ಮೈಸೂರು: ಇಲ್ಲಿನ ಸಾವರ್ಕರ್ ಪ್ರತಿಷ್ಠಾನವು ಸಾವರ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಪೊಲೀಸರು ಶನಿವಾರ ಮಧ್ಯಾಹ್ನ ತಡೆ ಒಡ್ಡಿದ್ದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು.
ನಗರದ ಕರಾಮುವಿವಿ ಘಟಿಕೋತ್ಸವ ಭವನದಲ್ಲಿ ಕಾರ್ಯಕ್ರಮ ನಿಗದಿ ಆಗಿದೆ.
ಕಾರ್ಯಕ್ರಮಕ್ಕೂ ಮುನ್ನ 3ರಿಂದ 5ರವರೆಗೆ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಂತೆ ಸಂಘಟಕರು ಮುಕ್ತ ವಿ.ವಿ. ಆವರಣಕ್ಕೆ ಬಂದಾಗ ಅವರು ಒಳಹೋಗದಂತೆ ಪೊಲೀಸರು ತಡೆದರು. ಕಾರ್ಯಕ್ರಮಕ್ಕೆ ಅನುಮತಿ ಪಡೆಯದ ಕಾರಣ ಒಳಗೆ ಬಿಡುವುದಿಲ್ಲ ಎಂದರು. ಸಂಘಟಕರು ತಾವು ಅನುಮತಿ ಪಡೆದಿರುವುದಾಗಿ ವಾದಿಸಿದರು. ಈ ಗೊಂದಲ ಮುಂದುವರಿದ ಕಾರಣ ಮಕ್ಕಳು ಮುಕ್ತ ವಿ.ವಿ. ಗೇಟಿನ ಮುಂಭಾಗ ರಸ್ತೆಯಲ್ಲೇ ಚಿತ್ರ ಬರೆದರು.
ಕಡೆಗೆ ವಿ.ವಿ. ಅಧಿಕಾರಿಗಳು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದ್ದು, ಮಧ್ಯಾಹ್ನ 3.45 ರ ಸುಮಾರಿಗೆ ಆಯೋಜಕರು ಹಾಗೂ ಮಕ್ಕಳನ್ನು ಸಭಾಂಗಣದ ಒಳ ಬಿಡಲಾಯಿತು. ಆಯೋಜಕರು ಸಾವರ್ಕರ್ ಪರ ಘೋಷಣೆ ಕೂಗುತ್ತ ಒಳ ನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.