ADVERTISEMENT

ದಲಿತ ಚಳವಳಿಯಲ್ಲಿ ಒಡಕು ಮೂಡಬಾರದಿತ್ತು: ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ

ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 7:38 IST
Last Updated 22 ಜೂನ್ 2024, 7:38 IST
<div class="paragraphs"><p>ಮಾನಸಗಂಗೋತ್ರಿ ಡಾ.ಬಿ.ಆರ್‌.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು. ಪ್ರೊ.ಎಸ್.ನರೇಂದ್ರಕುಮಾರ್,&nbsp;ಪ್ರೊ.ಜೆ.ಸೋಮಶೇಖರ್ ಹಾಜರಿದ್ದರು </p></div>

ಮಾನಸಗಂಗೋತ್ರಿ ಡಾ.ಬಿ.ಆರ್‌.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು. ಪ್ರೊ.ಎಸ್.ನರೇಂದ್ರಕುಮಾರ್, ಪ್ರೊ.ಜೆ.ಸೋಮಶೇಖರ್ ಹಾಜರಿದ್ದರು

   

– ಪ್ರಜಾವಾಣಿ ಚಿತ್ರ

ಮೈಸೂರು: ‘ದಲಿತ ಚಳವಳಿಯಲ್ಲಿ ಒಡಕು ಮೂಡದೇ ‘ಬ್ಲ್ಯಾಕ್ ಪ್ಯಾಂಥರ್ಸ್‌’ನಂತೆ ತೀವ್ರತೆ ಉಳಿದಿದ್ದರೆ, ವರ್ತಮಾನದ ವಿಷಮ ಸನ್ನಿವೇಶವನ್ನು ಸಮರ್ಥವಾಗಿ ಶೋಷಿತ ಸಮುದಾಯ ಎದುರಿಸುತ್ತಿತ್ತು’ ಎಂದು ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಪಾದಿಸಿದರು.

ADVERTISEMENT

ಮಾನಸಗಂಗೋತ್ರಿ ಡಾ.ಬಿ.ಆರ್‌.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ಸಂವಾದದಲ್ಲಿ, ‘ರಾಜಕೀಯ ಅಧಿಕಾರ ಹಾಗೂ ಪ್ರಾತಿನಿಧ್ಯವು ದಲಿತರು ಹಾಗೂ ಶೋಷಿತರಿಗೆ ಇನ್ನೂ ಸಿಕ್ಕಿಲ್ಲ. ಹಕ್ಕುಗಳಿಗೆ ಇನ್ನೂ ಹೋರಾಡುವಂತಾಗಿದೆ’ ಎಂದರು.

‘ಮಾನಸಗಂಗೋತ್ರಿ ಆವರಣದಲ್ಲಿಯೇ ಪ್ರತ್ಯೇಕ ಬಾಬೂಜಿ ಹಾಗೂ ಅಂಬೇಡ್ಕರ್ ಕೇಂದ್ರಗಳಿವೆ. ಇಂದಿನ ನಮ್ಮ ಪ್ರಜ್ಞೆಯು ಸೀಳುಪ್ರಜ್ಞೆಯಾಗಿದೆ. ಪ್ರತಿಯೊಬ್ಬರು ಜಾತಿ ಯಜಮಾನ್ಯದಲ್ಲಿ ಗುರುತಿಸಿಕೊಳ್ಳುವುದಕ್ಕೇ ಜೋತು ಬಿದ್ದಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಾಂಸ್ಕೃತಿಕ ಹಾಗೂ ವರ್ಗದ ಯಜಮಾನಿಕೆಯ ಬಗ್ಗೆ ಆಂಟಾನಿಯೊ ಗ್ರಾಮ್ಶಿ ಹಾಗೂ ಅಂಬೇಡ್ಕರ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅಂಬೇಡ್ಕರ್ ಜೀವನ ಚರಿತ್ರೆಯನ್ನು ನಮಗೆ ಬೇಕಾದಂತೆ ಗ್ರಹಿಸಿದ್ದೇವೆ. ಅವರನ್ನು ಸಮಕಾಲೀನಗೊಳಿಸುವ ಮಹತ್ವದ ಪ್ರಯೋಗ ನಡೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಅಂಬೇಡ್ಕರ್ ಪರಿ ನಿರ್ವಾಣದ ಮೇಲೆ ಹುಟ್ಟಿಕೊಂಡ ಘೋಷಿತ ಅನುಯಾಯಿಗಳು, ಅಕಾಡೆಮಿಕ್‌ ವಲಯ, ಬಾಬಾ ಸಾಹೇಬರ ಬಗ್ಗೆ ಸಾಕಷ್ಟು ಕೃಷಿ ನಡೆಸಿದ್ದರು. ಆದರೆ, ಅಂಬೇಡ್ಕರ್‌ ಅವರನ್ನು ಸಮಕಾಲೀನಗೊಳಿಸುವ ಎದೆಗಾರಿಕೆ ಅವರಿಗೆ ಇಲ್ಲವಾಗಿತ್ತು’ ಎಂದು ಅಭಿಪ್ರಾಯಪಟ್ಟರು. 

‘ಅಂಬೇಡ್ಕರ್‌ ಓದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬೆಳೆಸಿದ್ದೇವೆ. ಪ್ರತಿಮೆ, ರಾಜಕಾರಣದ ಆಚೆಗೆ ಯೋಚಿಸದಿದ್ದರೆ ಅವರ ಚಿಂತನೆಗಳು ಸ್ಥಗಿತಗೊಳ್ಳಲಿವೆ’ ಎಂದು ಎಚ್ಚರಿಸಿದರು. 

‘ಕಳೆದ 70 ವರ್ಷಗಳಿಂದ ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಗಾಂಧಿಯನ್ನು ದ್ವೇಷಿಸುತ್ತ ಇನ್ನೂ ಗುದ್ದಾಡಬೇಕೆ? ಅವರಿಬ್ಬರ ಚರ್ಚೆಯನ್ನು ಕಾಲಾತೀತವಾಗಿ ಮುಂದುವರಿಸಬೇಕೆ? ಸವರ್ಣೀಯ ಹಿಂದೂವಾಗಿ ಗಾಂಧೀಜಿ, ಅವರ ಮಿತಿಯೊಳಗೆ ನಡೆಸಿದ ಪ್ರಯೋಗಗಳ ಬಗ್ಗೆ ಕುಂದನ್ನು ನಾವು ಎಣಿಸಬಾರದು’ ಎಂದರು.

‘ವಿಶ್ವದ ಚಿಂತಕರು ಅಂಬೇಡ್ಕರ್ ಅವರನ್ನು ಬಹು ಮಾದರಿಯ ಅಧ್ಯಯನ ನಡೆಸಿ ಬರೆಯುತ್ತಿದ್ದಾರೆ. ಅದನ್ನು ಗಮನಿಸಿದರೆ ಆನಂದವಾಗುತ್ತದೆ’ ಎಂದರು. 

ಪದ್ಯ ಬರೆಯುತ್ತಿದ್ದೆ: ‘ಕವಿ ಸಿದ್ದಲಿಂಗಯ್ಯ ಅವರಿಗಿಂತ ಮುಂಚೆಯೇ ಪದ್ಯ ಬರೆಯುತ್ತಿದ್ದೆ. ಅವರ ಜಗತ್ತು, ನನ್ನ ಜಗತ್ತು ಬೇರೆಯಾಗಿತ್ತು. ಆ ಕಾಲದಲ್ಲಿ ಭಾಷಣಕಾರರು ಇಲ್ಲದಿದ್ದರಿಂದ ಹಾಡು ಬರೆಯಬೇಕಾಯಿತು’ ಎಂದು ರಾಮಯ್ಯ ವಿದ್ಯಾರ್ಥಿಯೊಬ್ಬರ ‍ಪ್ರಶ್ನೆಗೆ ಉತ್ತರಿಸಿದರು. 

‘ಆಂಧ‍್ರದ ಗದ್ದರ್ ಅವರ ಹಾಡುಗಳನ್ನು ಕನ್ನಡಕ್ಕೆ ಅನುವಾದಿಸಿದೆ.  ಆ ನಂತರ ಹಾಡುಗಳನ್ನು ಬರೆದೆ. ಸಿದ್ದಲಿಂಗಯ್ಯ ಅವರ ಹಾಡುಗಳು ಗ್ರಾಮಾಂತರ ಪ್ರದೇಶದ ಜನರನ್ನು ಬೆಸೆಯುತ್ತಿರಲಿಲ್ಲ’ ಎಂದರು.

ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್ ಹಾಜರಿದ್ದರು.

ಅಂಬೇಡ್ಕರ್ ಅವರನ್ನು ಸಮಕಾಲೀನಗೊಳಿಸಿ ಪ್ರತಿಮೆ, ರಾಜಕಾರಣದ ಆಚೆಗೆ ನೋಡಬೇಕು ಬಹುಮಾದರಿಯ ಅಧ್ಯಯನ ನಡೆಸಲು ಸಲಹೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.