ಮೈಸೂರು: ‘ಪಿಎಫ್ಐಗೂ ಹಾಗೂ ಕಾಂಗ್ರೆಸ್‌ಗೂ ಯಾವುದೇ ವ್ಯತ್ಯಾಸವಿಲ್ಲ. ಎರಡರ ಚಿಂತನೆಗಳೂ ಒಂದೇ ರೀತಿಯಾಗಿವೆ. ತತ್ವ– ಸಿದ್ಧಾಂತಗಳಲ್ಲಿ ಸಾಮ್ಯವಿದೆ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ನವರಿಗೆ ಮುಸ್ಲಿಮರ ಮತ ಬೇಕು. ಹಾಗಾಗಿಯೇ ಅವರನ್ನು ಬೆಂಬಲಿಸಿ ಮಾತನಾಡುತ್ತಾರೆ’ ಎಂದರು.
‘ಆರ್‌ಎಸ್ಎಸ್ ನಿಷೇಧಿಸುವಂತೆ ಕಾಂಗ್ರೆಸ್ ನಾಯಕರು ಹೇಳುತ್ತಿರುವುದನ್ನು ಗಮನಿಸಿದ್ದೇನೆ. ಆರ್‌ಎಸ್‌ಎಸ್ ಸರ್ಕಾರದಿಂದ ಯಾವುದೇ ಅನುದಾನ ಪಡೆಯುತ್ತಿಲ್ಲ. ಅದೊಂದು ದೇಶ ಭಕ್ತ ಸಂಘಟನೆ. ನೋಂದಣಿಯಾಗಿದೆಯೋ, ಇಲ್ಲವೋ ಎನ್ನುವುದು ಮುಖ್ಯವಾಗುವುದಿಲ್ಲ. ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆಯದು’ ಎಂದು ಪ್ರತಿಕ್ರಿಯಿಸಿದರು.
‘ಪಿಎಫ್‌ಐ ದೇಶ ವಿರೋಧಿ ಕೆಲಸಗಳಲ್ಲಿ ಭಾಗಿಯಾಗಿದೆ. ಅದಕ್ಕೆ ಪೂರಕವಾಗಿ ಸಾಕ್ಷಿ ಸಿಕ್ಕಿರುವುದರಿಂದಲೇ ಆ ಸಂಘಟನೆಯನ್ನು ನಿಷೇಧಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಈವರೆಗೆ ತೆಗೆದುಕೊಂಡಿರುವ ನಿರ್ಧಾರಗಳು ಸರಿಯಾಗಿವೆ’ ಎಂದು ಸಮರ್ಥಿಸಿಕೊಂಡರು.
‘ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದಿದೆ’ ಎಂಬ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಶಿಕ್ಷಕರ ನೇಮಕಾತಿ ಹಗರಣ ಕುರಿತು ಸಿಐಡಿಯವರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಬಳಿಕ ಎಲ್ಲವೂ ಗೊತ್ತಾಗುತ್ತದೆ. ಯಾರ ಕಾಲದಲ್ಲಿ ಏನೇನು ನಡೆದಿದೆ ಎನ್ನುವುದು ತಿಳಿಯುತ್ತದೆ. ಕುಂಬಳ ಕಾಯಿ ಕಳ್ಳ ಎಂದರೆ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಆ ಅಕ್ರಮ ನಡೆದದ್ದು ಯಾರ ಕಾಲದಲ್ಲಿ?’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.