ಮೈಸೂರು: ‘ ಮೈತ್ರಿ ಪಕ್ಷಗಳ ಪೈಕಿ ಒಬ್ಬರ ಕೈಯಲ್ಲಿ ಹಾರೆ, ಇನ್ನೊಬ್ಬರ ಕೈಯಲ್ಲಿ ಗುದ್ದಲಿ ಇದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರಲ್ಲಿ ಯಾರೇ ಅಭ್ಯರ್ಥಿಯಾದರೂ ಒಬ್ಬರು ಗುಂಡಿ ತೋಡುತ್ತಾರೆ, ಮತ್ತೊಬ್ಬರು ಎಳೆಯುತ್ತಾರೆ. ಅಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ನಗರದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಚನ್ನಪಟ್ಟಣದಲ್ಲಿ ತಾವೇ ಅಭ್ಯರ್ಥಿ ಆಗುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಡಿ.ಕೆ. ಸುರೇಶ್ ಸ್ಪರ್ಧಿಸಬೇಕು ಎನ್ನುವುದು ಅಲ್ಲಿನ ಮತದಾರರ ಆಶಯ. ಸುರೇಶ್ ರಾಜಕೀಯವಾಗಿ ಮುಂದುವರಿಯಬೇಕಾದ ಅನಿವಾರ್ಯತೆ ಪಕ್ಷಕ್ಕೆ ಇದೆ. ಇನ್ನು ನಾಲ್ಕೈದು ದಿನದಲ್ಲಿ ಅಭ್ಯರ್ಥಿ ಘೋಷಣೆ ಆಗಲಿದೆ. ಸಾಮಾಜಿಕ ನ್ಯಾಯದಂತೆ ಶಿಗ್ಗಾವಿಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡುವಂತೆ ಕೋರಿದ್ದೇವೆ’ ಎಂದರು.
ಮರೀಗೌಡ ರಾಜೀನಾಮೆ ಸ್ವಾಗತಾರ್ಹ:
‘ ಆರೋಗ್ಯದ ದೃಷ್ಟಿಯಿಂದ ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಿದ್ದರಾಮಯ್ಯ ಆಪ್ತರು. ಪಾರದರ್ಶಕ ತನಿಖೆ ನಡೆಯಲಿ ಎಂದು ರಾಜೀನಾಮೆ ಕೊಟ್ಟಿರಬಹುದು. ಇದರಿಂದ ತನಿಖೆಗೆ ಒಳ್ಳೆಯದೇ’ ಎಂದು ಪ್ರತಿಕ್ರಿಯಿಸಿದರು.
‘ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಮಂಜೂರಾದ ಸಭೆಯಲ್ಲೇ ಉಳಿದವರಿಗೆ 161 ನಿವೇಶನಗಳೂ ಮಂಜೂರಾಗಿದ್ದವು. ಆ ಸಭೆಯಲ್ಲಿ ಮಂಜೂರಾಗಿದ್ದ ಎಲ್ಲ ನಿವೇಶನಗಳನ್ನೂ ಮುಡಾ ರದ್ದು ಮಾಡಬೇಕು’ ಎಂದು ತನ್ವೀರ್ ಸೇಠ್ ಒತ್ತಾಯಿಸಿದರು.
‘ ಸರ್ಕಾರ ಹುಬ್ಬಳ್ಳಿ ಗಲಾಟೆ ವಿಚಾರದಲ್ಲಿ ಅಮಾಯಕರ ಮೇಲಿನ ಹಿಂಪಡೆದಿರುವುದು ಸ್ವಾಗತಾರ್ಹ. ಒಂದು ಸಮುದಾಯದ ಹೆಸರು ಮುಂದಿಟ್ಟುಕೊಂಡು ಬಿಜೆಪಿಯವರು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ತಪ್ಪು. ಟೀಕಿಸುವುದೇ ಆದರೆ ಯಾಕೆ ಎಲ್ಲ ಪ್ರಕರಣಗಳನ್ನೂ ವಿರೋಧಿಸಲಿಲ್ಲ?’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.