ADVERTISEMENT

ಕಬ್ಬು ಬೆಳೆಗಾರರ ಜಾಗೃತಿ ಸಮಾವೇಶ 18ಕ್ಕೆ: ಕುರುಬೂರು ಶಾಂತಕುಮಾರ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:26 IST
Last Updated 16 ಜುಲೈ 2024, 4:26 IST
ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ‍ಪತ್ರ ನೀಡಿದರು
ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ‍ಪತ್ರ ನೀಡಿದರು   

ಮೈಸೂರು: ‘ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ರೈತ ವಿರೋಧಿ ನೀತಿ ಖಂಡಿಸಿ ಕಾರ್ಖಾನೆ ಮುಂಭಾಗ ಜುಲೈ 18ರಂದು ಬೆಳಿಗ್ಗೆ 11ಕ್ಕೆ ಕಬ್ಬು ಬೆಳೆಗಾರರ ಜಾಗೃತಿ ಸಮಾವೇಶ ನಡೆಸುತ್ತೇವೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಪತ್ರ ನೀಡಿದರು.

ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಕಾರ್ಖಾನೆಯು ಕಳೆದ ವರ್ಷದ ಕಬ್ಬಿನ ಉಪ ಉತ್ಪನ್ನದ ಲಾಭ ರೈತರಿಗೆ ಹಂಚಿಕೆ ಮಾಡಬೇಕು. 2022– 23ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ನಿಗದಿಗೊಳಿಸಿದಂತೆ ಕಬ್ಬಿನ ಹೆಚ್ಚುವರಿ ಎಫ್‌ಆರ್‌ಪಿ ದರ ₹150ನ್ನು ಕೂಡಲೇ ವಿತರಿಸಬೇಕು. 6 ವರ್ಷದಿಂದ ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಉಪ ಉತ್ಪನ್ನದ ಲಾಭವಿಲ್ಲ ಎಂದು ಸುಳ್ಳು ಹೇಳುತ್ತಿರುವ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ಜಾರಿ ಮಾಡಿದ ದ್ವಿಪಕ್ಷೀಯ ಒಪ್ಪಂದದ ಡಿಜಿಟಲೀಕರಣ ಮಾಡಿ, ಆ್ಯಪ್‌ ತಯಾರಿಸಬೇಕು. ಕಬ್ಬಿನ ತೂಕದಲ್ಲಿ ಮೋಸವಾಗುತ್ತಿರುವುದನ್ನು ತಪ್ಪಿಸಲು ಸರ್ಕಾರದ ವತಿಯಿಂದ ಡಿಜಿಟಲ್‌ ತೂಕದ ಯಂತ್ರ ಅಳವಡಿಸಬೇಕು. ಸರ್ಕಾರ ಸೂಚಿಸಿದಕ್ಕಿಂತ ಹೆಚ್ಚು ಕಬ್ಬು ಕಟಾವು ಹಾಗೂ ಸಾಗಣಿಕೆ ವೆಚ್ಚ ಕಡಿತಗೊಳಿಸಿ ಸುಲಿಗೆ ಮಾಡುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಬ್ಬು ಕಾರ್ಖಾನೆಗೆ ತಲುಪಿದ ತಕ್ಷಣ ಎಸ್ಎಂಎಸ್‌ ಮೂಲಕ ತೂಕ ತಿಳಿಸುವ ಯೋಜನೆ ಜಾರಿಯಾಗಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕಬ್ಬು ಕಟಾವಿನ ಕೂಲಿಯನ್ನು ತೂಕದ ಚೀಟಿಯಲ್ಲಿ ನಮೂದಿಸಬೇಕು. ಪ್ರಸಕ್ತ ಸಾಲಿನಲ್ಲಿ ಕಬ್ಬು ಉತ್ಪಾದನೆ ಕಡಿಮೆಯಾಗಿದ್ದು, ರೈತರು ಆತಂಕ ಪಡಬೇಕಾಗಿಲ್ಲ. ಬೇರೆ ಜಿಲ್ಲೆಯ ಕಾರ್ಖಾನೆಗಳು ಉತ್ತಮ ಬೆಲೆ ನೀಡಲು ಮುಂದಾಗಿದ್ದು ಈ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಮಾವೇಶ ಆಯೋಜಿಸುತ್ತಿದ್ದೇವೆ. ಗದಗ ಜಿಲ್ಲೆಯ ವೀರನಗೌಡ ಪಾಟೀಲ ಮಾತನಾಡಲಿದ್ದಾರೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ರೈತರನ್ನು ವಂಚಿಸುತ್ತಿರುವ ಬಣ್ಣಾರಿ ಅಮ್ಮನ್‌ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದರು.

ಸಂಘದ ಅತ್ತಹಳ್ಳಿ ದೇವರಾಜು, ಬರಡನಪುರ ನಾಗರಾಜ್‌, ಕಿರಗಸೂರು ಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.