ADVERTISEMENT

ವಿಭಾಗಕ್ಕೊಂದು ಸರ್ಕಾರಿ ಪ್ರಕೃತಿ ಚಿಕಿತ್ಸಾ ಕಾಲೇಜು ಅಗತ್ಯ: ಹರೀಶ್‌ ಗೌಡ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:53 IST
Last Updated 21 ನವೆಂಬರ್ 2024, 15:53 IST
ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್‌ ಕಟ್ಟಡವನ್ನು ಗುರುವಾರ ಶಾಸಕ ಕೆ.ಹರೀಶ್ ಗೌಡ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್‌ ಕಟ್ಟಡವನ್ನು ಗುರುವಾರ ಶಾಸಕ ಕೆ.ಹರೀಶ್ ಗೌಡ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಥವಾ ವಿಭಾಗ ಮಟ್ಟದಲ್ಲಿ ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಮುಖ್ಯಮಂತ್ರಿ ಗಮನಸೆಳೆಯುತ್ತೇನೆ’ ಎಂದು ಶಾಸಕ ಕೆ.ಹರೀಶ್‌ ಗೌಡ ತಿಳಿಸಿದರು.

ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಕಾಲೇಜು ಹಾಗೂ ಬೋಧಕ ಆಸ್ಪತ್ರೆಯಿಂದ 7ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಪ್ರಯುಕ್ತ ‘ಆರೋಗ್ಯಕರ ಮುಪ್ಪು ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ’ ಶೀರ್ಷಿಕೆಯ ಪ್ರಕೃತಿ ಚಿಕಿತ್ಸಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ದೇಶದ ಪೂರ್ವಜರು ಪ್ರಕೃತಿ ಚಿಕಿತ್ಸೆಯಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದರು. ರಾಜ್ಯದಲ್ಲಿ ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಕಾಲೇಜು ಇರುವುದು ಮೈಸೂರಿನಲ್ಲಿ ಮಾತ್ರ ಎಂದು ತಿಳಿದು ಅಚ್ಚರಿ ವ್ಯಕ್ತಪಡಿಸಿದ ಶಾಸಕರು, ‘ರಾಜ್ಯಾದ್ಯಾಂತ ವಿದ್ಯಾರ್ಥಿಗಳು ಪ್ರಕೃತಿ ಚಿಕಿತ್ಸಾ ವ್ಯಾಸಂಗ ಮಾಡಲು ಮೈಸೂರಿಗೆ ಬರಬೇಕಿದೆ. ಇದನ್ನು ತಪ್ಪಿಸಲು ಸಮೀಪದಲ್ಲೇ ಆ ಶಿಕ್ಷಣ ಸಿಗುವಂತೆ ಮಾಡಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರು ವಿದೇಶದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಅನೇಕರು ಸರ್ಕಾರಿ ನೌಕರಿಯನ್ನೂ ಪಡೆದಿದ್ದಾರೆ. 2006ರಲ್ಲಿ ನಾಲ್ವರು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಇಲ್ಲಿ, ಈ ಸಾಲಿಗೆ 50 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಮುಂದಿನ ದಿನಗಳಲ್ಲಿ ದಾಖಲಾತಿ ಹೆಚ್ಚಾಗಲಿ’ ಎಂದು ಆಶಿಸಿದರು.

ಇದೇ ವೇಳೆ, ಕಾಲೇಜಿನ ವಿದ್ಯಾರ್ಥಿನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮಿನಾರಾಯಣ ಶೆಣೈ, ಪ್ರಾಚಾರ್ಯ ಡಾ.ಕೆ.ಎಸ್.ರಾಧಾಕೃಷ್ಣ ರಾಮರಾವ್, ಎಇಇ ಸಿ.ಪುಟ್ಟಸ್ವಾಮಿ, ಜಗದೀಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.