ADVERTISEMENT

ಮೈಸೂರು | ಟಾಂಗಾ ಸವಾರಿಯಲ್ಲಿ ದಂಪತಿ ಸಂಭ್ರಮ

ತುಂತುರು ಮಳೆಯಲ್ಲೂ ನಡೆಯಿತು ಪಾರಂಪರಿಕ ಕಟ್ಟಡಗಳ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 4:52 IST
Last Updated 6 ಅಕ್ಟೋಬರ್ 2024, 4:52 IST
ದಸರಾ ಅಂಗವಾಗಿ ಪರಂಪರೆ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ‘ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗೆ ಟಾಂಗಾ ಸವಾರಿ’ಯು ಕ್ರಾಫರ್ಡ್‌ ಭವನದ ಮುಂದೆ ಸಾಗಿದಾಗ ಕಂಡಿದ್ದು ಹೀಗೆ... ಪ್ರಜಾವಾಣಿ ಚಿತ್ರ: ಹಂಪ ನಾಗರಾಜ್‌
ದಸರಾ ಅಂಗವಾಗಿ ಪರಂಪರೆ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ‘ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗೆ ಟಾಂಗಾ ಸವಾರಿ’ಯು ಕ್ರಾಫರ್ಡ್‌ ಭವನದ ಮುಂದೆ ಸಾಗಿದಾಗ ಕಂಡಿದ್ದು ಹೀಗೆ... ಪ್ರಜಾವಾಣಿ ಚಿತ್ರ: ಹಂಪ ನಾಗರಾಜ್‌   

ಮೈಸೂರು: ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ದಂಪತಿಗಳು ತುಂತುರು ಮಳೆಯ ನಡುವೆಯೂ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಂಗೊಳಿಸಿ ಸಂಭ್ರಮಿಸಿದರು.

ದಸರಾ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಪುರಭವನದ ಆವರಣದಲ್ಲಿ ಶನಿವಾರ ನಡೆದ ‘ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗೆ ಟಾಂಗಾ ಸವಾರಿ’ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಜೋಡಿಗಳನ್ನು ಬಾಗಿನ ನೀಡಿ ಸ್ವಾಗತಿಸಲಾಯಿತು.

ಇಲಾಖೆಯ ಆಯುಕ್ತ ಎ.ದೇವರಾಜು ಮಾತನಾಡಿ, ‘ಸಾಮೂಹಿಕ ವಿವಾಹದ ಕಾರ್ಯಕ್ರಮದಂತೆ ಈ ವೇದಿಕೆ ಕಂಗೊಳಿಸುತ್ತಿದೆ. ದಂಪತಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುವುದು ನಾಡಹಬ್ಬದ ಮೆರುಗು ಹೆಚ್ಚಿಸಿದೆ’ ಎಂದರು.

ADVERTISEMENT

‘ನಮ್ಮ ಇಲಾಖೆಯು ಪರಂಪರೆಯನ್ನು ಸಂರಕ್ಷಿಸಿ, ಅದನ್ನು ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸಂಸ್ಕೃತಿಯನ್ನು ಪ್ರಚಲಿತಗೊಳಿಸಿ, ಹೆಚ್ಚು ಜನರಿಗೆ ತಲುಪಿಸುವ ಮೂಲಕ ಅದನ್ನು ಕಾಪಾಡಬೇಕಾಗಿದೆ’ ಎಂದು ಹೇಳಿದರು.

‘ಮೈಸೂರು ಎಂದರೆ ಟಾಂಗಾ, ಟಾಂಗಾ ಎಂದರೆ ಮೈಸೂರು ಎಂಬ ಪ್ರತೀತಿ ಇದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರಲ್ಲಿ ಬಹುತೇಕರು ಟಾಂಗಾ ಸವಾರಿ ಮಾಡುತ್ತಾರೆ’ ಎಂದರು.

ಟಾಂಗಾ ಸವಾರಿಯಲ್ಲಿ ಮೈಸೂರು, ಶಿವಮೊಗ್ಗ, ಹಾಸನ, ಬೆಂಗಳೂರು ಮೊದಲಾದ ಜಿಲ್ಲೆಗಳಿಂದ ನೋಂದಾಯಿತ ದಂಪತಿಗಳು ಆಯಾ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು. ಅವರನ್ನು ಟಾಂಗಾಗಳಲ್ಲಿ ಕರೆದೊಯ್ದು ಪಾರಂಪರಿಕ ಕಟ್ಟಡಗಳನ್ನು ಪರಿಚಯಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಎನ್.ಎಸ್. ರಂಗರಾಜು ಮತ್ತು ಇತಿಹಾಸ ಪ್ರಾಧ್ಯಾಪಕ ಲ.ನ ಸ್ವಾಮಿ ಪ್ರಮುಖ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.