ADVERTISEMENT

ಮೈಸೂರು: ಕಿವುಡ– ಮೂಗರ ‘ದನಿ’, ರಂಗಭೂಮಿಯ ‘ರತ್ನ’

ರಂಗಕರ್ಮಿ ನ.ರತ್ನ ಒಡನಾಡಿಗಳ ಒಡಲಾಳ l ದಶಕಗಳ ರಂಗ ವಾತ್ಸಲ್ಯ, ಸ್ನೇಹ ನೆನೆದ ‘ಹವ್ಯಾಸಿ’ಗಳು

ಮೋಹನ್ ಕುಮಾರ ಸಿ.
Published 20 ಜೂನ್ 2024, 7:56 IST
Last Updated 20 ಜೂನ್ 2024, 7:56 IST
<div class="paragraphs"><p>ಮೈಸೂರಿನ ಕಲಾಮಂದಿರದ ‘ಕಿಂದರಿಜೋಗಿ’ ಆವರಣದಲ್ಲಿ ಕಲಾವಿದರು, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು, ರಂಗಕರ್ಮಿ ನ.ರತ್ನ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು&nbsp; </p></div>

ಮೈಸೂರಿನ ಕಲಾಮಂದಿರದ ‘ಕಿಂದರಿಜೋಗಿ’ ಆವರಣದಲ್ಲಿ ಕಲಾವಿದರು, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು, ರಂಗಕರ್ಮಿ ನ.ರತ್ನ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು 

   

-ಪ್ರಜಾವಾಣಿ ಚಿತ್ರ

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯನ್ನು ದೇಶಕ್ಕೆ ಮಾದರಿ ಸಂಸ್ಥೆಯಾಗಿ ರೂಪಿಸುವಲ್ಲಿ ಪಾತ್ರ ವಹಿಸಿದ ಹಾಗೂ ಮೈಸೂರಿನಲ್ಲಿ ರಂಗ ಚಳವಳಿ ಮುನ್ನಡೆಸಿದ ರಂಗಕರ್ಮಿ ನ.ರತ್ನ ಅವರ ಅಂತಿಮ ದರ್ಶನ ಪಡೆಯಲು ಬುಧವಾರ ಅಲ್ಲಿ ಬಂದಿದ್ದ ವಿದ್ಯಾರ್ಥಿಗಳು, ರಂಗಕರ್ಮಿಗಳು, ಕಲಾವಿದರು ಹಾಗೂ ಹೋರಾಟಗಾರರ ಕಣ್ಣಾಲಿಗಳು ತುಂಬಿಬಂದವು.

ADVERTISEMENT

ಸರಸ್ವತಿಪುರಂನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನಿವಾಸ ‘ಮಹಾಮನೆ’ಯಲ್ಲಿ ಎದುರಾದ ಸ್ನೇಹಿತರೊಂದಿಗೆ ಒಡನಾಟ ನೆನೆದರು. ಆಯಿಷ್‌ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಸಂಸ್ಥೆಯ ಬೆಳವಣಿಗೆಯಲ್ಲಿನ ಕೊಡುಗೆ ಸ್ಮರಿಸಿದರೆ, ಹವ್ಯಾಸಿ ರಂಗ ತಂಡಗಳ ಕಲಾವಿದರು–ನಿರ್ದೇಶಕರು ರತ್ನ ಅವರ ಪ್ರೋತ್ಸಾಹವನ್ನು ನೆನೆದು ಭಾವುಕರಾದರು. 

‘ರಂಗಭೂಮಿಯ ಆಲದಮರ’: ‘ಸಿಂಗಪುರಕ್ಕೆ ಅವರ ಮೊಮ್ಮಗನ ಘಟಿಕೋತ್ಸವಕ್ಕೆ ಹೋಗಿದ್ದು, ವಾಪಸಾದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಡಿದ ಕಡೇ ಮಾತು, ‘ಅಯಾನ್‌ ಶಾಂತಿ ಕುಟೀರ’ ನಾಟಕದ ಶೋಗಳಾಗಲಿವೆ, ತಯಾರಾಗಿ’. 60 ವರ್ಷಗಳ ಒಡನಾಟ ನಮ್ಮದು. ಅವರ ಒಳ್ಳೆಯ ಸ್ನೇಹವನ್ನು ವಿವರಿಸಲಾಗದು’ ಎಂದು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಭಾವುಕರಾದರು.

‘ಕನ್ನಡ ರಂಗಭೂಮಿಗೆ ಅವರ ಕೊಡುಗೆ ದೊಡ್ಡದು. ನನ್ನ ಬಾಳಸಂಗಾತಿ ಬಾಲನ್‌ ಅವರು ಸಮತೆಂತೋ ರಂಗ ತಂಡದಲ್ಲಿದ್ದರು. ಸಿಂಧುವಳ್ಳಿ ಅನಂತಮೂರ್ತಿ, ವಿಶ್ವನಾಥ ಮಿರ್ಲೆ, ದ್ವಾರಕಾನಾಥ್, ಎಚ್‌.ಎಂ.ಚನ್ನಯ್ಯ ತಂಡವನ್ನು ಕಟ್ಟಿದ್ದರು. ಬಾಲನ್‌ ಅವರನ್ನು ಮದುವೆಯಾದ ನಂತರ ನಾನೂ ತಂಡದ ನಾಟಕಗಳಲ್ಲಿ ಅಭಿನಯಿಸುತ್ತಿದ್ದೇನೆ. ಸಮತೆಂತೋ ನನ್ನ ತವರು ಮನೆಯಾಗಿತ್ತು’ ಎಂದು ಸ್ಮರಿಸಿದರು.

‘ಯು.ಆರ್.ಅನಂತಮೂರ್ತಿ, ರಾಜೀವ ತಾರಾನಾಥ ಎಲ್ಲರೂ ರತ್ನ ಅವರ ಸ್ನೇಹಿತರು. ವಾರದ ಹಿಂದಷ್ಟೇ ರಾಜೀವರನ್ನು ಕಳೆದುಕೊಂಡೆವು. ಇದೀಗ ರತ್ನ ಹೋಗಿದ್ದಾರೆ. ಮಾದರಿ ವ್ಯಕ್ತಿತ್ವಗಳವು’ ಎಂದು ಕಣ್ಣೀರಾದರು.

‘ವಾಕ್‌ ಮತ್ತು ಶ್ರವಣ ಸಮಸ್ಯೆಯ ಮಕ್ಕಳಿಗೆ ‘ಆಯಿಷ್‌’ ಇಂದು ಮಾತಾಗಿದೆ, ಕಿವಿಯಾಗಿದೆ. ಜೀವನ ಕಟ್ಟಿಕೊಟ್ಟಿದೆ. ಅಲ್ಲಿ ಕಲಿತ ವಿದ್ಯಾರ್ಥಿಗಳು ವಿಶ್ವದೆಲ್ಲೆಡೆ ಸೇವೆ ಮಾಡುತ್ತಿದ್ದಾರೆ. ಚಿಕಿತ್ಸೆ ಪಡೆದವರು ಸ್ವಾವಲಂಬಿ ಜೀವನ ನಡೆಸಿದ್ದಾರೆ. ಅದರ ಹಿಂದಿನ ಚೇತನವಾಗಿದ್ದರು. ಮೈಸೂರು ರಂಗಭೂಮಿಯ ‘ರತ್ನ’ವಾಗಿದ್ದರು’ ಎಂದರು.

ಪ್ರಸಾದ್ ಕುಂದೂರು
ಎಚ್.ಜನಾರ್ಧನ್
ಪ್ರೊ.ಎಂ.ಪುಷ್ಪಾವತಿ
ರಾಜಶೇಖರ ಕದಂಬ
ಕೋಟಿಗಾನಹಳ್ಳಿ ರಾಮಯ್ಯ
ನಾ.ನಾಗಚಂದ್ರ
ರಾಮೇಶ್ವರಿ ವರ್ಮ

Cut-off box - ‘ತಂದೆಯಂತೆ ಹವ್ಯಾಸಿಗಳ ಪೋಷಿಸಿದ್ದರು’ ಮಹಾರಾಜ ಕಾಲೇಜಿನಲ್ಲಿ ‘ನೆಳಲು ಬೆಳಕು’ ವಿದ್ಯಾರ್ಥಿಗಳ ರಂಗ ತಂಡಕ್ಕೆ ರತ್ನ ಪ್ರೋತ್ಸಾಹ ನೀಡಿದ್ದರು. ಆಯಿಷ್‌ನಲ್ಲೂ ನಾಟಕ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ನಾನು ಎರಡು ಬಾರಿ ಅತ್ಯುತ್ತಮ ನಟ ಪ್ರಶಸ್ತಿ ತೆಗೆದುಕೊಂಡಿದ್ದೆ. ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದವರಿಗೆ ಉತ್ತೇಜನ ಕೊಡುತ್ತಿದ್ದರು. ಅವರ ಸ್ಫೂರ್ತಿಯಿಂದಲೇ ‘ನೆಬೆ’ ಕಾಲೇಜು ನಾಟಕೋತ್ಸವ ಆರಂಭಿಸಿದ್ದೆವು. ಅದರಿಂದ 25ಕ್ಕೂ ಹೆಚ್ಚು ಕಾಲೇಜುಗಳಲ್ಲಿ ರಂಗ ತಂಡಗಳು ಹುಟ್ಟಿಕೊಂಡಿದ್ದವು. ಹವ್ಯಾಸಿ ರಂಗ ತಂಡಗಳಿಗೆ ಆಧಾರವಾಗಿದ್ದರು. ಪ್ರೊ.ಸಂಪತ್‌ ಗುರುರಾಜರಾವ್‌ ಅವರೊಂದಿಗೆ ಇಂಗ್ಲಿಷ್‌ ಥಿಯೇಟರ್‌ ಕ್ಲಬ್ ಸ್ಥಾಪಿಸಿದ್ದರು. ಅವರ ರಂಗ ಪರಂಪರೆ ನೆರಳಿನಲ್ಲಿ ನೂರಾರು ಕಲಾವಿದರು ತಂತ್ರಜ್ಞರು ಹೊರಹೊಮ್ಮಿದ್ದಾರೆ. ಅವರ ‘ಸಮತೆಂತೋ’ ತಂಡದ ಗೆಳೆಯರು ನಾಟಕಕ್ಕಷ್ಟೇ ಸೀಮಿತವಾಗಿರಲಿಲ್ಲ. ಅದರಾಚೆಗೆ ಮಾನವೀಯ ಕಾರ್ಯಗಳನ್ನು ಮಾಡಿದ್ದರು. ಘನ ವ್ಯಕ್ತಿತ್ವ ಅವರದ್ದು. ಅವರ ನಿವಾಸ ‘ಮಹಾಮನೆ’ಯು ವ್ಯಕ್ತಿತ್ವಗಳನ್ನು ರೂಪಿಸಿತು.  ಅವರು ರಜೆಯಲ್ಲಿ ಬೇರೆಡೆ ತೆರಳಿದ್ದಾಗ ‘ಮಹಾಮನೆ’ಯಲ್ಲಿಯೇ ನಾಟಕದ ಗೆಳೆಯರೆಲ್ಲ ಉಳಿಯುತ್ತಿದ್ದೆವು. ಹಿಂದಿನ ಮನೆಯಲ್ಲಿದ್ದ ಬಾಡಿಗೆಯವರು ಹುಡುಗರದ್ದು ರಾತ್ರಿಯೆಲ್ಲ ಗಲಾಟೆಯೆಂದು ದೂರಿದ್ದರು. ನಾಟಕದವರೇ ಹಾಗೆ. ಬೇಕಿದ್ದರೆ ನೀವೇ ಮನೆ ಬಿಟ್ಟು ಹೋಗಬಹುದೆಂದು ರತ್ನ ಹೇಳಿದ್ದರು. ತಂದೆಯಂತೆ ನಮ್ಮನ್ನು ಪೋಷಿಸಿದ್ದರು. ಕನ್ನಡದಲ್ಲಿ ಅಸಂಗತ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದರು. ನಾಟಕ ಸಾಹಿತ್ಯಕ್ಕೆ ಅವರ ಕೊಡುಗೆ ದೊಡ್ಡದು. ಅಯಾನ್‌ ಶಾಂತಿ ಕುಟೀರ ನಾಟಕವನ್ನು ಇತ್ತೀಚೆಗೆ ಬರೆದಿದ್ದರು. 90 ವರ್ಷದಲ್ಲೂ ಜೀವನೋತ್ಸಾಹವಿತ್ತು. –‍ಪ್ರಸಾದ್‌ ಕುಂದೂರು ರಂಗಕರ್ಮಿ

Cut-off box - ‘ಪ್ರಥಮ ತಂಡದ ಪ್ರಮುಖರು’ ರಂಗಭೂಮಿ ಎಲ್ಲ ಸುಳ್ಳುಗಳ ಮಧ್ಯೆ ಘನವಾದ ಸತ್ಯ ಹೇಳುವ ಕಲಾ ಮಾಧ್ಯಮ. ಇಲ್ಲಿ ದುಡಿಯುವವರಿಗೆ ಕಷ್ಟಗಳು ಬಹಳ. ಯಾವುದಕ್ಕೂ ತಲೆಬಾಗದೇ ಮಾನವೀಯ ಮೌಲ್ಯ ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮ ಮೇಲೆ ಹೊತ್ತುಕೊಂಡು ಮೈಸೂರಿನಲ್ಲಿ ರಂಗಭೂಮಿ ಕಟ್ಟಿದವರು ನ.ರತ್ನ. ‘ಸಮತೆಂತೋ’ ಮೈಸೂರಿನ ಮೊದಲ ಹವ್ಯಾಸಿ ತಂಡ. ಈ ತಂಡದ ಸದಸ್ಯರು ಕುಟುಂಬದಂತಿದ್ದರು. ರಂಗಭೂಮಿಯ ಎಲ್ಲ ಆಯಾಮದ ಜನರನ್ನು ಗೌರವದಿಂದ ತಮ್ಮ ಒಡಲಿಗೆ ಹಾಕಿಕೊಂಡು ಸಲಹಿದರು. ಆ ತಂಡ ಈ ತಂಡವೆಂದು ಭೇದ ಮಾಡಲಿಲ್ಲ. ವಚನಕಾರರ ಕಲ್ಯಾಣದಂತೆ ‘ಮಹಾಮನೆ’ ಇತ್ತು. ದೊಡ್ಡ ಮನಸ್ಸುಗಳನ್ನು ರೂಪಿಸಿದ್ದರು. ರಂಗಮನೆಯನ್ನು ಕಟ್ಟಿದರು. ದೊಡ್ಡ ಕೊನೆ ಕೊಂಡಿಯೊಂದು ಇದೀಗ ಕಳಚಿದೆ. ನನ್ನ ಹಾಗೂ ಸುಮತಿ ಮದುವೆಯಲ್ಲಿ ರತ್ನ ದಂಪತಿಗಳು ತಂದೆ– ತಾಯಿಯಂತೆ ನಿಂತಿದ್ದರು. ಸರಳ ವಿವಾಹ ಮಾಡಿಸಿದ್ದರು. ಆಯಿಷ್‌ನಲ್ಲಿ ಕಲಿಯುವವರು ನಾಟಕ ಮಾಡಲೇಬೇಕೆಂದು ಪ್ರೀತಿಯಿಂದಲೇ ಒತ್ತಾಯಿಸುತ್ತಿದ್ದರು. ಸಾಂಸ್ಕೃತಿಕ ಒಡನಾಟವಿದ್ದರೆ ಶ್ರವಣ ಹಾಗೂ ವಾಕ್ ಸಮಸ್ಯೆಯಿದ್ದವರನ್ನು ಮತ್ತಷ್ಟು ಕಾಳಜಿಯಿಂದ ನೋಡಲು ಸಾಧ್ಯವಾಗುತ್ತದೆ ಎನ್ನುತ್ತಿದ್ದರು. ಹೀಗಾಗಿಯೇ ದೇಶದ ಎಲ್ಲ ಸಂಸ್ಥೆಗಳಿಗೆ ಆಯಿಷ್‌ ಮಾದರಿಯಾಗಿತ್ತು. –ಎಚ್‌.ಜನಾರ್ಧನ ರಂಗಕರ್ಮಿ

Cut-off box - ‘ಕೊನೆ ಬ್ಯಾಚಿನ ವಿದ್ಯಾರ್ಥಿಯೆಂಬ ಹೆಮ್ಮೆ’ ಪಠ್ಯದಲ್ಲಿರುವ ವಿಷಯಗಳನ್ನು ಹೇಳಿ ಕೊಡುವ ಅನೇಕ ಗುರುಗಳ ನಡುವೆ ಪಠ್ಯೇತರ ವಿಷಯಗಳನ್ನು ಬೋಧಿಸುವ ಗುರುಗಳು ಅಪರೂಪ. ಇಂಥ ಅಪರೂಪದಲ್ಲೇ ಅಪರೂಪ ನ.ರತ್ನ ಸರ್. 1989ರಲ್ಲಿ ಅವರ ಕೊನೆ ಬ್ಯಾಚಿನ ವಿದ್ಯಾರ್ಥಿ ನಾನೆಂಬುದೇ ಹೆಮ್ಮೆ.  ಪಠ್ಯದಲ್ಲಿ ಇಲ್ಲದಿರುವ ಮಾನವೀಯತೆ ಕರುಣೆ ಬದುಕಿನ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು. ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದರು. ನಮಗೆಲ್ಲ ರಂಗಭೂಮಿ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಸಂಸ್ಥೆಯ ನಿರ್ದೇಶಕಿಯಾಗಿ ನೇಮಕವಾದಾಗ ಖುಷಿ ಪಟ್ಟಿದ್ದರು.  ಭಾಷಾ ತೊಂದರೆ ಮತ್ತು ಶ್ರವಣ ಸಮಸ್ಯೆ ಪರಿಹರಿಸಲು ಅವರು ನಡೆಸಿದ ಅಧ್ಯಯನಗಳು ಮತ್ತು ಸಂಶೋಧನೆಗಳು ಮಾರ್ಗಸೂಚಿಯಾಗಿವೆ. ಭಾಷಾ ವಿಜ್ಞಾನ ಮತ್ತು ಧ್ವನಿ ವಿಜ್ಞಾನದಲ್ಲಿ ಸಂಸ್ಥೆಯು ಶ್ರೇಷ್ಠ ಶಿಕ್ಷಣವನ್ನು ನೀಡುತ್ತಿದೆ.  ಸಂಸ್ಥೆಯ ಮೊದಲ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಅದರ ಬೆಳವಣಿಗೆಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಶ್ರವಣ ಸಾಧನಗಳು ಸೇರಿದಂತೆ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನಗಳನ್ನು ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಪ್ರೊ.ಎಂ.ಪುಷ್ಪಾವತಿ. ಆಯಿಷ್‌ ನಿರ್ದೇಶಕಿ

Cut-off box - ‘ರಂಗದ ಎಲ್ಲ ಮಜಲುಗಳಲ್ಲೂ ಕೆಲಸ’ ‘ನಾಟಕಕಾರರಾಗಿ ನಟರಾಗಿ ನಿರ್ದೇಶಕರಾಗಿ ರಂಗಭೂಮಿಯ ಎಲ್ಲಾ ಮಜಲುಗಳಲ್ಲೂ ಕೆಲಸ ಮಾಡಿದರು. ಸಮತೆಂತೋ ರೂವಾರಿಗಳಲ್ಲೊಬ್ಬರು. ಅವರೇ ಬರೆದ ನಾಟಕ ಅಯಾನ್ ಶಾಂತಿ ಕುಟೀರದಲ್ಲಿ ಅವರೊಂದಿಗೆ ಅಭಿನಯಿಸಿದ್ದೆ. ಹತ್ತಕ್ಕೂ ಹೆಚ್ಚು ನಾಟಕಗಳಲ್ಲಿ ರಂಗ ವೇದಿಕೆ ಹಂಚಿಕೊಂಡಿರುವೆ’ ಎಂದು ರಂಗಕರ್ಮಿ ರಾಜಶೇಖರ ಕದಂಬ ಸ್ಮರಿಸಿದರು. ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ‘ಇಂದು ಆಕಸ್ಮಿಕವಾಗಿ ಮೈಸೂರಿಗೆ ಬಂದೆ. ನ.ರತ್ನ ಅವರು ತೀರಿಹೋಗಿದ್ದಾರೆಂದು ಬೆಳಿಗ್ಗೆ ತಿಳಿಯಿತು. ಪಾರ್ಥಿವ ಶರೀರದ ದರ್ಶನ ಸಿಕ್ಕಿತು. ರಂಗಭೂಮಿಯಲ್ಲಿ ನವ್ಯ ಅಲೆ ಬಂದಾಗ ಹುಟ್ಟಿದ ನಾಟಕಗಳಲ್ಲಿ ನ.ರತ್ನ ಅವರ ಪ್ರಯೋಗಗಳು ಬಹಳ ದೊಡ್ಡವು. ಅವರು ಪ್ರಯೋಗಶೀಲ ನಾಟಕಕಾರ’ ಎಂದರು. ‘ಮೈಸೂರು ಆಕಾಶವಾಣಿಯಲ್ಲಿ ಅವರ ಸಂದರ್ಶನ ಪ್ರಸಾರ ಆಗುತ್ತಿತ್ತು. ಮೊನ್ನೆ ತಾನೆ ನಾಟಕವೊಂದರಲ್ಲಿ ಅಭಿನಯಿಸಿದ್ದರು. ಅವರು ನನ್ನ ರಂಗ ಗುರುಗಳು. ಅವರೊಟ್ಟಿಗೆ ಅಭಿನಯಿಸಿದ್ದೆ’ ಎಂದು ನಾ.ನಾಗಚಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.