ಮೈಸೂರು: ‘ವೈದಿಕ ಧರ್ಮದಲ್ಲಿ ಜ್ಞಾನವಿಲ್ಲ. ಅಲ್ಲಿರುವುದೆಲ್ಲಾ ಕಂದಾಚಾರ ಹಾಗೂ ಗೊಡ್ಡು ಸಂಪ್ರದಾಯಗಳು’ ಎಂದು ವಿಚಾರವಾದಿ ಕೆ.ಎಸ್. ಭಗವಾನ್ ಟೀಕಿಸಿದರು.
ಮಹಿಷ ದಸರಾ ಆಚರಣೆ ಸಮಿತಿಯಿಂದ ಇಲ್ಲಿನ ಪುರಭವನದಲ್ಲಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಿಷ ದಸರಾ (ಉತ್ಸವ) –ದಮ್ಮ ದೀಕ್ಷಾ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ಕಟುವಾಗಿ ಟೀಕಿಸಿದ್ದಾರೆ. ಆ ಧರ್ಮ ಅಜ್ಞಾನವನ್ನು ಹರಡುತ್ತಿದೆ. ಹೀಗಾಗಿ ಅದನ್ನು ನಮ್ಮ ಧರ್ಮ ಎನ್ನಲಾಗದು. ನಮ್ಮದು ಬುದ್ಧ ಧರ್ಮ. ಬುದ್ಧ ನಮ್ಮಲ್ಲಿ ಹುಟ್ಟಿದವನು. ಹಿಂದೂ ಧರ್ಮ ಹೊರಗಿನಿಂದ ಬಂದದ್ದು’ ಎಂದು ಪ್ರತಿಪಾದಿಸಿದರು.
‘ಶೂದ್ರರನ್ನು ಜೀತದಾಳುಗಳು ಎಂದು ಹೇಳಿರುವ ಧರ್ಮ ನಮಗೆ ಬೇಕಾ?’ ಎಂದು ಭಗವಾನ್ ಕೇಳಿದಾಗ ಭಾಗವಹಿಸಿದ್ದವರು ‘ಬೇಡ’ ಎಂದು ಕೂಗಿದರು.
ಶಕ್ತಿಯನ್ನು ತೋರಿಸಿದ್ದೇವೆ
‘ರಾಮ ರಾಜ್ಯ ಎಂದರೆ ಅದು ಶೂದ್ರರನ್ನು ಕೊಲ್ಲುವ ಆಡಳಿತ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು. ಜ್ಞಾನದ ಬೆಳಕು ಎಂಬ ಕಾರಣಕ್ಕೆ ಬುದ್ಧನನ್ನು ವಿರೋಧಿಸುತ್ತಾರೆ’ ಎಂದು ದೂರಿದರು.
ಮಹಿಷ ದಸರಾ ಆಚರಣೆ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಮಾತನಾಡಿ, ‘ನಾವೆಲ್ಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರುವ ಮೂಲಕ ನಾಡು ಹಾಗೂ ರಾಷ್ಟ್ರಕ್ಕೆ ಶಕ್ತಿಯನ್ನು ತೋರಿಸಿದ್ದೇವೆ. ಮಾತಿಗಿಂತ ಮಾಸ್ ಮುಖ್ಯ. ನಮಗೆ ಕ್ರಾಂತಿ ಮುಖ್ಯವಲ್ಲ. ಯಾವ ರಾಜಕಾರಣಿಯ ನೆರವನ್ನೂ ಪಡೆಯದೇ ದೊಡ್ಡ ಸಂದೇಶವನ್ನು ರವಾನಿಸಿದ್ದೇವೆ. ಮುಂದೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಸೇರುವಂತಾಗಬೇಕು. ಸಾಮೂಹಿಕ ನಾಯಕತ್ವದಲ್ಲಿ ನಡೆಸೋಣ. ನಾಯಕರನ್ನು ಸೃಷ್ಟಿ ಮಾಡುವ ವೇದಿಕೆ ಇದಾಗಿದೆ’ ಎಂದು ತಿಳಿಸಿದರು.
ಗಾಂಧಿನಗರದ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಒಬ್ಬರು ಜನಪ್ರತಿನಿಧಿಯಾಗಿ ಜನರಿಗೆ ತಪ್ಪು ಸಂದೇಶವನ್ನು ಕೊಡುತ್ತಿದ್ದಾರೆ. ನಿಮ್ಮ ಧರ್ಮದ ಪ್ರಕಾರ ಎಲ್ಲೆಡೆಯೂ ದೇವರಿದ್ದಾನೆ ಎನ್ನುವುದಾದರೆ ಮಹಿಷಾಸುರನಲ್ಲಿ ಯಾರಿದ್ದಾರೆ?’ ಎಂದು ಕೇಳಿದರು.
ಇದು ಐತಿಹಾಸಿಕ ದಿನ
‘ನಾವು ಭೀಮನ ಮಕ್ಕಳು. ನಿಮ್ಮ ಡೋಂಗಿತನವನ್ನು ನಮ್ಮೆದುರು ತೋರಬೇಡಿ. ಮುಂದೆಯೂ ಮಹಿಷ ಮಂಡಲದಿಂದ ಧಮ್ಮದೀಕ್ಷಾ ಕಾರ್ಯಕ್ರಮವನ್ನು ಮಾಡುತ್ತೇವೆ. ಎಲ್ಲೋ ಒಂದು ಕಡೆ ಕಾರ್ಯಕ್ರಮ ಮಾಡುತ್ತಿದ್ದವರಿಗೆ ನಮ್ಮ ಸರ್ಕಾರದಿಂದಾಗಿ ಅರಮನೆಯ ಎದುರಿನಲ್ಲೇ ನಡೆಸಲು ಅವಕಾಶ ಸಿಕ್ಕಿದೆ. ಇದು ಐತಿಹಾಸಿಕ ದಿನವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಶೋಧಕ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ‘500 ವರ್ಷಗಳ ಹಿಂದೆ ಮುಚ್ಚಿ ಹಾಕಿರುವ ಸತ್ಯವನ್ನು ಹೇಳಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಇಡೀ ಭರತ ಖಂಡ ಮಹಿಷ ನಾಡು. ಧಾರವಾಡದಲ್ಲಿ ಸಿಕ್ಕಿರುವ ಶಾಸನದಲ್ಲಿ ಮಹಿಷೂರು ಎಂದು ದಾಖಲಾಗಿದೆ. ಚಾಮುಂಡಿಬೆಟ್ಟದ ಮಹಾಬಲ ದೇಗುಲದಲ್ಲಿ ಮೂವರು ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ದಾನ–ಧರ್ಮ ಮಾಡುತ್ತಿದ್ದರು. ಅವರು ಮಹಿಷನ ನಾಡಿನಲ್ಲಿ ಇದ್ದರು. ಅದು ರಾಮರಾಜ್ಯವೇ ಆಗಿತ್ತು. ಶಾಂತಿಯ ನಾಡಾಗಿತ್ತು’ ಎಂದು ತಿಳಿಸಿದರು.
‘ಹೊಯ್ಸಳರು ಮಹಿಷುನಾಡು ಎಂದು ಕರೆದಿದ್ದಾರೆ. ವಿಜಯನಗರ ಅರಸರ ಕಾಲದಲ್ಲಿ ಮಹಿಷನ ವಿರೋಧಿ ಮನಸ್ಥಿತಿ ಶುರುವಾಯಿತು. ಚಾಮುಂಡಿ ವಲಸೆ ಬಂದವರು. ಚಾಮುಂಡಿ ಬಗ್ಗೆ ಅನೇಕರಿಗೆ ನಂಬಿಕೆ ಇದೆ. ಹೀಗಾಗಿ ನಾವು ಚಕಾರ ಎತ್ತುತ್ತಿಲ್ಲ. ಅಂಬೇಡ್ಕರ್ ಕೊಟ್ಟಿರುವ ಜ್ಞಾನ ನಿತ್ಯ ಸತ್ಯ’ ಎಂದರು.
ಇಲಿಗಳನ್ನೇಕೆ ಶತ್ರು ಎಂದುಕೊಳ್ಳೋಣ..
‘ಪ್ರಧಾನಿ ನರೇಂದ್ರ ಮೋದಿ ಮುಂದೆ ಇಲಿ, ಜಿರಳೆ, ಸೊಳ್ಳೆ ರೀತಿ ಇರುವವರನ್ನು ನಾವೇಕೆ ಶತ್ರು ಎಂದು ಪರಿಗಣಿಸಬೇಕು? ಅಂಥವರನ್ನು ಲೆಕ್ಕಕ್ಕೇ ಇಟ್ಟುಕೊಳ್ಳಬಾರದು. ಮೋದಿ ಕೈಗೆಳಗೆ ಇರುವ ಜೀತಗಾರರನ್ನು ತಯಾರು ಮಾಡುವುದು ಬೇಡ. ಪ್ರಶ್ನಿಸುವ ನಾಯಕರನ್ನು ಹುಟ್ಟು ಹಾಕೋಣ’ ಎಂದು ಹೇಳಿದರು.
ಸಂಶೋಧಕ ಜೆ.ಎಸ್. ಪಾಟೀಲ ಮಾತನಾಡಿ, ‘ಮಹಿಷನನ್ನು ಅಸಹ್ಯ ಎಂದು ಹೇಳುವ ಕಿಡಿಗೇಡಿಗಳು ಇತಿಹಾಸವನ್ನು ಓದಬೇಕು. ಸಮಾಜದ ಸೌಹಾರ್ದ ಕೆಡಿಸುವ ಬಲಪಂಥೀಯರಿಗೆ ಜ್ಞಾನದ ಕೊರತೆ ಇದೆ. ಯಾರೋ ಹೇರಿದ ದೇವಾನುದೇವತೆಗಳ ಆರಾಧನೆಯಲ್ಲಿ ತೊಡಗಿರುವುದು ವಿಷಾದನೀಯ’ ಎಂದರು.
‘ಮಹಿಷ ಚಕ್ರವರ್ತಿ ಭೂಮಿಪುತ್ರ. ಇತರ ದೇವರುಗಳು ಆಮದಾದವರು. ಮಹಿಷ ನಮ್ಮೆಲ್ಲರ ಅಸ್ಮಿತೆ. ಹೀಗಾಗಿ, ಬಹುಜನರ ಇತಿಹಾಸದ ಕುರಿತು ಪಠ್ಯಕ್ರಮವನ್ನು ಸಿದ್ಧಪಡಿಸಬೇಕು. ಸೈದ್ಧಾಂತಿಕ ವೈರಿಗಳನ್ನು ಸೋಲಿಸುವವರೆಗೆ ವಿಶ್ರಮಿಸಬಾರದು’ ಎಂದು ತಿಳಿಸಿದರು.
ಭೋದಿದತ್ತ ಭಂತೇಜಿ ಮಾತನಾಡಿ, ‘ಮಹಿಷ ಮಂಡಲದ ಬಗ್ಗೆ ಬೇರೆ ದೇಶಗಳಲ್ಲಿ ಉಲ್ಲೇಖವಿದೆ. ಆದರೆ ಇದು ಮೈಸೂರಿಗೇ ಗೊತ್ತಿಲ್ಲ. ಮಹಿಷ ರಾಜನಾಗಿದ್ದ. ಹಾಗಾಗಿಯೇ ಇದು ಮೈಸೂರು ಎಂಬ ಹೆಸರು ಬಂದಿದೆ’ ಎಂದರು.
‘ಯಾರು ಎಷ್ಟೇ ವಿರೋಧ ಮಾಡಿದರೂ ಈ ದೇಶದಲ್ಲಿ ಬೌದ್ಧ ಧರ್ಮ ಬೆಳೆದೇ ಬೆಳೆಯುತ್ತದೆ. ಬೌದ್ಧ ಧರ್ಮ ಸ್ವೀಕರಿಸದೇ ನಾನು ಅಂಬೇಡ್ಕರ್ ವಾದಿ ಎನ್ನುವುದು ಅವರ ಬೆನ್ನಿಗೆ ಚೂರಿ ಹಾಕಿದಂತಾಗುತ್ತದೆ’ ಎಂದು ಹೇಳಿದರು.
ಹೋರಾಟಗಾರ ಭಾಸ್ಕರ್ ಪ್ರಸಾದ್ ಮಾತನಾಡಿ, ‘ಮುಂದಿನ ವರ್ಷದಿಂದ ನಾವು ಬೆಂಗಳೂರಿನಲ್ಲಿ ಮಹಿಷ ದಸರಾ ಮಾಡುತ್ತೇವೆ. ಎಲ್ಲ ಜಿಲ್ಲೆಗಳಲ್ಲೂ ನಡೆಯುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ವಕೀಲ ಎಚ್. ಮೋಹನ್ ಕುಮಾರ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.