ಮೈಸೂರು: ಕೇಂದ್ರ ಸರ್ಕಾರದ ಮಹತ್ವದ ‘ಸ್ವಚ್ಛ ಸರ್ವೇಕ್ಷಣೆ 2021’ ಜ. 1ರಿಂದ ಆರಂಭವಾಗಿದ್ದು, ಮಾರ್ಚ್ 31ರವರೆಗೆ ನಡೆಯಲಿದೆ. ಒಟ್ಟು 3 ತಿಂಗಳ ಕಾಲ ನಡೆಯುವ ಈ ಸರ್ವೇಕ್ಷಣೆಯಲ್ಲಿ 6 ಸಾವಿರ ಅಂಕಗಳನ್ನು ನಿಗದಿಪಡಿಸಲಾಗಿದೆ.
ಕಳೆದ ಬಾರಿ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆಗೆ (ಸರ್ವೀಸ್ ಲೆವೆಲ್ ಪ‍್ರೊಗ್ರೆಸ್) 1,500 ಅಂಕಗಳು ಇದ್ದದ್ದನ್ನು ಈ ಬಾರಿ 2,400 ಅಂಕಗಳಿಗೆ, ನಾಗರಿಕರ ಪ್ರತಿಕ್ರಿಯೆಗೆ 1,500 ಇದ್ದ ಅಂಕವನ್ನು 1,800ಕ್ಕೆ ಹಾಗೂ ಶೌಚಾಲಯ, ತ್ಯಾಜ್ಯ ನೀರಿನ ಮರುಬಳಕೆ, ಬಯಲು ಶೌಚ ಮುಕ್ತ (ಸರ್ಟಿಫಿಕೇಶನ್) ವಿಭಾಗದ ಅಂಕವನ್ನು 1,500ದಿಂದ 1,800ಕ್ಕೆ ಹೆಚ್ಚಿಸಲಾಗಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಗರಿಕರ ಪ್ರತಿಕ್ರಿಯೆ ವಿಭಾಗದಲ್ಲಿ ಕಳೆದ ಬಾರಿ ಮೈಸೂರು ತೀರಾ ಹಿಂದೆ ಬಿದ್ದಿತ್ತು. ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆದ ಇಂದೋರ್ ನಗರವು ಈ ವಿಭಾಗದಲ್ಲಿ 1,416 ಅಂಕಗಳನ್ನು ಪಡೆದಿದ್ದರೆ, ಮೈಸೂರು ಕೇವಲ 1,181 ಅಂಕಗಳಷ್ಟೇ ಪಡೆದಿತ್ತು. ಅದರಲ್ಲೂ ‘ಸ್ವಚ್ಛತಾ ಆ್ಯಪ್’ ಬಳಕೆಯಲ್ಲಿ ಇಂದೋರ್ 332 ಅಂಕಗಳನ್ನು ಗಳಿಸಿದ್ದರೆ, ಮೈಸೂರು ಕೇವಲ 100 ಅಂಕಗಳನ್ನೇ ಗಳಿಸಿತ್ತು ಎಂದು ಅವರು ಹೇಳಿದರು.
ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಾತನಾಡಿ, ‘ಈ ಬಾರಿಯಾದರೂ ಮೈಸೂರು ‘ಸ್ವಚ್ಛ ನಗರಿ’ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಲು ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
‘ವಾಟರ್ ಪ್ಲಸ್’ ವಿಭಾಗದಲ್ಲಿ ಈ ಬಾರಿ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಅವುಗಳನ್ನು ಉದ್ಯಾನಗಳ ಗಿಡಗಳಿಗೆ ಹಾಗೂ ಕಾರಂಜಿಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಪಾಲಿಕೆಯ ಕೌನ್ಸಿಲ್ ಸಭೆಯು ಅನುಮೋದನೆ ನೀಡಿದೆ. ಈ ಎರಡೂ ಕ್ರಮಗಳಿಂದ ಹೆಚ್ಚಿನ ಅಂಕ ಗಳಿಸುವ ಸಾಧ್ಯತೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯವರೆಗೂ ಕೇವಲ ಒಂದು ತಿಂಗಳು ಮಾತ್ರ ಸಮೀಕ್ಷೆ ನಡೆಯುತ್ತಿತ್ತು. ಆದರೆ, ಈ ಬಾರಿ ಬರೋಬರಿ 3 ತಿಂಗಳು ನಡೆಯಲಿದೆ. ಇದರಿಂದ ಸಹಜವಾಗಿಯೇ ಅಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಈ ಬಾರಿ ಪೌರಕಾರ್ಮಿಕರ ಮೇಲೆ ಹೆಚ್ಚಿನ ಒತ್ತಡ ಹಾಕುವುದಿಲ್ಲ ಎಂದು ಹೇಳಿದರು.
ಸ್ಪರ್ಧೆಯಲ್ಲಿರುವ ಸ್ಥಳೀಯ ಸಂಸ್ಥೆಗಳ ಸಂಖ್ಯೆ: ಈ ಬಾರಿ 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ 53 ಸ್ಥಳೀಯ ಸಂಸ್ಥೆಗಳು ಹಾಗೂ 1ರಿಂದ 10 ಲಕ್ಷದವರೆಗೆ ಜನಸಂಖ್ಯೆಯುಳ್ಳ 423 ಸ್ಥಳೀಯ ಸಂಸ್ಥೆಗಳು, 1 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ 3,898 ಸ್ಥಳೀಯ ಸಂಸ್ಥೆಗಳು ಸ್ಪರ್ಧೆಯಲ್ಲಿದ್ದರೆ, 50 ಸಾವಿರದಿಂದ 1 ಲಕ್ಷದವರೆಗೆ 544, 25 ಸಾವಿರದಿಂದ 50 ಸಾವಿರದವರೆಗೆ 1,011, 25 ಸಾವಿರಕ್ಕಿಂತ ಕಡಿಮೆ ಇರುವ 2,343 ಸ್ಥಳೀಯ ಸಂಸ್ಥೆಗಳು ಸ್ಪರ್ಧೆಯಲ್ಲಿವೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.