ಮೈಸೂರು: ಜಿಲ್ಲೆಯಲ್ಲಿ 2022ಕ್ಕೆ ಹೋಲಿಸಿದರೆ ಹೋದ ವರ್ಷ ಕ್ಷಯ ರೋಗಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.
2021ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ 4,100 ರೋಗಿಗಳು ಕಂಡುಬಂದಿದ್ದರು. 2022ರಲ್ಲಿ 4,030 ಮಂದಿಯನ್ನು ಗುರುತಿಸಲಾಗಿತ್ತು. 2023ರಲ್ಲಿ ಈ ಸಂಖ್ಯೆ 3,821 ಆಗಿದೆ. ಹೋದ ವರ್ಷ ಕಫ ಪರೀಕ್ಷೆಯ ಪ್ರಮಾಣವನ್ನೂ ಹೆಚ್ಚಿಸಲಾಗಿತ್ತು. 60 ಸಾವಿರ ಕಫ ಪರೀಕ್ಷೆ ನಡೆಸಿದ್ದು, ಅದರಲ್ಲಿ ಪಾಸಿಟಿವ್ ಕಂಡುಬಂದವರಿಗೆ ಇಲಾಖೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರದ ಮೂಲಕ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ನಗರದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಕೊಳೆಗೇರಿಗಳು ಜಾಸ್ತಿ ಇರುವುದರಿಂದ ಅಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳನ್ನು ಗುರುತಿಸಲಾಗಿದೆ. ಶ್ವಾಸಕೋಶದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿರುವುದನ್ನು ಗಮನಿಸಲಾಗಿದೆ. ಮೂಳೆ, ಚರ್ಮ, ಕಣ್ಣು, ಮಿದುಳು ಸೋಂಕಿಗೆ ಒಳಗಾಗುವವರ ಸಂಖ್ಯೆ ಕಡಿಮೆ ಇದೆ.
ಚಿಕಿತ್ಸೆಗೆ ವ್ಯವಸ್ಥೆ: ಶೇ 60ರಷ್ಟು ರೋಗಿಗಳಲ್ಲಿ ಶ್ವಾಸಕೋಶದ ಸೋಂಕು ಗುರುತಿಸಲಾಗಿದೆ. ತೀರಾ ಗಂಭೀರ ಸ್ಥಿತಿಯಲ್ಲಿ ಇರುವವರನ್ನು ಪಿಕೆಟಿಬಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲಿ ಸರಾಸರಿ 50 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಮಾಲಿಕ್ಯುಲರ್ ಸಿಬಿ–ನೆಟ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಕಫವನ್ನು ಮೈಕ್ರೋಸ್ಕೋಪ್‌ನಲ್ಲಿ ಪರೀಕ್ಷಿಸಿದಾಗ ಅದರಲ್ಲಿ 10 ಸಾವಿರ ಜಂತು ಇದ್ದರೆ ಕ್ಷಯರೋಗವಿದೆ ಎಂದು ಹೇಳಲಾಗುತ್ತದೆ. ಸಿಬಿ–ನೆಟ್ ಮೂಲಕ 100 ಜಂತುಗಳಿದ್ದರೂ ಪತ್ತೆ ಹಚ್ಚಲಾಗುತ್ತದೆ. ಇದರಿಂದ ಹೆಚ್ಚು ನಿಖರವಾಗಿ ರೋಗಿಗಳನ್ನು ಗುರುತಿಸಬಹುದಾಗಿದೆ. ಈ ಪರೀಕ್ಷೆಯನ್ನು ಖಾಸಗಿಯಾಗಿ ಮಾಡಿಸಬೇಕಾದರೆ ₹4 ಸಾವಿರ ತೆರಬೇಕಾಗುತ್ತದೆ. ಅದರೆ, ಪಿಕೆಟಿಬಿ ಸ್ಯಾನಿಟೋರಿಯಂ, ಕೆ.ಆರ್. ಆಸ್ಪತ್ರೆ, ಹೆಬ್ಬಾಳದ ಆಶಾಕಿರಣ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಕೊಡಲಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರದ ವೈದ್ಯಾಧಿಕಾರಿ ಡಾ.ಸಿರಾಜ್ ಅಹಮದ್.
‘ಕ್ಷಯ ರೋಗಿಗಳಿಗೆ 6 ತಿಂಗಳವರೆಗೆ ಉಚಿತವಾಗಿ ಮಾತ್ರೆಗಳನ್ನು ಒದಗಿಸಲಾಗುತ್ತಿದೆ. 2 ತಿಂಗಳಿಗೊಮ್ಮೆ ಕಫ ಪರೀಕ್ಷೆ ಮಾಡಲಾಗುತ್ತದೆ. ನೆಗೆಟಿವ್ ಬಂದರೆ ಗುಣಮುಖವಾಗಿದ್ದಾರೆ ಎಂದು ಪ್ರಮಾಣೀಕರಿಸಲಾಗುತ್ತದೆ’ ಎಂದು ತಿಳಿಸಿದರು.
‘ನಿಕ್ಷಯ್ ಪೋಷಣ್ ಯೋಜನೆಯಡಿ 6 ತಿಂಗಳವರೆಗೆ ಪ್ರತಿ ತಿಂಗಳೂ ₹500 ನೆರವನ್ನು ಅವರವರ ಬ್ಯಾಂಕ್ ಖಾತೆಗೆ ನೀಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ವರ್ಷದವರೆಗೂ ಹಣ ಕೊಡಲಾಗುವುದು. ಖಾಸಗಿಯವರು ಈ ರೋಗಿಗಳನ್ನು ದತ್ತು ಪಡೆದುಕೊಳ್ಳಲು ಅವಕಾಶವಿದೆ. ರೇಷನ್ ಕಿಟ್, ಪ್ರೋಟೀನ್ ಪುಡಿ ಮೊದಲಾದವುಗಳನ್ನು ಒದಗಿಸಬಹುದು. ಈ ಉಪಕ್ರಮವೂ ಜಿಲ್ಲೆಯಲ್ಲಿ ನಡೆಯುತ್ತಿದೆ. ಉತ್ತಮ ಪೌಷ್ಟಿಕ ಆಹಾರ ಸೇವಿಸಿದರೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಬೇಗನೆ ಗುಣಮುಖವಾಗಬಹುದು. ಇಂತಹ ದಾನಿಗಳನ್ನು ನಿಕ್ಷಯ್ ಮಿತ್ರ ಎಂದು ಕರೆಯಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಕ್ಷಯದಿಂದ ನಿಧನ ಪ್ರಮಾಣವು ಸರಾಸರಿ ಶೇ 7ರಷ್ಟು ಇದ್ದರೆ, ಮೈಸೂರು ಜಿಲ್ಲೆಯಲ್ಲಿ ಶೇ 5ರಷ್ಟಿದೆ. 2022ರಲ್ಲಿ ಶೇ 6ರಷ್ಟಿತ್ತು.
ಕ್ಷಯ ರೋಗ ನಿರ್ಮೂಲನೆಗೆ ಯತ್ನ ಸರ್ಕಾರಗಳಿಂದ ಹಲವು ರೀತಿಯಲ್ಲಿ ನೆರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.