ಮೈಸೂರು: ಭಕ್ತರ ಅರಿವಿನ ಜಾತ್ರೆಯಾದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಅಂತಿಮಗೊಂಡಿದೆ. ಧಾರ್ಮಿಕ ಹಾಗೂ ಆಧ್ಯಾತ್ಮದ ಅನುಭೂತಿಯ ಜೊತೆಗೆ ಶಿಕ್ಷಣ, ಜಾಗೃತಿ ಮೂಡಿಸುವ ಉತ್ಸವ ಫೆ.6ರಿಂದ 6 ದಿನ ನಡೆಯಲಿದ್ದು, ನಾಡಿನ ಮೂಲೆಗಳಿಂದ ಭಕ್ತ ಸಾಗರ ಹರಿದು ಬರಲಿದೆ.
ಕಪಿಲಾ ನದಿ ದಂಡೆಯಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳು ಸ್ಥಾಪಿಸಿದ ‘ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ’ ಮಠದಲ್ಲಿ ಹಬ್ಬದ ವಾತಾವರಣ ಮೂಡಿದೆ. ಸಾವಿರಾರು ಭಕ್ತರು ಕಾಯಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಯಂ ಸೇವಕರಾಗಿ ನಿವೃತ್ತರು, ರೈತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೆವರು ಹರಿಸಿದ್ದಾರೆ.
ವಸ್ತುಪ್ರದರ್ಶನ, ಕೃಷಿಮೇಳ, ಸಾಂಸ್ಕೃತಿಕ ಮೇಳ, ದೋಣಿ ವಿಹಾರ, ಆರೋಗ್ಯ ತಪಾಸಣೆ, ಸಾಮೂಹಿಕ ವಿವಾಹ, ಭಜನಾಮೇಳ, ದೇಸಿ ಆಟಗಳು, ರಂಗೋಲಿ ಸ್ಪರ್ಧೆ ಸೇರಿದಂತೆ ಸಾಲು ಸಾಲು ಕಾರ್ಯಕ್ರಮಗಳು ಜನರನ್ನು ಆಕರ್ಷಿಸಲಿವೆ.
ಕೇರಳ, ತಮಿಳುನಾಡು, ಆಂಧ್ರ ಸೇರಿದಂತೆ ಎಲ್ಲೆಡೆಯಿಂದ ಬರುವ ಭಕ್ತರಿಗಾಗಿ ದಾಸೋಹ ವ್ಯವಸ್ಥೆ ಮಾಡಲಾಗಿದೆ. ‘ಜಾತ್ರೆ ನಡೆದರೆ ಭಕ್ತರ ಮನೆಯ ಒಲೆ ಉರಿಯುವುದಿಲ್ಲ’ ಎಂಬುದು ನಾಣ್ಣುಡಿ. ಏಕೆಂದರೆ, ಹತ್ತೂರಿನ ಭಕ್ತರೆಲ್ಲ ಸುತ್ತೂರು ಮಠದಲ್ಲೇ ಇರುತ್ತಾರೆ.
ಸೋಮವಾರ ಗದ್ದುಗೆಗೆ ಪೂಜೆ ಸಲ್ಲಿಸಿ, ಮಹಾದಾಸೋಹ ನಡೆಯುವ ಸ್ಥಳಕ್ಕೆ ಬಂದು ಅಲ್ಲಿಯೂ ಪೂಜೆ ಸಲ್ಲಿಸಿ ಅನ್ನ ದಾಸೋಹಕ್ಕೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು.
ಹಲವು ವಿಶೇಷ: ಜಾತ್ರೆಯ ಒಂದೊಂದು ದಿನವೂ ವಿಶೇಷ. ಮಠದಿಂದ ಕತೃ ಗದ್ದುಗೆಗೆ ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿ ತರುವುದರೊಂದಿಗೆ ಜಾತ್ರೆಯು ಆರಂಭಗೊಳ್ಳತ್ತದೆ. ಉತ್ಸವ ಮೂರ್ತಿಯ ಮೆರವಣಿಗೆ ನಡೆಯುತ್ತದೆ.
ಮೊದಲ ದಿನವೇ (ಫೆ.6) ವಸ್ತುಪ್ರದರ್ಶನ, ಕೃಷಿ ಬ್ರಹ್ಮಾಂಡ, ಆರೋಗ್ಯ ತಪಾಸಣಾ ಶಿಬಿರ, ಸಾಂಸ್ಕೃತಿಕ ಮೇಳ, ದೋಣಿವಿಹಾರ ಉದ್ಘಾಟನೆಯಾಗಲಿದೆ. ವೀರಭದ್ರೇಶ್ವರ ಕೊಂಡೋತ್ಸವವೂ ನಡೆಯುತ್ತದೆ. 7ರ ಬುಧವಾರ ಸಾಮೂಹಿಕ ವಿವಾಹ ನಡೆಯಲಿದೆ. ಅಂದೇ ರಾಜ್ಯ ಮಟ್ಟದ ಭಜನಾ ಮೇಳ, ದೇಸಿ ಆಟಗಳು, ಸೋಬಾನೆ ಪದ ಹಾಗೂ ರಂಗೋಲಿ ಸ್ಪರ್ಧೆ ಆರಂಭವಾಗಲಿದೆ. ಹಾಲ್ಹರವಿ ಉತ್ಸವ ನಡೆಯಲಿದೆ.
ಧಾರ್ಮಿಕ ಸಭೆ ಹಾಗೂ ರಥೋತ್ಸವವು ಫೆ.8ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಕಲಾಪ್ರದರ್ಶನ ಹಾಗೂ ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಲಿದೆ. 55 ಅಡಿ ಎತ್ತರದ ಹೊಸ ರಥದಲ್ಲಿ ಶಿವರಾತ್ರೀಶ್ವರರ ಉತ್ಸವಮೂರ್ತಿ ಪ್ರತಿಷ್ಠಾಪಿಸಿ, ಹುಮ್ಮಸ್ಸು, ಸಡಗರ, ಭಕ್ತಿಭಾವದಿಂದ ರಥೋತ್ಸವ ನಡೆಯುತ್ತದೆ. ಭಕ್ತರು ರಥಕ್ಕೆ ಹಣ್ಣು-ಜವನ ಅರ್ಪಿಸಿ ಕೈಮಗಿಯುತ್ತಾರೆ.
ಆರೂ ದಿನ ಶಿವರಾತ್ರೀಶ್ವರ ಕತೃಗದ್ದುಗೆ, ಸೋಮೇಶ್ವರ, ಶಂಕರನಾರಾಯಣ, ವೀರಭದ್ರೇಶ್ವರ, ನಾರಾಯಣಸ್ವಾಮಿ ದೇಗುಲಗಳಲ್ಲಿ ತ್ರಿಕಾಲ ಪೂಜೆ, ಧಾರ್ಮಿಕ ಉತ್ಸವಗಳು ನಡೆಯುತ್ತವೆ.
ಫೆ.9ರಂದು ಕೃಷಿ ವಿಚಾರ ಸಂಕಿರಣ, ಬರಗಾಲವಾದ್ದರಿಂದ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಕುಸ್ತಿ ಪಂದ್ಯಾವಳಿಯೂ ನಡೆಯಲಿದ್ದು, ನಾಡಿನ ವಿವಿಧೆಡೆಯ ಪೈಲ್ವಾನರು ಸಾಹಸ ಮೆರೆಯಲಿದ್ದಾರೆ. 4ನೇ ದಿನ ಮಹದೇಶ್ವರ ಕೊಂಡೋತ್ಸವ, ಲಕ್ಷದೀಪೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಗದ್ದುಗೆಯ ಮುಂಭಾಗದಲ್ಲಿ ನಡೆಯುವ ದೀಪೋತ್ಸವ ವಿಶೇಷ ಅನುಭೂತಿ ನೀಡುತ್ತದೆ.
ಫೆ.10ರ ಸಂಜೆ ತೆಪ್ಪೋತ್ಸವ ನೋಡಲು ಕಪಿಲಾ ನದಿ ದಂಡೆಯ ಎರಡೂ ಬದಿ ನಿಲ್ಲುವ ಭಕ್ತರು, ಬಾಣ ಬಿರುಸುಗಳನ್ನು ಕಣ್ತುಂಬಿಕೊಳ್ಳುವರು. ಜಾತ್ರೆಯ ಕೊನೆಯ ದಿನ (ಫೆ.11) ಎಲ್ಲ ಸ್ಪರ್ಧೆಗಳು, ಗ್ರಾಮೀಣ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಮೇಳದ ಸಮಾರೋಪ ನಡೆಯುತ್ತದೆ. ಉತ್ಸವಮೂರ್ತಿಯನ್ನು ಕತೃಗದ್ದುಗೆಯಿಂದ ಶ್ರೀಮಠಕ್ಕೆ ಮತ್ತೆ ಕರೆತರಲಾಗುತ್ತದೆ.
ಪೊಲೀಸ್ ಬಂದೋಬಸ್ತ್: ಜಾತ್ರೆಯ ಹಿನ್ನೆಲೆಯಲ್ಲಿ ಸುತ್ತೂರಿನಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೋಮವಾರ ಬೆಳಿಗ್ಗೆಯೇ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಮಳೆ ಅಭಾವದಿಂದ ರಾಜ್ಯವು ಬರಪೀಡಿತ ಆಗಿರುವುದರಿಂದ ಸುತ್ತೂರು ಜಾತ್ರೆಯ ಕೃಷಿಮೇಳದಲ್ಲಿ ಹನಿ ಹಾಗೂ ತುಂತುರು ನೀರಾವರಿಯಲ್ಲಿ ಬೆಳೆಯಬಹುದಾದ ಬೆಳೆಗಳು ಹಾಗೂ ತರಕಾರಿಗಳ ಬಗ್ಗೆ ವಿಶೇಷ ಆದ್ಯತೆ ನೀಡಲಾಗಿದೆ.
ಬರಗಾಲದಲ್ಲಿ ಜಾನುವಾರಿಗೆ ಮೇವಿನ ಅಭಾವಿರುವುದರಿಂದ ಕಡಿಮೆ ನೀರಿನಲ್ಲಿ ಬೆಳೆಯುವ 21 ಜಾತಿಯ ಮೇವು ತಳಿಗಳ ಪ್ರಾತ್ಯಕ್ಷಿಕೆಗಳಿವೆ.
‘ಜೋಳದ ತಳಿಗಳು, ದ್ವಿದಳ ಮೇವಾದ ಅಲಸಂದೆ, ಬಳ್ಳಿ ಸಿಹಿಗೆಣಸು, ಕುದುರೆ ಮೆಂತೆ, ಗಿಣಿಹುಲ್ಲು, ಆಫ್ರಿಕನ್ ಜೋಳ ಸೇರಿದಂತೆ ಮೇವುಗಳನ್ನು ಬೆಳೆಯಲಾಗಿದೆ. ಈ ಮೇವು ತಿನ್ನುವ ರಾಸುಗಳು ಹೆಚ್ಚು ಹಾಲು ಕೊಡುತ್ತವೆಂದು ರೈತರು ಹೇಳಿದ್ದಾರೆ’ ಎಂದು ಪಶುವೈದ್ಯಾಧಿಕಾರಿ ರಕ್ಷಿತ್ ರಾಜ್ ಹೇಳಿದರು.
‘ಕಡಿಮೆ ಸಮಯದಲ್ಲಿ ಬೆಳೆದು ಹೆಚ್ಚಿನ ಆದಾಯ ತಂದುಕೊಡುವ ತರಕಾರಿಗಳನ್ನು ಬೆಳೆಯಲಾಗಿದೆ. ಸಲಾಡ್ ತರಕಾರಿಗಳು, ಟೊಮೆಟೊ, ಮೆಣಸಿನಕಾಯಿ, ಬದನೆ, ಬಳ್ಳಿ– ತರಕಾರಿಗಳ 15 ತಳಿಗಳಿವೆ. ಸೊಪ್ಪುಗಳಿವೆ. ಫಲಪುಷ್ಪಗಳನ್ನೂ ಬೆಳೆಯಲಾಗಿದೆ. 1 ಎಕರೆಯಲ್ಲಿ ಬೆಳೆಯಬಹುದಾದ ಬೆಳೆಗಳ ಪ್ರಾತ್ಯಕ್ಷಿಕೆಯು ಕೃಷಿ ಬ್ರಹ್ಮಾಂಡದಲ್ಲಿದೆ’ ಎಂದು ಜೆಎಸ್‌ಎಸ್ ಕೃಷಿ ವಿಜ್ಞಾನಿ ಕೇಂದ್ರದ ವಿಜ್ಞಾನಿ ವಿನಯ್ ಹೇಳಿದರು.
ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ದಾಸೋಹ ಹಾಗೂ ಪ್ರಸಾದ ತಯಾರಿಸಲು ಸಾವಿರಕ್ಕೂ ಹೆಚ್ಚು ಬಾಣಸಿಗರಿದ್ದಾರೆ.
‘5 ಕಡೆ ಪ್ರಸಾದ ವ್ಯವಸ್ಥೆಯಿದೆ. 4 ಲಕ್ಷ ಲಾಡು, ತಲಾ 150 ಕ್ವಿಂಟಲ್ ಖಾರಬೂಂದಿ ಹಾಗೂ ಸಿಹಿಬೂಂದಿ, 40 ಸಾವಿರ ಮೈಸೂರು ಪಾಕ್, ಬಾದೂಶಾ, ಕೊಬ್ಬರಿ ಮಿಠಾಯಿಯನ್ನು 150 ಬಾಣಸಿಗರು ತಯಾರಿಸುತ್ತಿದ್ದಾರೆ’ ಎಂದು ಮುಖ್ಯ ಬಾಣಸಿಗ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘800 ಕ್ವಿಂಟಲ್ ಅಕ್ಕಿ ಬಳ್ಳಾರಿಯ ಕಾರಟಗಿಯಿಂದ ಬಂದಿದ್ದರೆ, 200 ಕ್ವಿಂಟಲ್ ಅಕ್ಕಿ ಭಕ್ತರು ನೀಡಿದ್ದಾರೆ. 150 ಕ್ವಿಂಟಲ್ ಬೇಳೆ ರಾಯಚೂರಿನಿಂದ, ಆಯಿಲ್ ಫೆಡರೇಷನ್‌ನಿಂದ 15 ಲೀಟರ್ ಸಾಮರ್ಥ್ಯದ 1,300 ಕ್ಯಾನ್ ಅಡುಗೆ ಎಣ್ಣೆ, ಬಣ್ಣಾರಿ ಅಮ್ಮನ್ ಕಾರ್ಖಾನೆಯಿಂದ 200 ಕ್ವಿಂಟಲ್ ಸಕ್ಕರೆ ಬಂದಿದೆ. 3,398 ಕೆ.ಜಿ ಖಾರದ ಪುಡಿ ಸಿದ್ಧಪಡಿಸಿಕೊಳ್ಳಲಾಗಿದೆ’ ಎಂದು ಉಗ್ರಾಣದ ಉಸ್ತುವಾರಿ ಸರ್ಪಭೂಷಣ ‘ಪ್ರಜಾವಾಣಿ’ಗೆ ತಿಳಿಸಿದರು.
ಸುತ್ತೂರು ಜಾತ್ರೆಯು ಎಲ್ಲರನ್ನೂ ಒಳಗೊಂಡ ಜಾತ್ರೆ. ಧಾರ್ಮಿಕ ಆಚರಣೆ ಜೊತೆಗೆ ಶಿಕ್ಷಣ ಕ್ರೀಡೆ ವಿಚಾರ ವಿನಿಮಯದ ಉತ್ಸವ. ಎಲ್ಲರೂ ಬರಬೇಕುಜಯರಾಜೇಂದ್ರ ಸ್ವಾಮೀಜಿ, ಸುತ್ತೂರು ಮಠದ ಕಿರಿಯ ಶ್ರೀ
ಜಾತ್ರೆಯಲ್ಲಿ ವಸ್ತುಪ್ರದರ್ಶನ ಕೃಷಿಮೇಳ ದೇಸಿ ಆಟಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಹಾರ ಮತ್ತು ಆರೋಗ್ಯದ ಅರಿವಿನ ಜಾತ್ರೆಯಾಗಿದೆ.ಜಿ.ಎಲ್.ತ್ರಿಪುರಾಂತಕ, ಜಾತ್ರೆಯ ಸಂಯೋಜನಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.