ಮೈಸೂರು: ವಿಶ್ವ ರಂಗಭೂಮಿ ದಿನವನ್ನು ಸಡಗರ, ಸಂಭ್ರಮದಿಂದ ಬುಧವಾರ ನಗರದಲ್ಲಿ ಆಚರಿಸಲಾಯಿತು.
ರಂಗಾಯಣವು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಭೂಮಿಗೀತ ರಂಗ ಮಂದಿರದಲ್ಲಿ ನಡೆಸುವ ಮೂಲಕ ರಂಗಭೂಮಿ ದಿನವನ್ನು ಆಚರಿಸಿತು. ಇದಕ್ಕೆ ಭಾರತೀಯ ರಂಗಶಿಕ್ಷಣ ಕೇಂದ್ರವು ಸಾಥ್ ನೀಡಿತು.
ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭಗೊಂಡಿತು. ನಂತರ, ರಂಗಭೂಮಿಯ ಮಹತ್ವ ಕುರಿತು ರಂಗ ನಿರ್ದೇಶಕ ಚನ್ನಕೇಶವ, ರಂಗಕರ್ಮಿ ಶಶಿಧರ್ ಭಾರಿಘಾಟ್, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕಲಾವಿದ ಎಸ್.ರಾಮನಾಥ್ ಅವರು ಅನಿಸಿಕೆಗಳನ್ನು ಹಂಚಿಕೊಂಡರು.
ನಂತರ, ದಿಗ್ವಿಜಯ ಹೆಗ್ಗೋಡು ಅವರ ನಿರ್ದೇಶನದಲ್ಲಿ ಕುವೆಂಪು ಅವರ ‘ಚಂದ್ರಹಾಸ’ ನಾಟಕವನ್ನು ಪ್ರದರ್ಶಿಸಲಾಯಿತು. ಮಧ್ಯಾಹ್ನದ ನಂತರ ಎಸ್.ರಾಮನಾಥ ಅವರ ನಿರ್ದೇಶನದಲ್ಲಿ ಕಾಳಿದಾಸ ಮಹಾಕವಿಯ ‘ನೆನಪಾದಳು ಶಕುಂತಲೆ’ ಹಾಗೂ ಸಂಜೆ ಚನ್ನಕೇಶವ ಅವರ ನಿರ್ದೇಶನದಲ್ಲಿ ಮಾಕ್ಸಿಂಗಾರ್ಕಿ ಅವರ ‘ಈ ಕೆಳಗಿನವರು’ ನಾಟಕವನ್ನು ಪ್ರಸ್ತುತಪಡಿಸಲಾಯಿತು.
ವಾಸ್ತವಿಕತೆಯಿಂದ ದೂರ ಸರಿಯಬಾರದು:ರಂಗಭೂಮಿ ಸಾಹಿತ್ಯವನ್ನು ಕೇವಲ ಪಠ್ಯಕ್ಕೆ ಅನುಸಾರವಾಗಿ ಗ್ರಹಿಸುವುದನ್ನು ಬಿಡಬೇಕು ಎಂದು ರಂಗ ನಿರ್ದೇಶಕ ಚನ್ನಕೇಶವ ತಿಳಿಸಿದರು.
ಇಲ್ಲದಿದ್ದರೆ, ಸಾಹಿತ್ಯದ ಪ್ರಭಾವವೇ ಅಧಿಕವಾಗಿ ವಾಸ್ತವಿಕತೆ ಮಾಸಿ ಹೋಗುವ ಅಪಾಯ ಇದೆ. ಒಂದು ಬಗೆಯ ‘ಸ್ಟೈಲೀಶ್’ ಚಿಂತನಾ ಕ್ರಮ ಬೆಳೆದುಬಿಡುವ ಸಾಧ್ಯತೆ ಇದೆ. ಹಾಗಾಗಿ, ವಾಸ್ತವಿಕತೆಯಿಂದ ದೂರ ಸರಿಯಬಾರದು ಎಂದರು.
ನಾಟಕಗಳ ಧ್ವನಿ, ದೇಹ, ನಟನೆಗಳನ್ನು ಬಿಡಿಬಿಡಿಯಾಗಿ ನೋಡದೇ ಇಡಿಯಾಗಿ ನೋಡಬೇಕು. ಆದ ನಾಟಕಗಳನ್ನು ಎಡ ಮತ್ತು ಬಲ ಎಂದು ವಿಂಗಡಿಸುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.
‘ಶಾಲೆಗಳಲ್ಲಿ ಅಂತಃಸತ್ವದ ಪರಿಕಲ್ಪನೆ ಬಿಟ್ಟು ಹೋಗುತ್ತಿದೆ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಿಂತನೆ ಬೆಳೆಸಲು ನಾವು ವಿಫಲರಾಗುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಿಗುವ ಅವಕಾಶ ಬಳಸಿ ರಂಗಭೂಮಿ ಕಟ್ಟಲು ಕರೆ
ತಾವಿರುವ ಜಾಗದಲ್ಲೇ ಇರುವ ಅವಕಾಶಗಳನ್ನು ಬಳಸಿಕೊಂಡು ರಂಗಭೂಮಿಯನ್ನು ಕಟ್ಟಬೇಕು ಎಂದು ರಂಗಕರ್ಮಿ ಶ್ರೀಪಾದ ಭಟ್ ಕರೆ ನೀಡಿದರು.
ರಂಗಾಯಣದ ವಿದ್ಯಾರ್ಥಿಗಳು ಇಲ್ಲಿಂದ ಬೇರೆಡೆಗೆ ಹೋದ ಮೇಲೆ ಇದೇ ಬಗೆಯ ಸೌಕರ್ಯಗಳನ್ನು ನಿರೀಕ್ಷಿಸುವುದು ಸರಿಯಲ್ಲ. ಅಲ್ಲಿ ಯಾವ ಯಾವ ಅವಕಾಶಗಳು ಸಿಗುತ್ತವೋ ಅವುಗಳನ್ನೇ ಬಳಸಿಕೊಂಡು ರಂಗಭೂಮಿ ಕಟ್ಟಬೇಕು ಎಂದರು.
ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಎಸ್.ರಾಮನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.