ADVERTISEMENT

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಉಪವಾಸ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 13:21 IST
Last Updated 27 ಮಾರ್ಚ್ 2022, 13:21 IST
ಪ್ರಸನ್ನ
ಪ್ರಸನ್ನ   

ಮೈಸೂರು: ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಭಾನುವಾರ ಒಂದು ದಿನದ ಉಪವಾಸ ನಡೆಸಿದರು.

ಹೆಗ್ಗೋಡುವಿನಿಂದ ಶನಿವಾರ ರಾತ್ರಿ ಉಪವಾಸ ಕೈಗೊಂಡು ಭಾನುವಾರ ನಸುಕಿನಲ್ಲಿ ಮೈಸೂರು ತಲುಪಿದ ಅವರು ಸ್ನೇಹಿತರ ಮನೆಯಲ್ಲಿ ಕೆಲಕಾಲ ವಿಶ್ರಾಂತಿ ಪಡೆದರು. ಬಳಿಕ ರಂಗಾಯಣ ಆವರಣಕ್ಕೆ ಬಂದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ರಂಗಾಯಣದ ಬಹುರೂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ನಡೆದ ಮರ್ಯಾದೆ ಮೀರಿದ ಘಟನೆ ಹೋರಾಟಕ್ಕೆ ಪ್ರೇರಣೆ ನೀಡಿದೆ. ಅವರನ್ನು ಕ್ಷಮಿಸಿದ್ದೇವೆ. ಅವರೂ ಕ್ಷಮೆಯನ್ನು ಒಪ್ಪಿಕೊಂಡಿದ್ದಾರೆ. ಈ ಮರ್ಯಾದೆ ಮೀರುವ ಕೆಲಸ ಯಾರಿಂದಲೂ ಆಗಬಾರದು. ರಂಗಭೂಮಿ ಹಾಗೂ ಸಾಂಸ್ಕೃತಿಕ ಮರ್ಯಾದೆ ಕಾಪಾಡುವ ಕೆಲಸ ಆಗಬೇಕು. ಅದಕ್ಕಾಗಿ ದೊಡ್ಡ ಹೋರಾಟ ಆರಂಭಿಸಲಾಗುವುದು’ ಎಂದರು.

ADVERTISEMENT

‘ಒಂದೂವರೆ ತಿಂಗಳು ಎಲ್ಲರ ಬಳಿಯೂ ಹೋಗುವೆ. ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸಬೇಕು. ದೇಗುಲಕ್ಕೆ ಹೋದಂತೆ ಕೈ, ಕಾಲು ಹಾಗೂ ಮನಸ್ಸುಗಳ‌ನ್ನು ತೊಳೆದುಕೊಂಡು ಹೋರಾಟಕ್ಕೆ ಬರಬೇಕು ಹಾಗೂ ಸಮಷ್ಠಿಯ ಹಿತ ಕಾಯುವ ಮಾತುಗಳನ್ನಾಡಬೇಕು’ ಎಂದು ಹೇಳಿದರು.

‘ಸಾಂಸ್ಕೃತಿಕ ಸಂಸ್ಥೆಗಳಿಗೆ ಹಣ ಕೊಡುವುದು ಸರ್ಕಾರದ ಜವಾಬ್ದಾರಿ. ಹಣ ಕೊಡುತ್ತೇವೆ ಎಂದು ತಮ್ಮವರನ್ನು, ತಮ್ಮ ಸಿದ್ಧಾಂತದ ಪ್ರತಿಪಾದಕರನ್ನು ಈ ಸಂಸ್ಥೆಗಳಲ್ಲಿ ಕೂರಿಸುವುದನ್ನು ಇನ್ನು ಮುಂದೆ ಸಹಿಸುವುದಿಲ್ಲ. ಎಲ್ಲ ಸಂಸ್ಥೆಗಳೂ ಮರ್ಯಾದೆಯ ಸಂಸ್ಥೆಗಳಾಗಬೇಕು. ರಾಮರಾಜ್ಯದ ಮರ್ಯಾದೆ ಎಂದರೆ ಶ್ರಮಜೀವದ ಮರ್ಯಾದೆ ಹೊರತು ಪೂಜಾರಿ ಸಂಸ್ಕೃತಿಯ ಮರ್ಯಾದೆ ಅಲ್ಲ’ ಎಂದರು.

‘ಶಾಲಾ ಶಿಕ್ಷಣ, ನೇಕಾರಿಕೆ, ಕುಶಲಕರ್ಮ, ಮಾತೃಭಾಷೆ, ಜಾನಪದ, ಹೀಗೆ ಎಲ್ಲ ಜನರ ಸಾಂಸ್ಕೃತಿಕ ಉತ್ಪಾದನೆಗಳು ಹಾಗೂ ಅಭಿವ್ಯಕ್ತಿಗಳ ಸ್ವಾಯತ್ತೆ ಉಳಿಯಬೇಕು. ಸರ್ಕಾರ ತನ್ನ ಸಾಂಸ್ಕೃತಿಕ ರಾಜಕಾರಣ ಹಾಗೂ ಸಂಸ್ಕೃತಿ ಕಟ್ಟುತ್ತಿರುವ ಜನರ ಮೇಲೆ ಸವಾರಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಕೈಗಾರಿಕಾ ಕ್ಷೇತ್ರಕ್ಕೆ ಕೊಟ್ಟಿರುವ ಸ್ವಾಯತ್ತೆಯನ್ನು ಎಲ್ಲ ಗ್ರಾಮೀಣ ಉತ್ಪಾದಕ ಹಾಗೂ ಕರಕುಶಲ ಉತ್ಪಾದನಾ ಸಂಸ್ಥೆಗಳಿಗೂ ನೀಡಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರವು ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಬಲ್ಲ ಯಂತ್ರ ಮಾಧ್ಯಮಕ್ಕೆ ಸ್ವಾಯತ್ತೆ ಕೊಟ್ಟಿದೆ. ಯಾರ ಖಾಸಗಿ ಕೋಣೆಯಲ್ಲಾದರೂ ಅಶ್ಲೀಲ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳು, ಕೆಲವೊಂದು ಮೊಬೈಲ್ ತಂತ್ರಾಂಶಗಳು ತೋರಿಸುತ್ತವೆ. ಇವೆಲ್ಲವೂ ನನ್ನ ಕೈಯಲ್ಲಿ ಇಲ್ಲ ಎಂದು ಸರ್ಕಾರ ಮಾತ್ರವಲ್ಲ; ಕೋರ್ಟ್‌ ಕೂಡ ಹೇಳುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂಸ್ಕೃತಿ, ಭಾಷೆ ಕಲಿಸಬಲ್ಲ ಮಾಧ್ಯಮಗಳನ್ನು ಸರ್ಕಾರ ಕಪಿಮುಷ್ಠಿಯಲ್ಲಿರಿಸಿಕೊಂಡಿದೆ. ರಂಗಪ್ರದರ್ಶನ ಅಥವಾ ಕಲೆ, ಸಂಸ್ಕೃತಿಯ ವಿಷಯಕ್ಕೆ ಬಂದಾಗ ಜನರನ್ನು ಸರ್ಕಾರ ಭಿಕ್ಷುಕರಂತೆ ಕಾಣುತ್ತಿದೆ. ಅಧಿಕಾರಿಶಾಹಿ ಕುತ್ತಿಗೆ ಹಿಚುಕುತ್ತಿದೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.