ADVERTISEMENT

ಚನ್ನಪಟ್ಟಣ ಉಪಚುನಾವಣೆ | ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ: ತನ್ವೀರ್‌ ಸೇಠ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 12:50 IST
Last Updated 17 ಅಕ್ಟೋಬರ್ 2024, 12:50 IST
ತನ್ವೀರ್‌ ಸೇಠ್‌, ಶಾಸಕ
ತನ್ವೀರ್‌ ಸೇಠ್‌, ಶಾಸಕ   

ಮೈಸೂರು: ‘ಮೈತ್ರಿ ಪಕ್ಷಗಳ ಪೈಕಿ ಒಬ್ಬರ ಕೈಯಲ್ಲಿ ಹಾರೆ, ಇನ್ನೊಬ್ಬರ ಕೈಯಲ್ಲಿ ಗುದ್ದಲಿ ಇದೆ. ಚನ್ನಪಟ್ಟಣದ ಉಪಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಒಬ್ಬರು ಗುಂಡಿ ತೋಡುತ್ತಾರೆ, ಮತ್ತೊಬ್ಬರು ಎಳೆಯುತ್ತಾರೆ. ಅಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ’ ಎಂದು ಶಾಸಕ ತನ್ವೀರ್‌ ಸೇಠ್‌ ‍ಪ್ರತಿಪಾದಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಚನ್ನಪಟ್ಟಣದಲ್ಲಿ ಅಭ್ಯರ್ಥಿಯಾಗುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಡಿ.ಕೆ. ಸುರೇಶ್‌ ಸ್ಪರ್ಧಿಸಬೇಕೆಂಬುದು ಮತದಾರರ ಆಶಯ. ರಾಜಕೀಯವಾಗಿ ಸುರೇಶ್‌ ಮುಂದುವರಿಯಬೇಕೆಂಬುದು ಪಕ್ಷಕ್ಕಿರುವ ಅನಿವಾರ್ಯತೆ. ನಾಲ್ಕೈದು ದಿನದಲ್ಲಿ ಅಭ್ಯರ್ಥಿ ಘೋಷಣೆಯಾಗಲಿದೆ. ಸಾಮಾಜಿಕ ನ್ಯಾಯದಂತೆ ಶಿಗ್ಗಾವಿಯಲ್ಲಿ ಮುಸ್ಲಿಮರಿಗೆ ಟಿಕೆಟ್‌ ನೀಡುವಂತೆ ಕೋರಿದ್ದೇವೆ’ ಎಂದರು.

ರಾಜೀನಾಮೆ ಸ್ವಾಗತಾರ್ಹ: ‘ಆರೋಗ್ಯದ ದೃಷ್ಟಿಯಿಂದ ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಿದ್ದರಾಮಯ್ಯ ಆಪ್ತರು. ಪಾರದರ್ಶಕ ತನಿಖೆ ನಡೆಯಲಿ ಎಂದು ರಾಜೀನಾಮೆ ಕೊಟ್ಟಿರಬಹುದು. ಅದರಿಂದ ತನಿಖೆಗೆ ಒಳ್ಳೆಯದೇ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಹುಬ್ಬಳ್ಳಿ ಗಲಾಟೆ ವಿಚಾರದಲ್ಲಿ ಅಮಾಯಕರ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿರುವುದು ಸ್ವಾಗತಾರ್ಹ. ಒಂದು ಸಮುದಾಯದ ಹೆಸರನ್ನು ಮುಂದಿಟ್ಟುಕೊಂಡು ಬಿಜೆಪಿಯವರು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ತಪ್ಪು. ಟೀಕಿಸುವುದೇ ಆದರೆ, ಯಾಕೆ ಎಲ್ಲ ಪ್ರಕರಣಗಳನ್ನೂ ವಿರೋಧಿಸಲಿಲ್ಲ?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.