ADVERTISEMENT

ಮೈಸೂರು | ಭ್ರೂಣಹತ್ಯೆ ಜಾಲ: ಖಾಸಗಿ ಕ್ಲಿನಿಕ್‌ ಮೇಲೆ ಕಣ್ಣು

ಮೈಸೂರಿನ 1,861 ಕ್ಲಿನಿಕ್‌, 286 ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಶೋಧಕ್ಕೆ ತಿಂಗಳ ಗಡುವು

ಆರ್.ಜಿತೇಂದ್ರ
Published 1 ಡಿಸೆಂಬರ್ 2023, 4:50 IST
Last Updated 1 ಡಿಸೆಂಬರ್ 2023, 4:50 IST
ಭ್ರೂಣ ( ಸಾಂಕೇತಿಕ ಚಿತ್ರ)
ಭ್ರೂಣ ( ಸಾಂಕೇತಿಕ ಚಿತ್ರ)   

ಮೈಸೂರು: ಭ್ರೂಣಹತ್ಯೆ ಜಾಲ ಪತ್ತೆ ನಂತರ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿರುವ ಖಾಸಗಿ ಕ್ಲಿನಿಕ್, ನರ್ಸಿಂಗ್‌ ಹೋಂ ಮತ್ತು ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಶೋಧ ಆರಂಭಿಸಿದೆ.

ಜಿಲ್ಲೆಯಲ್ಲಿ ಒಟ್ಟು 1,861 ನೋಂದಾಯಿತ ಕ್ಲಿನಿಕ್‌ಗಳು ಹಾಗೂ 286 ಸ್ಕ್ಯಾನಿಂಗ್‌ ಕೇಂದ್ರಗಳಿವೆ. ನೋಂದಣಿಯೇ ಆಗದ ಕ್ಲಿನಿಕ್‌ಗಳೂ ಇದ್ದು, ಅವುಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಒಂದು ತಿಂಗಳಲ್ಲಿ ಶೋಧ ಮುಗಿಸಿ ವರದಿ ನೀಡುವಂತೆ ಜಿಲ್ಲಾಡಳಿತವು ಗಡುವು ನೀಡಿದ್ದು, ವರದಿಯನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ಸಲ್ಲಿಸಲಿದೆ.

ತಂಡ ರಚನೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಉಸ್ತುವಾರಿಯಲ್ಲಿ ತಾಲ್ಲೂಕುವಾರು ತಂಡಗಳನ್ನು ರಚಿಸಲಾಗಿದೆ. ಆಯಾ ತಾಲ್ಲೂಕು ಆರೋಗ್ಯಾಧಿಕಾರಿಗಳು ನೇತೃತ್ವ ವಹಿಸಿದ್ದು, ಆರೋಗ್ಯ ಇಲಾಖೆಯ ನೋಡಲ್‌ ಅಧಿಕಾರಿ, ನಗರ ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಪ್ರತಿನಿಧಿಗಳು ತಂಡದಲ್ಲಿದ್ದಾರೆ. ಅನುಮತಿ ಪಡೆದ, ಪಡೆಯದ ಕೇಂದ್ರಗಳಿಗೆ ಭೇಟಿ ಕೊಡಲಿದ್ದಾರೆ. ಪರವಾನಗಿ ಇಲ್ಲದೆಯೇ ರೋಗಿಗಳ ಪರೀಕ್ಷೆ, ಚಿಕಿತ್ಸೆ ನೀಡುತ್ತಿದ್ದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಿದ್ದಾರೆ.

ADVERTISEMENT

ಪ್ರದರ್ಶನ ಕಡ್ಡಾಯ:
ಪ್ರಕರಣದ ಬೆನ್ನಲ್ಲೇ ಆರೋಗ್ಯ ಇಲಾಖೆಯು ಇಲ್ಲಿನ ಕ್ಲಿನಿಕ್‌, ಸ್ಕ್ಯಾನಿಂಗ್‌ ಕೇಂದ್ರಗಳಿಗೆ ಹಲವು ಸೂಚನೆಗಳನ್ನು ರವಾನಿಸಿದೆ.

‘ಪ್ರತಿ ವೈದ್ಯರು ಹಾಗೂ ಕೇಂದ್ರಗಳು ತಾವು ಪಡೆದ ಪರವಾನಗಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಪ್ರತಿ ಸ್ಕ್ಯಾನಿಂಗ್ ಕೇಂದ್ರವು ತಾನು ಭ್ರೂಣದ ಲಿಂಗಪತ್ತೆಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಣೆ ಮಾಡಿಕೊಳ್ಳಬೇಕು. ಸ್ಕ್ಯಾನಿಂಗ್ ಕೊಠಡಿಗೆ ಗರ್ಭಿಣಿಯರು, ಅವರ ಪತಿ ಹೊರತುಪಡಿಸಿ ಉಳಿದ ಯಾರಿಗೂ ಪ್ರವೇಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

‘ನಗರ ಸ್ಥಳೀಯ ಸಂಸ್ಥೆಗಳು ಕ್ಲಿನಿಕ್‌ಗಳಿಗೆ ಪರವಾನಗಿ ನೀಡುವ ಮುನ್ನ ಅಂತಹ ವೈದ್ಯರು ಕೆಎಂಆರ್‌ಎ ಅಡಿ ನೋಂದಣಿ ಮಾಡಿಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಜಿಲ್ಲಾಡಳಿತವು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.