ADVERTISEMENT

Mysuru Dasara | ಸ್ತಬ್ಧಚಿತ್ರ: ಕರುನಾಡ ವೈಭವದ ಅನಾವರಣ

ನಾಡಿನ ಹಿರಿಮೆ – ಗರಿಮೆ ಸಾರಿದ 51 ಸ್ತಬ್ಧಚಿತ್ರಗಳು

ಆರ್.ಜಿತೇಂದ್ರ
Published 13 ಅಕ್ಟೋಬರ್ 2024, 4:53 IST
Last Updated 13 ಅಕ್ಟೋಬರ್ 2024, 4:53 IST
ಜಂಬೂ ಸವಾರಿಯಲ್ಲಿ ಪ್ರದರ್ಶನಗೊಂಡ ಮೈಸೂರು ಜಿಲ್ಲೆಯ ಸ್ತಬ್ಧಚಿತ್ರ –ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಜಂಬೂ ಸವಾರಿಯಲ್ಲಿ ಪ್ರದರ್ಶನಗೊಂಡ ಮೈಸೂರು ಜಿಲ್ಲೆಯ ಸ್ತಬ್ಧಚಿತ್ರ –ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಬರೋಬ್ಬರಿ 51 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದು, ಕರ್ನಾಟಕದ ಕಲೆ–ಸಂಸ್ಕೃತಿಯ ವೈಭವದ ಅನಾವರಣವಾಯಿತು.

ರಾಜ್ಯದ 31 ಜಿಲ್ಲೆಗಳ ತಲಾ ಒಂದೊಂದು ಸ್ತಬ್ಧಚಿತ್ರ ಪಾಲ್ಗೊಂಡಿದ್ದು, ಪ್ರತಿ ಜಿಲ್ಲೆಯೂ ತನ್ನ ಹಿರಿಮೆಯನ್ನು ಸಾರುವುದಕ್ಕೆ ಜಂಬೂಸವಾರಿಯನ್ನು ವೇದಿಕೆಯಾಗಿ ಬಳಸಿಕೊಂಡಿತು. ಇದಲ್ಲದೆ ವಿವಿಧ ಇಲಾಖೆ ಹಾಗೂ ಉಪಸಮಿತಿಯ 20 ಕಲಾಕೃತಿಗಳು ಸರ್ಕಾರದ ಅಂಗಸಂಸ್ಥೆಗಳ ಪ್ರಚಾರ ಹಾಗೂ ಪ್ರಸಾರಕ್ಕೆ ಸಾಕ್ಷಿಯಾದವು. ಬರೋಬ್ಬರಿ ಎರಡೂವರೆ ಗಂಟೆಗಳವರೆಗೆ ನಡೆದ ಮೆರವಣಿಗೆಯಲ್ಲಿ ಆಗಾಗ್ಗೆ ಸುರಿದ ಜೋರುಮಳೆಯನ್ನೂ ಲೆಕ್ಕಿಸದೇ ಜನ ಇವುಗಳ ಅಂದವನ್ನು ಕಣ್ತುಂಬಿಕೊಂಡರು.

ಜಂಬೂ ಸವಾರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರದರ್ಶಿಸಿದ ಸ್ತಬ್ಧಚಿತ್ರ

ಆತಿಥೇಯ ಮೈಸೂರು ಜಿಲ್ಲೆಯು ಬುದ್ಧ–ಬಸವರ ಕಾಲದಿಂದ ಸಂವಿಧಾನ ದವರೆಗೆ ಸಾಮಾಜಿಕ ಸಮಾನತೆಯ ಬೆಳವಣಿಗೆಯ ಚಿತ್ರಣವನ್ನು ಕಟ್ಟಿಕೊಟ್ಟಿತು. ಚಿಕ್ಕಮಗಳೂರಿನ ‘ತೇಜಸ್ವಿ ವಿಸ್ಮಯ ಲೋಕ’ ಆಕರ್ಷಕವಾಗಿತ್ತು. ಕೊಡಗು ಜಿಲ್ಲೆಯು ಹಾರಂಗಿ ಜಲಾಶಯ, ಕಾಫಿ–ಕಾಳುಮೆಣಸಿನ ತೋಟ ಹಾಗೂ ಆನೆ ಕ್ಯಾಂಪ್‌ ಮೂಲಕ ಆಕರ್ಷಿಸಿತು. ಚಾಮರಾಜನಗರದ ಸೋಲಿಗರ ಸೊಗಡು, ಬೆಂಗಳೂರು ನಗರದಿಂದ ‘ವಿಧಾನಸೌಧ’ದ ಪ್ರತಿಕೃತಿ ದಸರಾಗೆ ಬಂದಿತ್ತು. ದಾವಣಗೆರೆಯು ‘ನಾವು ಮನುಜರು’ ಎನ್ನುವ ಸಂದೇಶ ಸಾರಿತು. ಉಡುಪಿಯು ಕರಾವಳಿಯ ಸೊಬಗು ಬಿಂಬಿಸಿತು.

ADVERTISEMENT

ವಿಜಯನಗರ ಜಿಲ್ಲೆಯು ವಿಜಯನಗರ ಸಾಮ್ರಾಜ್ಯದ ವೈಭವ ತೆರೆದಿಟ್ಟಿತು. ಯಾದಗಿರಿಯ ತಿಂಥಣಿ ಮೌನೇಶ್ವರನ ಸನ್ನಿಧಿ, ರಾಯಚೂರಿನ ಕೋಟೆ–ದೇಗುಲ ಸೇರಿದಂತೆ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು ತಮ್ಮ ನೆಲದ ಹಿರಿಮೆ ಸಾರುವ ಮಾದರಿಗಳನ್ನು ಪ್ರದರ್ಶಿಸಿದವು.

ಮೈಸೂರಿನ ಸಿಎಸ್‌ಐಆರ್–ಸಿಎಫ್‌ಟಿಆರ್‌ಐ ತನ್ನ ಕೊಡುಗೆಗಳನ್ನು ಬಿಂಬಿಸಿತು. ರೈ‌ಲ್ವೆ ಇಲಾಖೆಯು ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ಅನ್ನು ದಸರೆಗೆ ಪರಿಚಯಿಸಿತು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮವು ವಿಶ್ವವಿಖ್ಯಾತ ಮೈಸೂರು ಸ್ಯಾಂಡಲ್‌ ಸೋಪಿನ ಪರಿಮಳವನ್ನು ನೋಡುಗರಿಗೆ ಹಂಚಿತು. ಕೆಎಂಎಫ್ ಕ್ಷೀರ ಭಾಗ್ಯ, ಕ್ಷೀರ ಸಂಜೀವಿನಿಯ ಯಶೋಗಾಥೆಯನ್ನು ಬಿಂಬಿಸಿತ್ತು.

ಚಿಕ್ಕಮಗಳೂರು ಜಿಲ್ಲೆಯಿಂದ ‍ಪ್ರದರ್ಶನಗೊಂಡ ‘ತೇಜಸ್ವಿ ವಿಸ್ಮಯ ಲೋಕ’ ಸ್ತಬ್ಧಚಿತ್ರ

ಪ್ರವಾಸೋದ್ಯಮ ಇಲಾಖೆಯು ನಾಡಿನ ಹೆಮ್ಮೆಯ ತಾಣಗಳ ಪರಿಚಯ ಮಾಡಿಕೊಟ್ಟಿತು. ಸಮಾಜ ಕಲ್ಯಾಣ ಇಲಾಖೆಯು ಸಮ ಸಮಾಜ ನಿರ್ಮಾಣದ ಸಂದೇಶ ಸಾರಿತು. ವಾರ್ತಾ ಇಲಾಖೆಯ ಬಸವಣ್ಣ ಹಾಗೂ ಗಾಂಧಿ ಚಿಂತನೆಗಳ ಚಿತ್ರಣ ಗಮನ ಸೆಳೆಯುವಂತಿತ್ತು. ದಸರಾ ಉಪಸಮಿತಿಯು ‘ಆನೆಬಂಡಿ’ ಸಿದ್ಧಪಡಿಸಿತ್ತು. ಲಿಡ್ಕರ್, ರೇಷ್ಮೆ ನಿಗಮ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೊದಲಾದ ಸಂಸ್ಥೆಗಳ ಸ್ತಬ್ಧಚಿತ್ರಗಳೂ ಪ್ರದರ್ಶನಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.