ಮೈಸೂರು: ತಮಿಳು ನಟ ವಿಶಾಲ್ ನಗರದ ಊಟಿ ರಸ್ತೆಯಲ್ಲಿರುವ ಅಶಕ್ತ ಮಹಿಳೆಯರು ಮತ್ತು ಮಕ್ಕಳ ಪುನರ್ವಸತಿ ಕೇಂದ್ರವಾದ ‘ಶಕ್ತಿಧಾಮ’ಕ್ಕೆ ಶನಿವಾರ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಕೆಲ ಸಮಯ ಕಳೆದರು. ಗೆಳೆಯ, ನಟ ಪುನೀತ್ ರಾಜ್‌ಕುಮಾರ್ ನೆನೆದು ಭಾವುಕರಾದರು.
ಶಕ್ತಿಧಾಮಕ್ಕೆ ಸಹಾಯ ಮಾಡುವುದಾಗಿ ಈ ಹಿಂದೆ ತಿಳಿಸಿದ್ದ ಅವರು, ತಮ್ಮ ಆಸೆಯನ್ನು ಪುನರುಚ್ಚರಿಸಿದರು. ಸ್ವಯಂ ಸೇವಕನಾಗಿ ಕೆಲಸ ಮಾಡಲು ಶಿವರಾಜ್ ಕುಮಾರ್– ಗೀತಾ ದಂಪತಿ ಅವಕಾಶ ಕೊಡಬೇಕು ಎಂದು ಕೋರಿದರು.
ಅವರ ಎದುರು ಮಕ್ಕಳು ಪುನೀತ್ ಅಭಿನಯದ ಹಾಡುಗಳನ್ನು ಹಾಡಿದರು. ಡ್ಯಾನ್ಸ್ ಮಾಡಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ವಿಶಾಲ್, ‘ಅಪ್ಪು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಶಕ್ತಿಧಾಮದ ಮಕ್ಕಳ ಮೂಲಕ ನಮ್ಮ ನಡುವೆ ಇದ್ದಾರೆ. ಈ ಕೇಂದ್ರದ ಅಭಿವೃದ್ಧಿಗೆ ಪುನೀತ್ ತೋರಿದ್ದ ಕಾಳಜಿ ಅಭಿನಂದನಾರ್ಹವಾದುದು’ ಎಂದರು.
‘ನಾನು ಸದಾ ಶಕ್ತಿಧಾಮದ ಸ್ವಯಂ ಸೇವಕನಾಗಿ ಕೆಲಸ ಮಾಡಲು ಬಯಸುತ್ತೇನೆ. ಸೇವೆಗೆ ಅನುಮತಿ ಕೊಡುವಂತೆ ಶಿವರಾಜ್ ಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ರಾಜ್‌ಕುಮಾರ್ ಕುಟುಂಬದವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ’ ಎಂದು ತಿಳಿಸಿದರು.
‘ಶಕ್ತಿಧಾಮದ ಭೇಟಿಯು ನನಗೆ ದೇವಸ್ಥಾನದ ಅನುಭವ ನೀಡಿತು. ದೇವಾಲಯಕ್ಕೆ ಹೋದರೆ ಒಂದು ದೇವರ ದರ್ಶನ ಪಡೆಯಹುದು. ಆದರೆ, ಇಲ್ಲಿನ ಪ್ರತಿ ಮಕ್ಕಳಲ್ಲೂ ಒಬ್ಬೊಬ್ಬ ದೇವರನ್ನು ನೋಡಿದಂತಾಯಿತು. ಮಕ್ಕಳು ತುಂಬಾ ಲವಲವಿಕೆಯಿಂದ ಇದ್ದಾರೆ. ಅವರ ವಿಷಯದಲ್ಲಿ ಪುನೀತ್ ರಾಜ್‌ಕುಮಾರ್, ಗೀತಾಅವರು ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ’ ಎಂದರು.
‘ಮಕ್ಕಳ ಜೊತೆ ಮಾತನಾಡಿದೆ. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದು ಪ್ರತಿಕ್ರಿಯಿಸಿದರು.
ವಿಶಾಲ್ ಅವರನ್ನು ನೋಡಲು ವಿದ್ಯಾರ್ಥಿಗಳು, ಅಭಿಮಾನಿಗಳು ಶಕ್ತಿಧಾಮದ ಎದುರಿನ ರಸ್ತೆಯಲ್ಲಿ ಜಮಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.