ಮೈಸೂರು: ‘ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್‌ಡಿಜಿ) ಅನುಷ್ಠಾನದಲ್ಲಿ ರಾಜಿ ಮಾಡಿಕೊಳ್ಳಬಾರದು’ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸದಸ್ಯ ಪ್ರೊ.ಶಿವರಾಜ್ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಅಂತರರಾಷ್ಟ್ರೀಯ ಅಭಿವೃದ್ಧಿ ಪರಿಷತ್‌ನಿಂದ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸುಸ್ಥಿರ ಅಭಿವೃದ್ಧಿಯಲ್ಲಿ ಸಮಸ್ಯೆ ಮತ್ತು ಸವಾಲುಗಳು’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು 2015ರಲ್ಲಿ ರೂಪಿಸಿದ್ದ ‘2030 ಕಾರ್ಯಸೂಚಿ’ಯ ಭಾಗವಾಗಿ ಒಟ್ಟು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಿಗದಿಪಡಿಸಲಾಗಿದೆ. 2030ರೊಳಗೆ ಈ ಗುರಿಗಳನ್ನು ಸಾಧಿಸಲು 193 ರಾಷ್ಟ್ರಗಳು ಸಹಿ ಹಾಕಿವೆ’ ಎಂದರು.
‘ಬಡತನ ನಿರ್ಮೂಲನೆ, ಹಸಿವು ಮುಕ್ತಗೊಳಿಸುವುದು, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಛ ನೀರು ಮತ್ತು ನೈರ್ಮಲ್ಯ, ಅಗ್ಗವಾದ ಮತ್ತು ಶುದ್ಧ ಶಕ್ತಿ, ಉದ್ಯಮ, ಆವಿಷ್ಕಾರ ಮತ್ತು ಮೂಲಸೌಕರ್ಯ ಒದಗಿಸುವುದು, ಅಸಮಾನತೆ ನಿರ್ಮೂಲನೆ, ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ, ಹವಾಮಾನ ಬದಲಾವಣೆ ತಡೆಗಟ್ಟುವಿಕೆ, ಜಲ ಹಾಗೂ ಭೂಮಿ ಮೇಲಿನ ಜೀವರಾಶಿಗಳ ಸಂರಕ್ಷಣೆ, ಶಾಂತಿ, ನ್ಯಾಯ ಮತ್ತು ಸದೃಢ ಸಂಸ್ಥೆಗಳ ಸ್ಥಾಪನೆ ಹಾಗೂ ಗುರಿ ಮುಟ್ಟಲು ಸಹಭಾಗಿತ್ವ ಪಡೆಯುವ ಅಂಶಗಳ ಅನುಷ್ಠಾನಕ್ಕೆ ಒತ್ತು ನೀಡಬೇಕು’ ಎಂದು ಹೇಳಿದರು.
ವೆಸ್ಟ್ ಆಫ್ ಇಂಗ್ಲೆಂಡ್ ವಿಶ್ವವಿದ್ಯಾಲಯದ ಸಂಶೋಧನಾ ಸಲಹೆಗಾರ್ತಿ ಡಾ.ಸಂಧ್ಯಾ ಶಾಸ್ತ್ರಿ ಮಾತನಾಡಿ, ‘ಜಾಗತಿಕ ವ್ಯಾಪಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 25ರಷ್ಟು ಹೆಚ್ಚಳವಾಗಿದ್ದು, 30 ಲಕ್ಷ ಕೋಟಿ ಡಾಲರ್‌ಗೆ ಮುಟ್ಟಿದೆ. ಕೋವಿಡ್ ಪರಿಣಾಮ 2021ರಲ್ಲಿ ಜಾಗತಿಕ ವ್ಯಾಪಾರ ಸ್ವಲ್ಪ ನಲುಗಿತ್ತು. ಈಗ ಆರ್ಥಿಕ ಕ್ಷೇತ್ರ ಪುನಶ್ಚೇತನಗೊಳ್ಳುತ್ತಿದೆ. ಆದರೆ, ಉಕ್ರೇನ್ ಮೇಲೆ ರಷ್ಯಾ ದಾಳಿ, ತೈವಾನ್ ಸ್ವಾಧೀನಕ್ಕೆ ಚೀನಾ ಸೇನಾ ಬೆದರಿಕೆ ಹಾಕುತ್ತಿರುವುದು ಸಹ ಜಾಗತಿಕ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದರು.
ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’, ಹೃದ್ರೋಗ ತಜ್ಞ ಡಾ.ಸುದರ್ಶನ್ ಅವರಿಗೆ ‘ಉತ್ತಮ ವೈದ್ಯ ಪ್ರಶಸ್ತಿ’, ಡಾ.ಕಿರಣ್ ರೆಡ್ಡಿ ಅವರಿಗೆ ‘ಉತ್ತಮ ಶಿಕ್ಷಣ ಪ್ರಶಸ್ತಿ’, ಡಾ.ಸೋಮಶೇಖರ್ ಅವರಿಗೆ ‘ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಮ್ಮೇಳನದ ಜರ್ನಲ್ ಅನ್ನು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಬಿಡುಗಡೆ ಮಾಡಿದರು. ಯುಎಸ್‌ಒ ಗ್ಲೋಬಲ್ ಡಿಜಿಟಲ್ ವಿಶ್ವವಿದ್ಯಾಲಯದ ಕುಲಪತಿ ಡಾ.ಹರಿಕೃಷ್ಣ ಮರಮ್, ಬೆಂಗಳೂರಿನ ಸಿದ್ಧಾರ್ಥ ವಿಶ್ವವಿದ್ಯಾಲಯದ ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ, ಫ್ರಾನ್ಸ್‌ನ ರೆನ್ಸ್ ಸ್ಕೂಲ್ ಆಫ್ ಬಿಸಿನೆಸ್‌ನ ಮೌಡ್ ಲಿ ಬಾರ್ಸ್, ಕೆಎಸ್‌ಒಯು ಪ್ರಭಾರ ಕುಲಸಚಿವ ಡಾ.ಎ.ಖಾದರ್ ಪಾಷಾ, ಮುಕ್ತ ವಿವಿ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ಆರ್.ಎಚ್.ಪವಿತ್ರಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.