ಮೈಸೂರು: ಕೊಡಗು ರಂಗಭೂಮಿ ಟ್ರಸ್ಟ್ ಇಲ್ಲಿನ ಕಿರು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ ‘ಸತ್ಯವನ್ನೇ ಹೇಳುತ್ತೇವೆ’ ನಾಟಕವು ಪೊಲೀಸ್ ಭದ್ರತೆಯೊಂದಿಗೆ ಪ್ರದರ್ಶನಗೊಂಡಿತು.
ಜಯಲಕ್ಷ್ಮಿಪುರಂ ಠಾಣಾ ಇನ್‌ಸ್ಪೆಕ್ಟರ್ ಕುಮಾರ್ ನೇತೃತ್ವದಲ್ಲಿ ಸುಮಾರು 30 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಒಂದು ಸಿಎಆರ್ ವಾಹನವನ್ನು ಕಲಾಮಂದಿರ ಆವರಣದಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು. ಎಸಿಪಿ ಅಶ್ವತ್ಥನಾರಾಯಣ ಭದ್ರತೆ ಪರಿಶೀಲಿಸಿದರು.
ನಾಟಕದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ‘ಸತ್ಯವನ್ನೇ ಹೇಳುತ್ತೇನೆ ಮೂರು ಗಂಟೆಯ ನಾಟಕ. ಚರಿತ್ರೆಯಲ್ಲಿ ಬಚ್ಚಿಡಲಾದ ವಿಷಯವನ್ನು ಉತ್ಖನನ ಮಾಡಿ, ವೇದಿಕೆಯ ಮುಂದೆ ತಂದಿದ್ದೇವೆ. 250 ಸೀಟ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಶೋಗಳ ಟಿಕೆಟ್ ಮಾರಾಟವಾಗಿದೆ’ ಎಂದರು.
‘ಎಸ್. ಶಿವಮೂರ್ತಿ, ವಿ.ಸಿ. ಚಿದಾರ್ಜುನ್, ಚೇತನ್ ಕಾಟೇನಹಳ್ಳಿ, ಪವನ್ ದೇಶಪಾಂಡೆ, ಸುನೀಲ್ ಪಟಾಕಿ, ಎಸ್. ವೈಭವ್‌ನಾಗ್, ಅನಿತಾ ಕಾರ್ಯಪ್ಪ, ಎಸ್.ಎಚ್. ಕಿರಣ್ ಪಾತ್ರವರ್ಗದಲ್ಲಿದ್ದು, ಸಂಗೀತ ನಿರ್ವಹಣೆಯನ್ನು ಶಿವಕುಮಾರ್, ಬೆಳಕಿನಲ್ಲಿ ಮಂಜುನಾಥ್ ಹಿರೇಮಠ್ ಮಾಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.