ಮೈಸೂರು: ಬಹುನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ‘ಹಳೇ ಉಂಡವಾಡಿ ಯೋಜನೆ’ ಪೂರ್ಣಗೊಳ್ಳಲು ಇನ್ನೂ ಎಷ್ಟು ಸಮಯ ಬೇಕು?!
ಈವರೆಗೂ ಮೊದಲ ಹಂತವೇ ಪೂರ್ಣಗೊಳ್ಳದಿರುವುದು ಈ ಪ್ರಶ್ನೆಗೆ ಕಾರಣವಾಗಿದೆ.
ನೆರೆಯ ಮಂಡ್ಯ ಜಿಲ್ಲೆ ವ್ಯಾಪ್ತಿಗೆ ಬರುವ ಹಳೇ ಉಂಡವಾಡಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಮೈಸೂರು ನಗರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಹಾಗೂ ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಮತ್ತು ವ್ಯಾಪ್ತಿಯ ಹೊರಗೆ ಬರುವ 92 ಗ್ರಾಮಗಳಿಗೆ ಕುಡಿಯುವ ಸಗಟು ನೀರು ಪೂರೈಸುವ ಉದ್ದೇಶದ ಮಹತ್ವದ ಯೋಜನೆ ಇದಾಗಿದೆ.
ಒಟ್ಟು ₹ 595 ಕೋಟಿ ಮೊತ್ತದ ಈ ಯೋಜನೆಯಡಿ ಮೊದಲ ಹಂತವನ್ನು ₹350 ಕೋಟಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದಿದ್ದಲ್ಲಿ 2023ರ ಸೆಪ್ಟೆಂಬರ್‌ನಲ್ಲೇ ಮೊದಲ ಹಂತ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಸಮನ್ವಯದ ಕೊರತೆ, ಅನುದಾನ ಸಮರ್ಪಕವಾಗಿ ಲಭ್ಯವಾಗದಿರುವುದು, ಇಚ್ಛಾಶಕ್ತಿ ಮತ್ತು ಮೇಲ್ವಿಚಾರಣೆಯ ಕೊರತೆ ಮೊದಲಾದ ಕಾರಣಗಳಿಂದಾಗಿ ನಲುಗಿದೆ. ಮತ್ತೆ ಒಂದು ವರ್ಷದ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಈ ಯೋಜನೆಯಿಂದ ಮೈಸೂರು ನಗರದ ವ್ಯಾಪ್ತಿಯ ಬಡಾವಣೆಗಳ ಜತೆಗೆ ಇತರ 92 ಗ್ರಾಮಗಳಿಗೂ ನೀರಿನ ಅನುಕೂಲವಾಗಲಿದೆ. ತ್ವರಿತವಾಗಿ ಮುಗಿಸಲು ಸೂಚಿಸುತ್ತಲೇ ಬಂದಿದ್ದೇನೆಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ ಶಾಸಕ
ಪಾಲುದಾರಿಕೆ: ಮೈಸೂರು ಮಹಾನಗರ ಪಾಲಿಕೆ, ಗ್ರಾಮೀಣ ನೀರು ಸರಬರಾಜು ವಿಭಾಗ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಾಗೂ ಕರ್ನಾಟಕ ಗೃಹ ನಿರ್ಮಾಣ ಮಂಡಳಿ (ಕೆಎಚ್‌ಬಿ)ಗಳು ಕಾಮಗಾರಿಗೆ ತಗಲುವ ಅನುದಾನ ಒದಗಿಸುವ ಪಾಲುದಾರಿಕೆ ಸಂಸ್ಥೆಗಳಾಗಿವೆ.
2021ರ ಮಾರ್ಚ್‌ನಲ್ಲೇ ಆರಂಭವಾದ ಈ ಯೋಜನೆಯನ್ನು 30 ತಿಂಗಳಲ್ಲಿ ಮುಗಿಸಬೇಕು ಎಂದು ಕಾರ್ಯಾದೇಶದಲ್ಲಿ ತಿಳಿಸಲಾಗಿತ್ತು. ಕೆಲವೆಡೆ ಭೂಸ್ವಾಧೀನಕ್ಕೆ ರೈತರಿಂದ ಆಕ್ಷೇಪ ವ್ಯಕ್ತವಾಗಿದ್ದು, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು ಮೊದಲಾದ ಕಾರಣದಿಂದಲೂ ವಿಳಂಬವಾಗಿದೆ. ಪರಿಣಾಮ ಅವಧಿ ವಿಸ್ತರಿಸಲಾಗಿದೆ. ಚುನಾವಣೆ ಮಾದರಿ ನೀತಿಸಂಹಿತೆ ಕಾರಣವೂ ಪರಿಣಾಮ ಬೀರಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
‘ಯೋಜನೆ ಸಿದ್ಧಪಡಿಸುವಲ್ಲಿ ಆರಂಭದಲ್ಲಿ ಆಗಿದ್ದ ಲೋಪದಿಂದಾಗಿ ವಿಳಂಬವಾಗಿದೆ. ಪರಿಷ್ಕೃತ ಯೋಜನೆಯನ್ನು ತಯಾರಿಸಿ ಕಾಮಗಾರಿ ಚುರುಕುಗೊಳಿಸಲಾಗಿದೆ. ಮೊದಲ ಹಂತವನ್ನು 2025ರ ಜೂನ್‌ಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ’ ಎಂದು ಅನುಷ್ಠಾನದ ನೋಡಲ್ ಏಜೆನ್ಸಿಯಾಗಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದೆ.
ಈವರೆಗೆ ಆಗಿರುವುದೇನು?
ಮೂಲ ಸ್ಥಾವರ: ಹಳೇ ಉಂಡವಾಡಿ ಸಮೀಪ ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನಲ್ಲಿ ಜಾಕ್‍ವೆಲ್ ಕಂ ಪಂಪ್‍ಹೌಸ್, ಸ್ಟಿಲ್ಲಿಂಗ್ ಬೇಸಿನ್ ಕಾಮಗಾರಿ ಪೂರ್ಣಗೊಂಡಿದೆ. ಭಾಗಶಃ ‘ಡ್ರಾಟ್ ಕೆನಾಲ್’ಗೆ ಮಣ್ಣು ಅಗೆಯುವ ಕೆಲಸ ಪೂರ್ಣಗೊಂಡಿದೆ. ಜಾಕ್‍ವೆಲ್ ಕಂ ಪಂಪ್‍ಹೌಸ್‍ನ ಸ್ಟೀನಿಂಗ್ ವಾಲ್‍ನ 30 ಮೀಟರ್ ನಿರ್ಮಾಣ ಕಾಮಗಾರಿ ನಡೆದಿದೆ. ಪಂಪ್‍ಹೌಸ್ ಮತ್ತು ಸ್ವಿಚ್‍ಗೇರ್ ರೂಂನ ಫ್ಲೋರ್ ಸ್ಲಾಬ್ ಕಾಂಕ್ರೀಟ್ ಕೂಡ ಆಗಿದೆ. ಸ್ವಿಚ್‍ಗೇರ್ ರೂಂನ ರೂಫ್ ಸ್ಲಾಬ್ ಕಾಂಕ್ರೀಟ್ ಹಂತದಲ್ಲಿದೆ.
ಕೊಳವೆ ಮಾರ್ಗ: ಯೋಜನೆಯಡಿ 1,829 ಮಿ.ಮೀ., 1,422 ಮಿ.ಮೀ. ಮತ್ತು 1.168 ಮಿ.ಮೀ. ವ್ಯಾಸದ ಒಟ್ಟು 20 ಕಿ.ಮೀ. ಕೊಳವೆಗಳನ್ನು ಒದಗಿಸಿ ಅಳವಡಿಸಬೇಕಾಗಿದೆ. ಈ ಪೈಕಿ 20 ಕಿ.ಮೀ. ಕೊಳವೆಗಳನ್ನು ಒದಗಿಸಿದ್ದು, ಇನ್ನರ್ ಲೈನಿಂಗ್ ಮತ್ತು ಔಟರ್ ಬ್ರಷ್ ಕೋಟಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, 18 ಕಿ.ಮೀ. ಪೈಪ್‍ಲೈನ್ ಅಳವಡಿಸಲಾಗಿದೆ.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಂಡುಕೊಳ್ಳುವ ಉದ್ದೇಶದ ಯೋಜನೆ ಇದಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು ಮೊದಲ ಹಂತ 2025ರ ಜೂನ್‌ಗೆ ಪೂರ್ಣಗೊಳ್ಳಲಿದೆ.ಆಸಿಫ್ ಇಕ್ಬಾಲ್ ಖಲೀಲ್, ಇಇ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ
ಜಲ ಶುದ್ಧೀಕರಣ ಘಟಕ: ಏರಿಯೇಟರ್, ಕಚ್ಚಾ ನೀರಿನ ಕಾಲುವೆ, ಟ್ಯೂಬ್ ಸೆಟ್ಲರ್ ಮತ್ತು ಫಿಲ್ಟರ್ ಹೌಸ್ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಎಲೆಕ್ಟ್ರೋ-ಮೆಕ್ಯಾನಿಕಲ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಮಿಕಲ್ ಹೌಸ್, ಪಂಪ್‌ಹೌಸ್, ಶುದ್ಧ ನೀರು ಸಂಗ್ರಹಗಾರ ಹಾಗೂ ವಸತಿ ಗೃಹ ಕಾಮಗಾರಿ ಪೂರ್ಣಗೊಂಡಿದೆ.
ಯಂತ್ರೋಪಕರಣಗಳು: ಮೂಲ ಸ್ಥಾವರ ಮತ್ತು ಜಲಶುದ್ಧೀಕರಣಗಾರಕ್ಕೆ ಅವಶ್ಯವಿರುವ ಪಂಪ್‍ಸೆಟ್‍ಗಳನ್ನು ಒದಗಿಸಲಾಗಿದೆ.
ಏನಿದು ಯೋಜನೆ?
ದೂರದೃಷ್ಟಿಯ ಯೋಜನೆ ಇದಾಗಿದ್ದು ಭವಿಷ್ಯದ 2081ನೇ ಸಾಲಿನ ಸಂಭವನೀಯ 50 ಲಕ್ಷ ಜನಸಂಖ್ಯೆಗೆ ಪೂರೈಸಬಹುದಾದ 900 ಎಂ.ಎಲ್.ಡಿ. (ಮಿಲಿಯನ್ ಲೀಟರ್ ಪರ್ ಡೇ) ಸಾಮರ್ಥ್ಯಕ್ಕೆ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ 150 ಎಂ.ಎಲ್.ಡಿ. ಸಾಮರ್ಥ್ಯದ ಕಾಮಗಾರಿಯನ್ನು ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಅನುಷ್ಠಾನ ಮಾಡಲಾಗುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಮುಡಾ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕರ್ನಾಟಕ ಗೃಹ ಮಂಡಳಿ ಫಲಾನುಭವಿಗಳಾಗಿವೆ. ಚಾಮುಂಡೇಶ್ವರಿ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದ ಹಳ್ಳಿಗಳೂ ಯೋಜನೆಯ ವ್ಯಾಪ್ತಿಗೆ ಸೇರಿವೆ.
ಭಾರತೀಯ ವಿಜ್ಞಾನ ಸಂಸ್ಥೆಯಿಂದ ಪರಿಶೀಲನೆ
ಯೋಜನೆಯ ವಿವರವಾದ ಅಂದಾಜುಪಟ್ಟಿಯನ್ನು ₹ 545 ಕೋಟಿಗೆ ತಯಾರಿಸಿ ಸಲ್ಲಿಸಲಾಗಿತ್ತು. ಆದರೆ ಮೊದಲ ಹಂತವಾಗಿ ₹ 350 ಕೋಟಿಗೆ ಮಿತಿಗೊಳಿಸಿ ಅನುಮೋದನೆ ದೊರೆತಿದೆ. ಟೆಂಡರ್ ಮೂಲಕ ಬೆಂಗಳೂರಿನ ಖಾಸಗಿ ಕಂಪನಿಗೆ ₹ 264 ಕೋಟಿಗೆ ಗುತ್ತಿಗೆಗೆ ವಹಿಸಲಾಗಿದೆ. 2021ರ ಮಾರ್ಚ್ 8ರಂದು ಕಾಮಗಾರಿ ಪ್ರಾರಂಭಿಸಲಾಗಿದೆ. ಯೋಜನೆಯ ಕಾರ್ಯಗತ ವಿನ್ಯಾಸ ಮತ್ತು ನಕ್ಷೆಗಳನ್ನು ತಾಂತ್ರಿಕ ಪರಿಣಿತರಾದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಪರಿಶೀಲನೆಗೆ ಒಳಪಡಿಸಿ ಅಂತಿಮಗೊಳಿಸಿಕೊಂಡು ಅದರಂತೆ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಪ್ರಕ್ರಿಯೆಗೂ ಸಾಕಷ್ಟು ಸಮಯ ಹಿಡಿಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಯೋಜನೆಯನ್ನು ಸಂಪೂರ್ಣವಾಗಿ ಮತ್ತು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡುವ ಉದ್ದೇಶದಿಂದ ₹ 350 ಕೋಟಿ ಅಂದಾಜಿನಲ್ಲಿ ಅನುವು ಮಾಡದಿದ್ದ ಕೆಲವು ಅವಶ್ಯ ಕಾಮಗಾರಿಗಳಿಗೆ ಅನುವು ಮಾಡಿಕೊಂಡು ಪರಿಷೃತ ಅಂದಾಜು ಪಟ್ಟಿ ತಯಾರಿಸಿ 2023ರ ಮಾರ್ಚ್ 2ರಂದು ₹ 595 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಭೂಸ್ವಾಧೀನ ವಿವರ
ಯೋಜನೆಗೆ ಅವಶ್ಯವಿರುವ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಸಂಬಂಧಿಸಿದ ಒಟ್ಟು 123 ಎಕರೆ 7 ಗುಂಟೆ ಭೂಮಿಯನ್ನು ನೇರ ಖರೀದಿ ಮೂಲಕ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪೈಕಿ 27 ಎಕರೆ 32 ಗುಂಟೆ ಸರ್ಕಾರಿ ಭೂಮಿಯಾಗಿದೆ ಹಾಗೂ 91 ಎಕರೆ 25 ಗುಂಟೆ ಖಾಸಗಿ ಭೂಮಿಯಾಗಿದೆ. ಈಗಾಗಲೇ ಒಟ್ಟು 73 ಎಕರೆ 30 ಗುಂಟೆಯನ್ನು ಪಡೆದುಕೊಳ್ಳಲಾಗಿದೆ. ಭೂಸ್ವಾಧೀನಕ್ಕಾಗಿ ಇದುವರೆಗೂ ಮಂಡ್ಯ ಮತ್ತು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಕ್ರಮವಾಗಿ ₹ 31 ಕೋಟಿ ಹಾಗೂ ₹ 33.69 ಕೋಟಿ (ಒಟ್ಟಾರೆ ₹ 64.69 ಕೋಟಿ) ಠೇವಣಿ ಇಡಲಾಗಿದೆ ಎಂದು ಮೂಲಗಳು ವಿವರ ನೀಡಿವೆ.
ಆರ್ಥಿಕ ಪ್ರಗತಿ ಎಷ್ಟಾಗಿದೆ?
ಯೋಜನೆಗೆ ಇದುವರೆಗೂ ಒಟ್ಟಾರೆ ₹ 339.88 ಕೋಟಿ ವೆಚ್ಚವಾಗಿದೆ. ಗುತ್ತಿಗೆ ಕರಾರಿನಂತೆ ಸೆಪ್ಟೆಂಬರ್-2023ರ ಅಂತ್ಯಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ವಿವಿಧ ಕಾರಣಗಳಿಂದಾಗಿ ಕಾಲಾವಧಿ ವಿಸ್ತರಣೆ ಮಾಡಲಾಗಿದೆ. ಪರಿಷೃತ ಅಂದಾಜು ಪಟ್ಟಿಯಲ್ಲಿ ಅನುವು ಮಾಡಿದ್ದ 66 ಕೆ.ವಿ. ನಿರಂತರ ವಿದ್ಯುತ್ ಸರಬರಾಜು ಮಾರ್ಗ ಅಳವಡಿಸುವ ಕಾಮಗಾರಿಗಾಗಿ ಟೆಂಡರ್ ಆಹ್ವಾನಿಸಲಾಗಿದ್ದು ತಾಂತ್ರಿಕ ಬಿಡ್ ತೆರೆಯಲಾಗಿದೆ. ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತಿ ಮುಕ್ತಾಯವಾದ ನಂತರ ಸಕ್ಷಮ ಪ್ರಾಧಿಕಾರದ ಮುಂದೆ ಮಂಡಿಸಿ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಯೋಜನೆಯನ್ನು ಮುಂದಿನ ಒಂದು ವರ್ಷದ ಅವಧಿಯೊಳಗೆ ಎಲ್ಲಾ ರೀತಿಯಲ್ಲೂ ಪೂರ್ಣಗೊಳಿಸಿ ಚಾಲನೆಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.