ADVERTISEMENT

ಮೈಸೂರು: ಹೊಳೆಯುತ್ತಿವೆ ಮೂರು ಚಿನ್ನದ ಮೀನುಗಳು..!

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 7:15 IST
Last Updated 14 ನವೆಂಬರ್ 2024, 7:15 IST
ಈಜಿನಲ್ಲಿ ಭರವಸೆ ಮೂಡಿಸಿರುವ ಮೈಸೂರಿನ ಸುಬ್ರಹ್ಮಣ್ಯ ಜೀವಾಂಶ್, ಸಾನ್ವಿ, ಋತ್ವ ಅವರೊಂದಿಗೆ ಕೋಚ್‌ ಪವನ್
ಈಜಿನಲ್ಲಿ ಭರವಸೆ ಮೂಡಿಸಿರುವ ಮೈಸೂರಿನ ಸುಬ್ರಹ್ಮಣ್ಯ ಜೀವಾಂಶ್, ಸಾನ್ವಿ, ಋತ್ವ ಅವರೊಂದಿಗೆ ಕೋಚ್‌ ಪವನ್   

ಮೈಸೂರು: ನಗರದ ಮೂರು ಚಿನ್ನದ ಮೀನುಗಳು ದೇಶದ ಈಜುಕೊಳಗಳಲ್ಲಿ ಹೊಳೆಯುತ್ತಿವೆ. ಐದು ವರ್ಷದಿಂದಲೇ ನೀರಿಗೆ ಧುಮುಕಿದ ಈ ಪ್ರತಿಭೆಗಳು ದೇಶದ ಉದ್ದಗಲಕ್ಕೂ ನಡೆಯುತ್ತಿರುವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳ ಬೇಟೆಯಾಡುತ್ತಿವೆ!

ಜೆ.ಪಿ.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಈಜುಕೊಳದಲ್ಲಿ ನಿತ್ಯ ಅಭ್ಯಾಸ ನಡೆಸಿರುವ ಸುಬ್ರಹ್ಮಣ್ಯ ಜೀವಾಂಶ್‌, ಸಾನ್ವಿ ಹಾಗೂ ಋತ್ವ ಭವಿಷ್ಯದಲ್ಲಿ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಳೆಯುವಂತೆ ಮಾಡುವ ಗುರಿಯುಳ್ಳವರು. ಅವರಿಗೆ ಗ್ಲೋಬಲ್ ಸ್ಪೋರ್ಟ್ಸ್‌ ಅಸೋಸಿಯೇಷನ್‌ನ ಕೋಚ್‌ ಪವನ್‌ ತರಬೇತಿ ನೀಡುತ್ತಿದ್ದಾರೆ. 

ರಾಷ್ಟ್ರಮಟ್ಟದಲ್ಲಿ ಮಿಂಚು...

ದಯಾನಂದ ಆರ್ಯ ವಿದ್ಯಾ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸುಬ್ರಹ್ಮಣ್ಯ, ಇದೇ ವರ್ಷದ ಅಕ್ಟೋಬರ್‌ನಲ್ಲಿ  ಒಡಿಶಾದ ಭುವನೇಶ್ವರದಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರಮಟ್ಟದ ಈಜು ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದಿದ್ದ. 

ADVERTISEMENT

13 ವರ್ಷದ ಜೀವಾಂಶ್‌ ಈಜುಕೊಳಕ್ಕಿಳಿದದ್ದು ಆಕಸ್ಮಿಕ. ಫಿಟ್‌ನೆಸ್‌ಗಾಗಿ ಪೋಷಕರಾದ ಎಂಜಿನಿಯರ್ ಎಂ.ಎಸ್‌. ಮಂಜುನಾಥ್– ಲಕ್ಷ್ಮಿ ದಂಪತಿ ಅಕಾಡೆಮಿಗೆ ಸೇರಿಸಿದ್ದರು. ಆರಂಭದಲ್ಲಿ ಕ್ರಿಕೆಟ್‌ಗೆ ಸೇರಿಸಬೇಕೆಂದುಕೊಂಡಿದ್ದರು. 6 ವರ್ಷವಿದ್ದಾಗ ಈಜು ತರಬೇತಿ ಆರಂಭಿಸಿದ್ದರು. ಕೋವಿಡ್‌ ವೇಳೆ ಜೀವಾಂಶ್‌ ತೋರಿಸಿದ ಆಸಕ್ತಿಗೆ ಪ್ರೋತ್ಸಾಹ ನೀಡಿದ್ದರು.

ಕೊರೆಯುವ ಚಳಿಯಿದ್ದರೂ ಮುಂಜಾನೆ 5.30ಕ್ಕೆ ಕೊಳದಲ್ಲಿ ಹಾಜರಾಗುವ ಜೀವಾಂಶ್‌, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಅಭ್ಯಾಸ ನಡೆಸುತ್ತಿದ್ದಾನೆ. ಅಮೆರಿಕದ ಒಲಿಂಪಿಕ್‌ನ ಚಿನ್ನದ ಮೀನು ‘ಮೈಕಲ್‌ ಫೆಲ್ಪ್‌’ನಂತೆ ಆಗಬೇಕೆಂಬುದು ಆತನ ಕನಸು. 

ಸಿಬಿಎಸ್‌ಇ ಶಾಲೆಗಳ ರಾಷ್ಟ್ರಮಟ್ಟದ ಚಾಂ‍ಪಿಯನ್‌ಷಿಪ್‌ನ 200 ಮೀ., 100 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಎರಡು ಚಿನ್ನ ಹಾಗೂ 200 ಮೀ. ಮೆಡ್ಲೆಯಲ್ಲಿ ಬೆಳ್ಳಿ ಗೆದ್ದಿದ್ದ. ಅದಲ್ಲದೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಜಯಿಸಿದ್ದ. ತಿರುವನಂತಪುರದಲ್ಲಿ ನಡೆದ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನ 100 ಮೀಟರ್ಸ್ ಬಟರ್‌ಫ್ಲೈನಲ್ಲಿ ಚಿನ್ನ ಗೆದ್ದಿದ್ದ. ಇದೀಗ ‘ಸ್ಕೂಲ್‌ ಗೇಮ್ಸ್‌ ಫೆಡರೇಷನ್ ಆಫ್ ಇಂಡಿಯಾ’ ನಡೆಸುವ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾನೆ.

‘ಈಜುವುದೆಂದರೆ ನನಗಿಷ್ಟ. ಖೇಲೊ ಇಂಡಿಯಾದಲ್ಲಿ ಆಡುವುದು ನನಗಾಸೆ. ಅಮೆರಿಕದ ಮೈಕಲ್‌ ಫೆಲ್ಪ್‌, ಭಾರತದ ಶ್ರೀಹರಿ ನಟರಾಜ್‌, ಸಾಜನ್‌ ಪ್ರಕಾಶ್‌ ನನಗೆ ಸ್ಫೂರ್ತಿ’ ಎಂದು ಜೀವಾಂಶ್‌ ‘ಪ್ರಜಾವಾಣಿ’ಗೆ ತಿಳಿಸಿದ.

ಚತುರ ಈಜುಗಾರ್ತಿ ಸಾನ್ವಿ

ಡಿಎವಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಸಾನ್ವಿ ಈಚೆಗೆ ಒಡಿಶಾದಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ 200 ಮೀಟರ್ಸ್ ವೈಯಕ್ತಿಕ ಮೆಡ್ಲೆಯಲ್ಲಿ ಬೆಳ್ಳಿ ಗೆದ್ದಿದ್ದಾಳೆ. ತಾಯಿ ಆರ್.ಮಮತಾ ಅವರಿಗೆ ನೀರು ಕಂಡರೆ ಭಯ. ಮಗಳಿಗೂ ಭಯ ಹೋಗಬೇಕು. ಫಿಟ್‌ನೆಸ್‌ ಇರಬೇಕೆಂಬ ಕಾರಣಕ್ಕೆ 2019ರಲ್ಲಿ 6 ವರ್ಷವಿದ್ದಾಗ ‘ಜಿಎಸ್‌ಎ’ ಅಕಾಡೆಮಿಗೆ ಅವರು ಸೇರಿಸಿದ್ದರು. ಆಗ ರಾಜ್ಯ ಈಜು ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ 100 ಮೀ. 50 ಮೀ. ಬಟರ್‌ಫ್ಲೈನಲ್ಲಿ ಚಿನ್ನ ಹಾಗೂ ಬೆಳ್ಳಿ ಹಾಗೂ 200 ಮೀಟರ್ಸ್ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದು ಅಚ್ಚರಿ ಮೂಡಿಸಿದ್ದಳು.

ರಾಜ್ಯ ಸಬ್ ಜೂನಿಯರ್ ಹಾಗೂ ಜೂನಿಯರ್‌ ಈಜು ಸ್ಪರ್ಧೆಗಳಲ್ಲಿ ಐದು ಬೆಳ್ಳಿ ಗೊಂಚಲು ಪಡೆದ ಹಿರಿಮೆ ಸಾನ್ವಿಯದ್ದು. ಮಂಡ್ಯದಲ್ಲಿ ಈಚೆಗೆ ನಡೆದ ಸಿಬಿಎಸ್‌ಇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ 3 ಬೆಳ್ಳಿ ಗೆದ್ದಿದ್ದು ದಾವಣಗೆರೆಯಲ್ಲಿ ನಡೆದ ಸಿಬಿಎಸ್‌ಇ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನಲ್ಲೂ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದಿದ್ದಳು. ತಂದೆ ಪಿ.ರಘುಕುಮಾರ್ ಅವರು ‘ಎಕ್ಸೆಲ್‌ ಸಾಫ್ಟ್‌’ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿದ್ದು ಮಗಳ ಕನಸಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಚಿನ್ನಕ್ಕೆ ಗುರಿ ಇಡುವ ಋತ್ವ

ವಿಶ್ವೇಶ್ವರ ನಗರದ ಸೇಂಟ್‌ ಥಾಮಸ್‌ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ 11 ವರ್ಷದ ಋತ್ವ ಸಿಬಿಎಸ್‌ಇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ 50 ಮೀ. ಬಟರ್‌ಫ್ಲೈನಲ್ಲಿ ಚಿನ್ನ 200 ಮೀಟರ್ಸ್‌ ವೈಯಕ್ತಿಕ ಮೆಡ್ಲೆಯಲ್ಲಿ ಬೆಳ್ಳಿ ಗೆದ್ದು ಭರವಸೆ ಮೂಡಿಸಿದ್ದಾನೆ. ಎಲ್ಲ ಸ್ಪರ್ಧೆಗಳಲ್ಲಿ ಮೊದಲ ಸ್ಥಾನಕ್ಕೆ ಗುರಿಯಿಟ್ಟು ಚಿನ್ನ ಗೆಲ್ಲುವ ತವಕ ಈ ಪುಟಾಣಿಗೆ. ಪೋಷಕರಾದ ಜೆ.ಕೆ.ಟೈರ್ಸ್‌ ಕಂಪನಿಯಲ್ಲಿ ಆಡಳಿತಾಧಿಕಾರಿಯಾಗಿರುವ ಕೆ.ಶಿವಕುಮಾರ್– ಶ್ರೀದೇವಿ ದಂಪತಿ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

5 ವರ್ಷವಿದ್ದಾಗ ಫಿಟ್‌ನೆಸ್‌ಗಾಗಿ ಈಜು ಶಾಲೆಗೆ ಸೇರಿಸಿದ ಆತ ರಾಷ್ಟ್ರಮಟ್ಟಕ್ಕೆ ಹೋಗುತ್ತಾನೆಂದು ಅವರಿಗೆ ಅನ್ನಿಸಿರಲಿಲ್ಲ. ಇದೀಗ ನಿತ್ಯ 5 ಗಂಟೆ ಅಭ್ಯಾಸ ನಡೆಸುತ್ತಿರುವ ಋತ್ವಗೆ ದೇಶವನ್ನು ಪ್ರತಿನಿಧಿಸಿ ಒಲಿಂಪಿಕ್‌ನಲ್ಲಿ ಚಿನ್ನ ಗೆಲ್ಲುವ ಕನಸಿದೆ. ಇದುವರೆಗೂ ಜಿಲ್ಲೆ ರಾಜ್ಯ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು 33 ಚಿನ್ನ 7 ಬೆಳ್ಳಿ ಹಾಗೂ 2 ಕಂಚು ಗೆದ್ದಿದ್ದಾನೆ. ನಿತ್ಯ 12 ಕಿ.ಮೀ. ಈಜು ಅಭ್ಯಾಸ ಮಾಡುತ್ತಿದ್ದು ಕೋಚ್‌ ಪವನ್ ತರಬೇತಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.