ADVERTISEMENT

ಹುಣಸೂರು: ಮಳೆಗಾಲದಲ್ಲೂ ಕೆರೆಗೆ ನೀರಿಲ್ಲ

ಸಮಸ್ಯೆಯಲ್ಲಿ ಏತ ನೀರಾವರಿ ಯೋಜನೆ; ನಿರ್ವಹಣೆಯಲ್ಲಿನ ನಿರ್ಲಕ್ಷ್ಯಕ್ಕೆ ಆಕ್ರೋಶ

ಎಚ್.ಎಸ್.ಸಚ್ಚಿತ್
Published 23 ಜುಲೈ 2024, 4:58 IST
Last Updated 23 ಜುಲೈ 2024, 4:58 IST
ಹುಣಸೂರು ತಾಲ್ಲೂಕಿನ ಲಕ್ಷ್ಮಣತೀರ್ಥ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಮರದೂರು ಏತ ನೀರಾವರಿ ಯೋಜನೆಯ ಸ್ಥಗಿತಗೊಡಿರುವ ಘಟಕ
ಹುಣಸೂರು ತಾಲ್ಲೂಕಿನ ಲಕ್ಷ್ಮಣತೀರ್ಥ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಮರದೂರು ಏತ ನೀರಾವರಿ ಯೋಜನೆಯ ಸ್ಥಗಿತಗೊಡಿರುವ ಘಟಕ   

ಹುಣಸೂರು: ತಾಲ್ಲೂಕಿನ ಕೆರೆಗಳಿಗೆ ಲಕ್ಷ್ಮಣತೀರ್ಥ ನದಿಯಿಂದ ನೀರು ತುಂಬಿಸುವ 3 ಪ್ರಮುಖ ಏತ ನೀರಾವರಿ ಯೋಜನೆಗಳು ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದು, ಮಳೆಗಾಲದ ಪ್ರಯೋಜನ ಕೆರೆಗೆ ದೊರೆಕುತ್ತಿಲ್ಲ.

ಮುಂಗಾರಿನಲ್ಲಿ ಮೈದುಂಬಿ ಹರಿಯುವ ನದಿ ನೀರನ್ನು ಬಳಕೆ ಮಾಡುವ ಉದ್ದೇಶ ಹೊಂದಿದ್ದ ನಿಲುವಾಗಿಲು, ಕೊಳಗಟ್ಟ ಮತ್ತು ಮರದೂರು ಏತ ನೀರಾವರಿ ಯೋಜನೆಗಳು ಹೆಸರಿಗಷ್ಟೇ ಇದ್ದು, ಇದನ್ನು ಅವಲಂಬಿಸಿರುವ 24 ಕೆರೆಗಳು ನೀರಿಲ್ಲದೆ ಬರಿದಾಗುತ್ತಿವೆ.

ಈ ಮೂರೂ ಯೋಜನೆಗಳಲ್ಲಿ ಬಳಸಿರುವ ಪೈಪ್‌ಲೈನ್‌ಗಳು ಗುಣಮಟ್ಟವಿಲ್ಲದೆ ಅಲ್ಲಲ್ಲಿ ಒಡೆದಿವೆ. ಮರದೂರು ಘಟಕದ ಯಂತ್ರ ಕೆಟ್ಟುನಿಂತಿದೆ. ಈ ಎಲ್ಲವನ್ನು ಪರಿಶೀಲಿಸಿ ಮಳೆಗಾಲದ ಕಾರ್ಯಾಚರಣೆಗೆ ಸನ್ನದ್ಧವಾಗಿರಬೇಕಿದ್ದ ಆಡಳಿತ ಯಂತ್ರವೂ ವಿಫಲವಾಗಿದ್ದು, ಸಾರ್ವಜನಿಕರೂ ಈ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

2018ರಲ್ಲಿ ₹ 3.4 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡ ಕೊಳಗಟ್ಟ ಏತನೀರಾವರಿ ಯೋಜನೆಯ ಲಾಭ ಶ್ರವಣನಹಳ್ಳಿ ಕೆರೆ, ರಾಯನಹಳ್ಳಿ, ಗುರುಗಳ ಕಟ್ಟೆ, ಕೊಳಗಟ್ಟ ಕೆರೆ, ಕುಪ್ಪೆ ಕೆರೆ, ಕೊಳಗಟ್ಟ ಹೊಸಕೆರೆ ಮತ್ತು ರಂಗಯ್ಯನ ಕೊಪ್ಪಲು ಕೆರೆಗಳಿಗೆ ಸಿಗಬೇಕಿದ್ದು, ಪೈಪ್ ಅಲ್ಲಲ್ಲಿ ಒಡೆದು ನೀರು ಹರಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

₹ 23 ಕೋಟಿ ಅನುದಾನದಲ್ಲಿ ಜಾರಿಗೊಂಡ, 14 ಕೆರೆಗಳಿಗೆ ನೀರು ತುಂಬಿಸಬೇಕಿದ್ದ ನಿಲುವಾಗಿಲು ಯೋಜನೆ ಪೂರ್ಣವಾಗದಿರುವುದು ಒಟ್ಟಾರೆ ಯೋಜನೆಯ ಉದ್ದೇಶಕ್ಕೆ ದೊಡ್ಡ ಹಿನ್ನಡೆಯಾಗಿದೆ.

ತಾಲ್ಲೂಕಿನ ಅತಿ ಹಳೆಯ ಏತ ನೀರಾವರಿ ಎಂಬ ಹೆಗ್ಗಳಿಕೆ ಹೊಂದಿರುವ ಮರದೂರು ಏತ ನೀರಾವರಿ ಯೋಜನೆಗೆ 2013–14 ರಲ್ಲಿ ₹ 2 ಕೋಟಿ ಅನುದಾನದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಸಿದ್ದರೂ, ಗುಣಮಟ್ಟದ ಪೈಪ್ ಅಳವಡಿಸದೆ ಕೂಗಳತೆ ದೂರದ ಹೊಸಕೆರೆಗೂ ನೀರು ಸೇರದ ಪರಿಸ್ಥಿತಿಯಲ್ಲಿದೆ.

ಸಣ್ಣ ನೀರಾವರಿ ಇಲಾಖೆ ಎಇಇ ಈಶ್ವರ್ ಮಾತನಾಡಿ, ‘ತಾಲ್ಲೂಕಿನಲ್ಲಿ 11 ಏತ ನೀರಾವರಿ ಯೋಜನೆ ಜಾರಿಯಲ್ಲಿದ್ದು, ಕೆಲವು ಘಟಕ ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಮರದೂರು ಏತ ನೀರಾವರಿ ಘಟಕದಲ್ಲಿ ಅಳವಡಿಸಿದ್ದ ಪೈಪ್ ಲೈನ್ ಸಮಸ್ಯೆಯಿಂದ ಈಗ ಮತ್ತೊಮ್ಮೆ ದುರಸ್ಥಿಗೆ ₹ 1 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

‘ನಿಲುವಾಗಿಲು ಏತ ನೀರಾವರಿ ಯೋಜನೆಯಲ್ಲಿ ಹಬ್ಬನಕುಪ್ಪೆ ಗ್ರಾಮದ ಎರಡು ಕೆರೆಗಳಿಗೆ ಈ ಹಿಂದೆ ಗ್ರಾವಿಟೇಶನ್ ತಂತ್ರಜ್ಞಾನದಲ್ಲಿ ನೀರು ಹರಿಸಲು ಕ್ರಮವಹಿಸಿತ್ತು, ಬದಲಾದ ವ್ಯವಸ್ಥೆಯಿಂದಾಗಿ ಈಗ ₹ 2 ಕೋಟಿ ಅನುದಾನದಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಏತ ನೀರಾವರಿ ಅವಲಂಬಿಸಿದ ಸೋಮನಹಳ್ಳಿ ಗ್ರಾಮದ ಹೊಸಕೆರೆಯಲ್ಲಿ ಉದ್ದೇಶಿತ ಪ್ರಮಾಣದಲ್ಲಿ ನೀರಿಲ್ಲದಿರುವುದು
ಸ್ವಾಮಿ

Highlights - ಪೂರ್ಣವಾಗದ ನಿಲುವಾಗಿಲು ಯೋಜನೆ ಒಡೆದ ಪೈಪ್; ತಲುಪದ ನೀರು ಕಾರ್ಯಾಚರಣೆ ಸಮಯದಲ್ಲಿ ಕಾಮಗಾರಿ; ಆಕ್ರೋಶ

Quote - ಮರದೂರು ಏತ ನೀರಾವರಿ ಆರಂಭದಿಂದಲೂ ಸಮಸ್ಯೆ ಎದುರಿಸುತ್ತಿದ್ದು ಕಳೆದ ಸಾಲಿನಲ್ಲಿ ಮಳೆ ಕಡಿಮೆಯಾಗಿ ನೀರಿಲ್ಲ ಈ ವರ್ಷ ಪೈಪ್ ಮಾರ್ಗ ದುರಸ್ತಿಗೊಳ್ಳದೆ ನೀರಿಲ್ಲ ಸ್ವಾಮಿ ಪ್ರಗತಿಪರ ರೈತ ಮರದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.