ಮೈಸೂರು: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಅದ್ದೂರಿ ಚಾಲನೆ ದೊರೆಯಿತು. ತಳಿರು– ತೋರಣ, ದೀಪಾಲಂಕೃತಗೊಂಡಿದ್ದ ಸುತ್ತೂರು ಗ್ರಾಮವು ಉತ್ಸವದ ಸಂಭ್ರಮದಲ್ಲಿ ಮಿಂದಿತು.
ಎಲ್ಲರ ಮನೆ ಮುಂದೆಯೂ ರಂಗೋಲಿ ಚಿತ್ತಾರ ಆಕರ್ಷಿಸಿತು. ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಹರಿದು ಬಂದ ಭಕ್ತರು, ಕೃಷಿ ಮೇಳ, ವಸ್ತುಪ್ರದರ್ಶನದ ಅರಿವಿನ ಹೂರಣ ಸವಿದರು. ದಿನವಿಡೀ ಧಾರ್ಮಿಕ ಕಾರ್ಯಗಳು ನಡೆದವು.
ಗ್ರಾಮದ ಮಠದ ಆವರಣದಿಂದ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯನ್ನು ಜಾನಪದ ಕಲಾತಂಡಗಳೊಂದಿಗೆ ಕತೃಗದ್ದುಗೆಗೆ ಕರೆತರುವ ಮೂಲಕ ಸಂಜೆ ಜಾತ್ರಾ ಮಹೋತ್ಸವ ಆರಂಭವಾಯಿತು. ವೀರಭದ್ರೇಶ್ವರ ಕೊಂಡೋತ್ಸವವನ್ನು ಗ್ರಾಮಸ್ಥರಲ್ಲದೇ ಸುತ್ತಮುತ್ತಲ ಹತ್ತೂರುಗಳ ಭಕ್ತರು ಆಗಮಿಸಿ ಕಣ್ತುಂಬಿಕೊಂಡರು.
ಕೃಷಿಮೇಳ, ವಸ್ತುಪ್ರದರ್ಶನ, ಕೃಷಿ ಬ್ರಹ್ಮಾಂಡ, ಆರೋಗ್ಯ ತಪಾಸಣಾ ಶಿಬಿರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರೆ, ಸಾಂಸ್ಕೃತಿಕ ಮೇಳವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.
ಬರದಲ್ಲೂ ಭರ್ಜರಿ ಫಸಲು ತೆಗೆಯುವ ‘ಸುಸ್ಥಿರ ಕೃಷಿ’ ಮಾರ್ಗವನ್ನು ಕೃಷಿಮೇಳ ತೆರೆದಿಟ್ಟರೆ, ಒಂದು ಎಕರೆಯಲ್ಲಿ ಸೃಷ್ಟಿಸಿದ ‘ಕೃಷಿ ಬ್ರಹ್ಮಾಂಡ’ದಲ್ಲಿ ತಾಕುಗಳು, ಬೆಳೆಗಳು ರೈತರಿಗೆ ಆರ್ಥಿಕ ಸ್ವಾವಲಂಬನೆಯ ದಾರಿ ತೋರಿದವು.
ನಿತ್ಯ ಸುಮಾರು ಮೂರು ಲಕ್ಷ ಮಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸ್ವಯಂಸೇವಕರು, ಮಠ ಮತ್ತು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹಾಗೂ ಭಕ್ತರು ವಿವಿಧ ಕೆಲಸಗಳಲ್ಲಿ ನಿರತರಾಗಿದ್ದರು.
ಕತೃಗದ್ದುಗೆ ಸಮೀಪ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ವಾಂಸ ಪೆರ‍್ರಿ ಸೆಲ್ವಿನ್ ಫಿಲಿಯೊಜಾ ಮಾತನಾಡಿ, ‘ಸಂಸ್ಕೃತ, ಶೈವಾಗಮನ ಕಲಿಯಲು 1955ರಲ್ಲಿ ಫ್ರಾನ್ಸ್ ನ ಪ್ಯಾರೀಸ್ ನಿಂದ ಭಾರತಕ್ಕೆ ಬಂದೆ. ದೇಶದ ಶ್ರೇಷ್ಠ ಸಂಸ್ಕೃತಿಯ ಪರಿಚಯವಾಯಿತು. ಮೀಮಾಂಸೆ, ವ್ಯಾಕರಣ, ಶಾಸ್ತ್ರ, ವೇದಾಂತ, ನ್ಯಾಯ ಕಲಿಕೆ ವಿಶಿಷ್ಠ ಅನುಭೂತಿ ನೀಡಿವೆ’ ಎಂದರು.
ಇತಿಹಾಸ ತಜ್ಞೆ ವಸುಂಧರಾ ಫಿಲಿಯೋಜಾ, ‘ಕನ್ನಡ ನಾಡಿನ ಸಂಸ್ಕೃತಿ ಉಳಿಸಿಕೊಳ್ಳಬೇಕು. ನಮ್ಮ ಭಾಷೆ ಪ್ರಭಾವ ತೆಲುಗು, ತಮಿಳು ಸೇರಿದಂತೆ ದ್ರಾವಿಡ ಭಾಷೆಗಳಲ್ಲದೇ ಕಾಂಬೋಡಿಯಾ ಲಿಪಿ ಮೇಲೂ ಇದೆ’ ಎಂದು ಹೇಳಿದರು.
- ಸಾಮೂಹಿಕ ವಿವಾಹ ಇಂದು ಫೆ.7ರ ಬುಧವಾರ ಬೆಳಿಗ್ಗೆ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. 3 ಸಾವಿರ ಮಂದಿ ಸತಿಪತಿ ಆಗಲಿದ್ದಾರೆ. ಅಂತರ್ಜಾತಿ ವಿಶೇಷ ವ್ಯಕ್ತಿಗಳು ಹಾಗೂ ಹೊರ ರಾಜ್ಯಗಳ ವಧು-ವರರು ಪಾಲ್ಗೊಳ್ಳಲಿದ್ದಾರೆ. ವಧುವಿಗೆ ಸೀರೆ ಕುಪ್ಪಸ ಮಾಂಗಲ್ಯ ಹಾಗೂ ಕಾಲುಂಗುರ ವರನಿಗೆ ಪಂಚೆ ವಲ್ಲಿ ಅಂಗಿ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.