿಸಿ, ಅವರಿಗೆ ನಾದ ನಮನವನ್ನು ಸಮರ್ಪಿಸಲು ನಿರ್ಧರಿಸಿದೆ. ಅದರ ಪ್ರಾರಂಭವು ನಾಡಿನ ಖ್ಯಾತ ಸಂಗೀತ ವಿದುಷಿ ಸುಧಾ ರಘುನಾಥನ್ ಅವರ ಸಂಗೀತ ಕಛೇರಿಯಿಂದ ಇದೇ ನ.16ರಂದು ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮೈಸೂರಿನ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಿದರು.
ಸುಧಾ ರಘುನಾಥನ್ ಸಂಗೀತ ಪ್ರೇಮಿಗಳಿಗೆ ತೀರಾ ಸುಪರಿಚಿತರು. ಆಕರ್ಷಕ ಕಂಠ ಮತ್ತು ವಿದುಷಿ ಎಂ.ಎಲ್.ವಸಂತಕುಮಾರಿಯವರ ಪಟ್ಟ ಶಿಷ್ಯೆ ಎಂಬ ಕಾರಣವೂ ಅವರ ಜನಪ್ರಿಯತೆಗೆ ಕಾರಣವಾಗಿತ್ತು. ತಮ್ಮ ಸಂಗೀತದ ಪಯಣದ ಉತ್ತುಂಗದಲ್ಲಿ ಸಾಕಷ್ಟು ಕಾಲವಿದ್ದ ಅವರ ಗಾಯನ ಕಛೇರಿಗಳು ಸ್ವಲ್ಪ ಅಪರೂಪ ಆಗತೊಡಗಿದ್ದೂ ಅಂದಿನ ರಸಿಕರ ಕುತೂಹಲಕ್ಕೆ ಕಾರಣವಾಗಿದ್ದಿರಬಹುದು. ಒಟ್ಟಾರೆ ನೆರೆದ ಅವರ ಅಭಿಮಾನಿಗಳ ನಿರೀಕ್ಷೆಯು ನಿರಾಸೆ ಆಗದಂತೆ ಸುಧಾ ಅವರು ತಮ್ಮ ಎಂದಿನ ಜನಪ್ರಿಯ ಧಾಟಿಯಲ್ಲಿ ಹಾಡಿ ರಸಿಕರನ್ನು ತಣಿಸಿದರು. ಕಂಠದಲ್ಲಿ ಮೊದಲಿನ ಮಾಧುರ್ಯ ಕಾಣಬರದಿದ್ದರೂ ಒಟ್ಟಾರೆ ಆಕರ್ಷಣೆಗೇನೂ ಕೊರತೆ ಇರಲಿಲ್ಲ. ಅಂದು ಅವರು ವಿದುಷಿ ಚಾರುಮತಿ ರಘುರಾಂ ಅವರ ಪಿಟೀಲು, ವಿದ್ವಾಂಸರಾದ ಎನ್.ಸಿ.ಭಾರದ್ವಾಜ್ ಅವರ ಮೃದಂಗ ಮತ್ತು ಆರ್.ರಾಮನ್ ಅವರ ಮೋರ್ಚಿಂಗ್‍ಗಳ ಪಕ್ಕವಾದ್ಯದೊಡನೆ ತಮ್ಮ ಕಛೇರಿಯನ್ನು ಪ್ರಸ್ತುತ ಪಡಿಸಿದರು.
ಅಂದು ಸುಧಾ ಅವರು ತಮ್ಮ ಕಛೇರಿಗೆ ವಿವಿಧ ವಾಗ್ಗೇಯಕಾರರ, ಅದರಲ್ಲೂ ಕರ್ನಾಟಕದ ವಾಗ್ಗೇಯಕಾರರ ರಚನೆಗಳನ್ನು ಮುಖ್ಯವಾಗಿ ಆಯ್ದುಕೊಂಡಿದ್ದರು. ಮುತ್ತಯ್ಯ ಭಾಗವತರ ಖ್ಯಾತ ದರು- ‘ಮಾತೆ ಮಲಯಧ್ವಜ’ದಿಂದ (ಖಮಾಚ್) ಕಛೇರಿಯನ್ನು ಆರಂಭಿಸಿ, ಜಯಚಾಮರಾಜೇಂದ್ರ ಒಡೆಯರ ಅಠಾಣ ರಾಗದ ‘ಶ್ರೀ ಮಹಾ ಗಣಪತಿಂ ಭಜೇಹಂ’ನೊಡನೆ ಮುಂದುವರೆಸಿದರು. ಅದಕ್ಕೆ ಒಪ್ಪುವ ಕಲ್ಪನಾ ಸ್ವರಗಳೂ ಜೊತೆಗೂಡಿದವು. ಪುರಂದರ ದಾಸರ ನಾಟ ರಾಗದ ‘ಜಯಜಯ ಜಾನಕೀಕಾಂತ’ವೂ ಸ್ವರಗಳೊಡನೆ ಒಪ್ಪವಾಗಿ ಮೂಡಿಬಂದಿತು. ಸಾವಕಾಶವಾದ ಹಿಂದೋಳ ರಾಗಾಲಾಪನೆಯು ಹೆಚ್ಚಾಗಿ ದೀರ್ಘ ಸ್ವರಗಳೊಡನೆಯೇ ಪ್ರಾರಂಭವಾಯಿತು. ವೇಗದ ಸಂಗತಿಗಳನ್ನು ಕ್ಲುಪ್ತಗೊಳಿಸಿ, ಎಚ್ಚರಿಕೆಯಿಂದ ಹಾಡುತ್ತಿರುವುದು ಸೂಕ್ಷ್ಮವಾಗಿ ಕಂಡುಬರುತ್ತಿತ್ತು. ಮಂದ್ರ ಸ್ಥಾಯಿಯಿಂದ ತಾರದವರೆಗೆ ಲೀಲಾಜಾಲವಾಗಿ ಸಂಚರಿಸುತ್ತಿದ್ದ ಶಾರೀರ. ‘ಸರಸ್ವತಿ’ ಎಂದು ಸೊಗಸಾಗಿ ಆರಂಭಿಸಿ, ಮೈಸೂರು ವಾಸುದೇವಾಚಾರ್ಯರ ‘ಮಾಮವತುಶ್ರೀ ಸರಸ್ವತಿ’ ಕೀರ್ತನೆಯು ಮತ್ತೊಂದು ಸ್ವಾರಸ್ಯಕರ ಅಂಶವನ್ನೂ ಒಳಗೊಂಡಿತ್ತು. ‘ಕೋಮಳಕರ ಸರೋಜಧೃತವೀಣಾ’ ಎಂಬಲ್ಲಿ ನೆರವಲ್ ಮಾಡಿ, ‘ಸರಸ್ವತಿ’ ಎಂಬ ಪದವನ್ನು ಎಡುಪಾಗಿಸಿಕೊಂಡು ಸ್ವರ ಕಲ್ಪನೆ ಮಾಡಿದರು. ಅಂದರೆ, ತಾಳದ ಉತ್ತರಾರ್ಧವು ಎಡುಪಾಗಿತ್ತು.
ಮುಂದೆ ಊತ್ತುಕಾಡು ವೆಂಕಟಸುಬ್ಬಯ್ಯರ್ ಅವರ ‘ತಾಯೆ ಯಶೋದ ಉಂದನ್’ (ತೋಡಿ) ಅನ್ನು ಹಾಡಿ ನಂತರ ಪೂರ್ವಿಕಲ್ಯಾಣಿ ರಾಗಾಲಾಪನೆಗೆ ತೊಡಗಿದರು. ಅನುಭವದಿಂದ ಮಾಗಿದ ಅವರ ಸಂಗೀತವು ರಂಜನೀಯತೆಯ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲದು. ಹೀಗಾಗಿ ಯಾವ ಅವಸರವಿಲ್ಲದ ಮಂದಗಾಮಿನಿಯಂತೆ ಸಾಗಿದ ಆಲಾಪನೆಯು ರಂಜಿಸುವುದರಲ್ಲಿ ಹಿಂದುಳಿಯಲಿಲ್ಲ. ‘ಪರಮ ಪಾವನ ರಾಮ’ ಕೀರ್ತನೆಯು ಬಿಕ್ಕಟ್ಟಾಗಿ ಕಲ್ಪನಾ ಸ್ವರಗಳೊಡನೆ ಮೂಡಿಬಂದಿತು. ಚಾರುಮತಿ ರಘುರಾಮ್ ಅವರ ಪಿಟೀಲು ಸಹ ಹಾಡುಗಾರಿಕೆಗೆ ತಕ್ಕ ಪಕ್ಕವಾದ್ಯವಾಗಿ ಪರಿಣಮಿಸಿತ್ತು.
ಭಾರದ್ವಾಜ್ ಮತ್ತು ರಾಮನ್ ಅವರ ತನಿ ಆವರ್ತನವೂ ಸ್ವಾರಸ್ಯಕರವಾಗಿತ್ತು. ರಾಮನ್ ಅವರು ಕೈಗಳನ್ನು ಬಳಸದೆಯೇ ಮೋರ್ಚಿಂಗ್‍ನಲ್ಲಿ ಹೊರಡಿಸುತ್ತಿದ್ದ ಜತಿಯ ಶಬ್ದಗಳು ಕುತೂಹಲಕರವಾಗಿದ್ದವು.
ಯಮುನಕಲ್ಯಾಣಿಯಲ್ಲಿ ಶ್ಲೋಕ ಒಂದನ್ನು ಹಾಡಿ ‘ಹರಿಸ್ಮರಣೆ ಮಾಡೊ ನಿರಂತರ’ ಎಂಬ ದೇವರನಾಮ, ಮೀರಾ ಭಜನ್ ‘ಮೇರೆ ತೋ ಗಿರಿಧರ್ ಗೋಪಾಲ’, ಅತ್ಯಂತ ಜನಪ್ರಿಯ ಹಾಡು ‘ಬ್ರಹ್ಮಂ ಒಕಟೆ’, ‘ವೆಂಕಟಾಚಲನಿಲಯಂ’ ಮತ್ತು ಬಾಲಮುರಳಿಕೃಷ್ಣರ ಒಂದು ತಿಲ್ಲಾನದೊಂದಿಗೆ ಸುಧಾ ರಘುನಾಥನ್ ಅವರು ತಮ್ಮ ಗಾಯನ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.