ಮೈಸೂರು: ‘ರಾಜ್ಯ ಸರ್ಕಾರವು ಬಸವಣ್ಣ ಅವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ತೀರ್ಮಾನಿಸಿರುವುದು ಜನತೆಗೆ ಸಂತೋಷ ತಂದಿದೆ’ ಎಂದು ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಅಭೂತಪೂರ್ವ ಶರಣ ಚಳವಳಿಯ ಮುಂಚೂಣಿಯಲ್ಲಿ ನಿಂತು ಸರ್ವ ಸಮಾನತೆ ತರ ಬಯಸಿದ ಬಸವಣ್ಣ ಒಬ್ಬ ಸೀಮಾಪುರುಷ. ಜಾತಿ ವ್ಯವಸ್ಥೆ, ಅದರ ಮೂಲಕ ಪ್ರಬಲವಾಗಿದ್ದ ಮೇಲು-ಕೀಳುಗಳ ಪರಿಗಣನೆಯನ್ನು ಸ್ಪಷ್ಟವಾಗಿ ನಿರಾಕರಿಸಿದರು. ಆವರೆಗೆ ಸಮಾಜದ ಅತ್ಯಂತ ಕೆಳಸ್ತರದಲ್ಲಿದ್ದ ಎಲ್ಲರನ್ನೂ ಅಣ್ಣ, ಅಪ್ಪ ಎಂದು ಕರೆದರು. ಹಾಗೆಯೇ ಲಿಂಗಸಮಾನತೆಯನ್ನು ಸಾರಿದರು’ ಎಂದು ಸ್ಮರಿಸಿದ್ದಾರೆ.
‘ಭಕ್ತಿಭಂಡಾರಿಯಾಗಿದ್ದ ಅವರು ಕಾಯಕ, ದಾಸೋಹಗಳ ಮೂಲಕ ಹೊಸ ಸಮಾಜ ನಿರ್ಮಿಸಿದರು. ಅಧ್ಯಾತ್ಮ ಜ್ಞಾನವನ್ನು ಮಾತೃ ಭಾಷೆ ಕನ್ನಡದಲ್ಲೂ ಹೇಳಬಹುದೆಂದು ತೋರಿಸಿಕೊಟ್ಟರು. ದಲಿತರು, ಮಹಿಳೆಯರು ತಮ್ಮ ಸಾಧನೆಗಳ ವಿಚಾರ ವಿನಿಮಯಕ್ಕೆ ಮಹಾಮನೆಯ ಆಶ್ರಯವಿತ್ತು. ಅಲ್ಲಿ ಹೊಟ್ಟೆಗೂ ಆಹಾರ, ಚಿಂತನೆಗೂ ಆಹಾರ! ಅವರು ಮಾಡಿದ ಅನುಭವ ಮಂಟಪದ ಅಂಗಳದಲ್ಲಿ ಜಿಜ್ಞಾಸುಗಳ ಸಂವಾದ ನಡೆಯುತ್ತಿತ್ತು. ಜನಕಲ್ಯಾಣವನ್ನು ಸಾಧಿಸಿದ ಕಲ್ಯಾಣದಲ್ಲಿ ಜನರು ಎಲ್ಲರನ್ನೂ ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎನ್ನತೊಡಗಿದರು. ಇಂತಹ ಎಲ್ಲರ ಬಾಳಿನ ಬೆಳಕಾಗಿದ್ದ ಬಸವಣ್ಣ ಅವರನ್ನು ಗೌರವಿಸಿರುವ ಸರ್ಕಾರಕ್ಕೆ ಸಮಸ್ತರ ಅಭಿನಂದನೆ ಸಲ್ಲುತ್ತದೆ. ಇದರೊಂದಿಗೆ ಸಮ ಸಮಾಜದ ಕನಸು ನನಸು ಮಾಡಲು ಎಲ್ಲರೂ ತ್ರಿಕರಣಪೂರ್ವಕವಾಗಿ ಶ್ರಮಿಸುವುದು ಅಗತ್ಯವಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.