ADVERTISEMENT

ಮೈಸೂರು: ಸ್ವ–ಸಹಾಯ ಸಂಘಕ್ಕೆ ‘ಸಂಜೀವಿನಿ’

ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯ ಆಯುಕ್ತೆ ಅರುಂಧತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 6:32 IST
Last Updated 26 ಅಕ್ಟೋಬರ್ 2024, 6:32 IST
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ದೀಪ ಸಂಜೀವಿನಿ’ ಕಾರ್ಯಕ್ರಮವನ್ನು ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯದ ಆಯುಕ್ತೆ ಅರುಂಧತಿ ಚಂದ್ರಶೇಖರ್ ಉದ್ಘಾಟಿಸಿ ವೀಕ್ಷಿಸಿದರು
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ದೀಪ ಸಂಜೀವಿನಿ’ ಕಾರ್ಯಕ್ರಮವನ್ನು ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯದ ಆಯುಕ್ತೆ ಅರುಂಧತಿ ಚಂದ್ರಶೇಖರ್ ಉದ್ಘಾಟಿಸಿ ವೀಕ್ಷಿಸಿದರು   

ಮೈಸೂರು: ‘ಸ್ವ–ಸಹಾಯ ಸಂಘದ ಸದಸ್ಯರು ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾಗಲು ಸುತ್ತು ನಿಧಿ, ಸಮುದಾಯ ಬಂಡವಾಳ ನಿಧಿ ಹಾಗೂ ಸರ್ಕಾರದ ಆರ್ಥಿಕ ನೆರವು ಒದಗಿಸುವ ‘ಸಂಜೀವಿನಿ’ ಕಾರ್ಯಕ್ರಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ’ ಎಂದು ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯದ ಆಯುಕ್ತೆ ಅರುಂಧತಿ ಚಂದ್ರಶೇಖರ್ ಹೇಳಿದರು.

ಸಂಜೀವಿನಿ– ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀಪನೋಪಾಯ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ‘ದೀಪ ಸಂಜೀವಿನಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಒಟ್ಟು 16,407 ಸ್ವ–ಸಹಾಯ ಸ್ತ್ರೀಶಕ್ತಿ ಸಂಘಗಳಿದ್ದು, 2,02,696 ಸದಸ್ಯರಿದ್ದಾರೆ. ಸ್ವ–ಸಹಾಯ ಸಂಘದ ಮಹಿಳೆಯರು ಈವರೆಗೆ ₹239 ಕೋಟಿ ಆರ್ಥಿಕ ಚಟುವಟಿಕೆಗಳನ್ನು ನಡೆಸಿರುವುದು ಸಂತೋಷದ ಸಂಗತಿಯಾಗಿದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಮಾತನಾಡಿ, ‘ಜಿಲ್ಲೆಯಲ್ಲಿರುವ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೂಲಕ ಕರಕುಶಲ ಕಲೆ ಬಳಸಿ ದೀಪಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ. ದೀಪಾವಳಿ ಹಬ್ಬವನ್ನು ಪಟಾಕಿ ಸಿಡಿಸಿ ಆಚರಿಸುವ ಬದಲು ದೀಪ ಬೆಳಗಿಸಿ ಸಂಭ್ರಮಿಸಬೇಕು. ಪಟಾಕಿಗಳು ಪರಿಸರಕ್ಕೆ ಹಾನಿಕಾರಕ ಹಾಗೂ ಶಬ್ದಮಾಲಿನ್ಯ ಉಂಟು ಮಾಡುತ್ತದೆ. ಇದರ ಬದಲು ದೀಪವನ್ನು ಹಚ್ಚಿ ಆಚರಿಸಬೇಕು’ ಎಂದು ಸಲಹೆ ನೀಡಿದರು.

‘ಸ್ವ–ಸಹಾಯ ಸಂಘಗಳ ಮೂಲಕ ಗ್ರಾಮೀಣ ಭಾಗದಲ್ಲಿ ಕಸ ಸಂಗ್ರಹಿಸಿ ಗೊಬ್ಬರ ಮಾಡಿ ಪುನರ್ ಬಳಕೆ ಮಾಡುವುದರಿಂದ ಸಂಘಗಳು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ’ ಎಂದರು.

‘ದೀಪಾವಳಿ ಹಬ್ಬದ ಅಂಗವಾಗಿ ಶುಕ್ರವಾರದಿಂದ ಒಂದು ವಾರದವರೆಗೆ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಆಯೋಜಿಸಿ ಸ್ವ–ಸಹಾಯ ಸಂಘದ ಸದಸ್ಯರ ಆರ್ಥಿಕ ಚಟುವಟಿಕೆಗೆ ಒತ್ತು ನೀಡುವ ಜೊತೆಗೆ ಸಾರ್ವಜನಿಕರಿಗೆ ಅರಿವು ಉಂಟು ಮಾಡುತ್ತಿರುವುದು ಒಳ್ಳೆಯ ಕಾರ್ಯಕ್ರಮವಾಗಿದೆ’ ಎಂದು ಹೇಳಿದರು.

ಕಾರ್ಮಿಕ ಇಲಾಖೆಯ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಪಾಲ್ಗೊಂಡಿದ್ದರು. ಅಧಿಕಾರಿಗಳು ಕೂಡ ಕೆಲವು ಹಣತೆಗಳನ್ನು ಖರೀದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.