ADVERTISEMENT

ಕಪಿಲಾ ನದಿ ಪ್ರವಾಹ: ಬೊಕ್ಕಹಳ್ಳಿ ಜನರಿಗೆ ತಪ್ಪದ ಸಂಕಷ್ಟ; ಸ್ಥಳಾಂತರಕ್ಕೆ ಆಗ್ರಹ

ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ಗ್ರಾಮ

ಎಂ.ಮಹೇಶ್
Published 3 ಆಗಸ್ಟ್ 2024, 8:12 IST
Last Updated 3 ಆಗಸ್ಟ್ 2024, 8:12 IST
ಬೊಕ್ಕಹಳ್ಳಿಯಲ್ಲಿ ಕಪಿಲಾ ನದಿ ಪ್ರವಾಹದಿಂದ ಭತ್ತದ ಸಸಿ ಮಡಿ ನಾಶವಾಗಿರುವುದನ್ನು ರೈತರು ತೋರಿಸಿದರು –ಚಿತ್ರ: ಸುತ್ತೂರು ನಂಜುಂಡನಾಯಕ
ಬೊಕ್ಕಹಳ್ಳಿಯಲ್ಲಿ ಕಪಿಲಾ ನದಿ ಪ್ರವಾಹದಿಂದ ಭತ್ತದ ಸಸಿ ಮಡಿ ನಾಶವಾಗಿರುವುದನ್ನು ರೈತರು ತೋರಿಸಿದರು –ಚಿತ್ರ: ಸುತ್ತೂರು ನಂಜುಂಡನಾಯಕ   

ಬೊಕ್ಕಹಳ್ಳಿ (ಮೈಸೂರು ಜಿಲ್ಲೆ): ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿಯು ಕಪಿಲಾ ನದಿ ಪ್ರವಾಹದಿಂದಾಗಿ ಈ ಬಾರಿಯೂ ನಲುಗಿದೆ. ಇಡೀ ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆಯು ಪ್ರತಿ ವರ್ಷವೂ ನೆರೆಯೊಂದಿಗೆ ಕರಗುತ್ತಲೇ ಇದೆ!

ಈ ಗ್ರಾಮದ ಮೂರು ದಿಕ್ಕುಗಳಲ್ಲೂ ಕಪಿಲಾ ನದಿ ಹರಿಯುತ್ತದೆ. ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿಸಿದಾಗಲೆಲ್ಲಾ ಈ ಹಳ್ಳಿಯ ಬಹಳಷ್ಟು ಮನೆಗಳು ಜಲಾವೃತವಾಗುತ್ತವೆ. ಮಳೆಗಾಲ ಬಂತೆಂದರೆ ಆತಂಕದಲ್ಲೇ ಜೀವನ ನಡೆಸಬೇಕಾದ ಪರಿಸ್ಥಿತಿ ಅಲ್ಲಿನ ನಿವಾಸಿಗಳದ್ದಾಗಿದೆ. ವಿಶೇಷವಾಗಿ ನದಿಯ ಅಂಚಿನಲ್ಲೇ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುತ್ತದೆ. ನೆರೆ ಬಂದಾಗಲೆಲ್ಲಾ ಅವರನ್ನು ಸುರಕ್ಷಿತ ಜಾಗಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವುದು ನಡೆಯುತ್ತಲೇ ಇದೆ. ಜಮೀನುಗಳು ಕೂಡ ಜಲಾವೃತವಾಗುತ್ತವೆ.

ಈ ಬಾರಿಯೂ ಗ್ರಾಮದಲ್ಲಿ ಪ್ರವಾಹ ಉಂಟಾಗಿದ್ದು, ನದಿಯು ಜಮೀನುಗಳನ್ನೆಲ್ಲಾ ಆವರಿಸಿದೆ. ತೆಂಗಿನ ತೋಟಗಳ ನಡುವೆ ನದಿ ಹರಿಯುತ್ತಿದೆ. ಅಲ್ಲಲ್ಲಿ ಕಬ್ಬಿನ ಬೆಳೆ, ಅಲಸಂದೆ, ಉದ್ದು, ಎಳ್ಳು ಹಾಗೂ ಹೆಸರು ಕಾಳು ಬೆಳೆಯನ್ನು ರೈತರು ಹಾಕಿದ್ದರು. ಆ ಬೆಳೆಗಳು ನೀರಿನಲ್ಲಿ ಮುಳುಗಡೆ ಆಗಿದ್ದು ಕೊಳೆಯುತ್ತಿವೆ. ಪೈರುಗಳು ನಾಶವಾಗಿವೆ. ಆ ಬೆಳೆ ಇನ್ನು ಕೈಗೆ ಬರುವುದು ಅಸಾಧ್ಯವಾದ ಮಾತು ಎಂಬ ಸ್ಥಿತಿಯಲ್ಲಿದೆ.

ADVERTISEMENT

ಪ್ರವಾಹದ ಭೀತಿ: ಇಲ್ಲಿನ ಜನರು ಪ್ರತಿ ವರ್ಷ ಸಂಕಷ್ಟ ಅನುಭವಿಸುವುದು ತಪ್ಪಿಲ್ಲ. ಈ ಬಾರಿ ಈಗಾಗಲೇ ಎರಡು ಬಾರಿ ಜಮೀನುಗಳು ಹಾಗೂ ಮನೆಗಳು ಮುಳುಗಡೆಯಾಗಿವೆ. ಇನ್ನೂ ಮಳೆಗಾಲ ಮುಂದುವರಿಯಲಿದ್ದು, ಪ್ರವಾಹದ ಭೀತಿಯಲ್ಲೇ ಅವರು ‘ಮುಳುಗಿದ್ದಾರೆ’.

ಮುಂಜಾಗ್ರತಾ ಕ್ರಮವಾಗಿ, ನದಿಯಂಚಿನಲ್ಲಿರುವ ಕೆಂಡನಾಯಕರ ಮನೆ ಸೇರಿದಂತೆ 36 ಕುಟುಂಬಗಳನ್ನು ಗ್ರಾಮದ ಮಧ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ‌ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ನೀರು ನುಗ್ಗಿದ್ದರಿಂದಾಗಿ ಮನೆಗೆ ಹಾಗೂ ಅವುಗಳಲ್ಲಿನ ಸಾಮಗ್ರಿಗಳಿಗೆ ಹಾನಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಗ್ರಾಮದ ಜನರು ಹಾಗೂ ಕೃಷಿಕರು ಸೂಕ್ತ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.

ನಾಶವಾದ ಸಸಿ ಮಡಿಗಳು: ಕಪಿಲಾ ನದಿ ಉಕ್ಕಿ ಹರಿದಿದ್ದರಿಂದ ಗ್ರಾಮದಲ್ಲಿ 18ಕ್ಕೂ ಹೆಚ್ಚು ಮಂದಿ ರೈತರ ಭತ್ತದ ಸಸಿ ಮಡಿ ಹಾಳಾಗಿದೆ. ಭತ್ತದ ಬೀಜ ಮೊಳಕೆ ಬಾರದೆ ನಷ್ಟ ಅನುಭವಿಸಿದ್ದಾರೆ. ನಂಜುಂಡಸ್ವಾಮಿ, ಸಿದ್ದೇಗೌಡ, ಲಕ್ಷ್ಮಮ್ಮ, ಮರೀಗೌಡ, ಶಿವಣ್ಣ, ರಾಮಲಿಂಗ ನಾಯಕ, ಶಂಕರ್ ನಾಯಕ, ಶ್ರೀನಿವಾಸ, ಗುರುಸ್ವಾಮಿ ಮೊದಲಾದವರ ಸಸಿಮಡಿಗಳು ನಾಶವಾಗಿವೆ.

‘2018ರಲ್ಲೂ ಪ್ರವಾಹ ಬಂದಿತ್ತು.‌ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದಾಗ ನಷ್ಟ ಇದ್ದದ್ದೆ. ಆದ್ದರಿಂದ ಇಡೀ ಊರನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು. ಇಲ್ಲಿರುವ 1,750 ಎಕರೆಯಲ್ಲಿ 770 ಎಕರೆಯಷ್ಟು ಜಮೀನು ಮುಳುಗಡೆಯಾಗಿದೆ. ವಿವಿಧ ಬೆಳೆಗಳು ಕೂಡ ಹಾಳಾಗಿವೆ’ ಎಂದು ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಲ್ಲಲ್ಲಿ ಭತ್ತ ಕೊಳೆತು‌ ಹೋಗಿದೆ. ಒಂದು ವೇಳೆ ನೆರೆ ಇಳಿದು ನೀರಿನ ಪ್ರಮಾಣ ಕಡಿಮೆಯಾದಲ್ಲಿ ಭೂಮಿ ಹದಗೊಳ್ಳಲು ಬಹಳಷ್ಟು ದಿನಗಳೇ ಬೇಕು. ಕೆಲವರು ಹಾಕಿದ್ದ ಭತ್ತದ ‘ಒಟ್ಟಲು’ ಕೊಳೆತುಹೋಗಿವೆ. ಆದ್ದರಿಂದ, ಭತ್ತದ ಬಿತ್ತನೆ ಬೀಜವನ್ನು ವಿತರಿಸಬೇಕು. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.

ನದಿಯ ಮತ್ತೊಂದು ಅಂಚಿನಲ್ಲಿರುವ ಕುಳ್ಳಅಂಕಯ್ಯನಹುಂಡಿಯಲ್ಲೂ ಕೆಲವು ಮನೆ ಹಾಗೂ ಜಮೀನುಗಳು ಜಲಾವೃತವಾಗಿವೆ.

ಸಿದ್ದರಾಮಯ್ಯ
ಕಪಿಲಾ ನದಿ ಪ್ರವಾಹದಿಂದಾಗಿ ಬೊಕ್ಕಹಳ್ಳಿಯಲ್ಲಿ ಜಮೀನುಗಳು ತೆಂಗಿನ ತೋಟಗಳು ಮುಳುಗಿವೆ –ಪ್ರಜಾವಾಣಿ ಚಿತ್ರ/ ಎಂ. ಮಹೇಶ
ಕಪಿಲಾ ನದಿ ಪ್ರವಾಹದಿಂದ ತೊಂದರೆ 36 ಕುಟುಂಬಗಳಿಗೆ ಕಾಳಜಿ ಕೇಂದ್ರವೇ ಆಸರೆ ಗ್ರಾಮದಲ್ಲೀಗ ಸಾಂಕ್ರಾಮಿಕ ಕಾಯಿಲೆಗಳ ಭೀತಿ!
ನಂಜನಗೂಡು ಹಾಗೂ ಆ ತಾಲ್ಲೂಕಿನಲ್ಲಿ ಪ್ರವಾಹಪೀಡಿತವಾಗಿರುವ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಲಿದ್ದೇನೆ
ಸಿದ್ದರಾಮಯ್ಯ ಮುಖ್ಯಮಂತ್ರಿ
ಇಲ್ಲಿನ ರೈತರು ಮತ್ತೊಮ್ಮೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮಳೆ ನಿಲ್ಲಲಿ ಹಾಗೂ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಲೆಂದು ಕಾಯುತ್ತಿದ್ದಾರೆ. ಅವರಿಗೆ ಸರ್ಕಾರ ನೆರವಾಗಬೇಕು
ಬೊಕ್ಕಹಳ್ಳಿ ನಂಜುಂಡಸ್ವಾಮಿ ರೈತ ಮುಖಂಡ
ಸಿಎಂ ಭೇಟಿ ಹಿನ್ನೆಲೆಯಲ್ಲಿ ಸೋಂಕು ನಿವಾರಕ!
ಕಬಿನಿ ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ನೆರೆ ಇಳಿಕೆಯಾಗುತ್ತದೆ. ಆದರೆ ಪ್ರವಾಹ ಬಂದು ಹೋದ ಸ್ಥಳದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸ್ವಚ್ಛತಾ ಕಾರ್ಯಕ್ಕೆ ಅಲ್ಲಿ ಆದ್ಯತೆಯೇ ದೊರೆತಿಲ್ಲ. ನದಿಯಂಚಿನಲ್ಲಿ ಬಯಲು ಮಲವಿಸರ್ಜನೆಯಿಂದಾಗಿ ವಾತಾವರಣ ಹಾಳಾಗುತ್ತಿದೆ. ಸಾಂಕ್ರಾಮಿಕ ಕಾಯಿಲೆಗಳು ಹರಡಲು ಕಾರಣವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಹ ಪರಿಸ್ಥಿತಿ ಅವಲೋಕಿಸಲು ಶುಕ್ರವಾರ ಭೇಟಿ ನೀಡಲಿದ್ದಾರೆ ಎಂದು ತಿಳಿಸಲಾಗಿತ್ತು. ಇದಕ್ಕಾಗಿ ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮುಖ್ಯಮಂತ್ರಿಯು ಪ್ರವಾಸ ಕಾರ್ಯಕ್ರಮವನ್ನು ಕೊನೇ ಕ್ಷಣದಲ್ಲಿ ಶನಿವಾರಕ್ಕೆ (ಆ.3) ಮುಂದೂಡಿದರು. ಮುಖ್ಯಮಂತ್ರಿ ಬರುತ್ತಾರೆಂಬ ಕಾರಣಕ್ಕೆ ಗ್ರಾಮದ ಮುಖ್ಯ ರಸ್ತೆಯಿಂದ ನದಿಯ ಅಂಚಿನವರೆಗೂ ಡಿಡಿಟಿ ಪೌಡರ್ (ಸೋಂಕು ನಿವಾರಕ ಪುಡಿ) ಹಾಕುವ ಕೆಲಸವನ್ನು ಮಾಡಲಾಗಿತ್ತು! ಕಾಳಜಿ ಕೇಂದ್ರದ ಬಳಿಯೂ ಸ್ವಚ್ಛಗೊಳಿಸಲಾಗಿತ್ತು. ಎದುರಿನ ರಸ್ತೆಯಂಚಿನಲ್ಲಿ ಬೆಳೆದಿದ್ದ ಗಿಡಗಳನ್ನು ತೆರವುಗೊಳಿಸಲು ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ವೈದ್ಯಕೀಯ ತಂಡದವರೂ ಅಲ್ಲಿದ್ದರು. ಪ್ರವಾಹಪೀಡಿತ ಸ್ಥಳಗಳ ಜನರಿಗೆ ಕಾಳಜಿ ಕೇಂದ್ರದಲ್ಲಿ ಬೆಳಿಗ್ಗೆ ಉಪಾಹಾರ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. 36 ಕುಟುಂಬದವರು ಇದರ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.