ADVERTISEMENT

ಪರಿಶಿಷ್ಟರಲ್ಲಿ ಒಳಮೀಸಲಾತಿ ನಿಶ್ಚಿತ: ಚಿಂತಕ ಎಚ್‌. ಗೋವಿಂದಯ್ಯ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 14:34 IST
Last Updated 1 ನವೆಂಬರ್ 2024, 14:34 IST
   

ಮೈಸೂರು: ‘ಪರಿಶಿಷ್ಟರಲ್ಲಿ ಒಳಮೀಸಲಾತಿ ಜಾರಿಯಾಗುವುದು ನಿಶ್ಚಿತ’ ಎಂದು ಚಿಂತಕ ಎಚ್‌. ಗೋವಿಂದಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಜನಚೈತನ್ಯ ಪ್ರತಿಷ್ಠಾನ ಹಾಗೂ ‘ಜಿಲ್ಲಾ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ಯಿಂದ ಶುಕ್ರವಾರ ಆಯೋಜಿಸಿದ್ದ ‘ಒಳಮೀಸಲಾತಿ: ಸುಪ್ರೀಂ ಕೋರ್ಟ್ ತೀರ್ಪು ಮತ್ತು ಜಾರಿ’ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೆ, ಮಾದಿಗರು ಒಳ ಮೀಸಲಾತಿ ಕೇಳಿದರೆ ವ್ಯಂಗ್ಯವಾಡುತ್ತಿದ್ದರು. ಪೌರಕಾರ್ಮಿಕರನ್ನು ಮಾದಿಗರ ಮೇಲೆ ಎತ್ತಿ ಕಟ್ಟುವ ಪ್ರಯತ್ನವೂ ನಡೆಯುತ್ತಿತ್ತು. ಈಗ, ಸುಪ್ರೀಂ ‌ಕೋರ್ಟ್ ತೀರ್ಪು ದೇಶದ ಅಸ್ಪೃಶ್ಯ ದಲಿತರ ಏಕತೆ, ಐಕ್ಯತೆ ಹಾಗೂ ಅವರ ಭವಿಷ್ಯದ ಕುರಿತ ಅತ್ಯಂತ ಮಹತ್ವದ್ದು ಹಾಗೂ ಐತಿಹಾಸಿಕವಾದುದಾಗಿದೆ’ ಎಂದು ಹೇಳಿದರು.

ADVERTISEMENT

ಯಾಮಾರಿಸಲಾಗದು: ‘ಚಂದ್ರಶೇಖರಯ್ಯಗಳು, ದಾಸಯ್ಯಗಳು, ಸೋಮಶೇಖರಯ್ಯಗಳು ಅಥವಾ ಶಿವಾಜಿ ಗಣೇಶನ್‌ಗಳು ಎಷ್ಟೇ ತಿಪ್ಪರಲಾಗ ಹಾಕಿದರೂ ತೀರ್ಪಿನ ಜಾರಿಯನ್ನು ತಡೆಯಲು ಮತ್ತು ಮಾದಿಗ ಸಮಾಜವನ್ನು ಇನ್ಮುಂದೆಯೂ ಯಾಮಾರಿಸಲು ಸಾಧ್ಯವಾಗುವುದಿಲ್ಲ. ಜಾರಿಯಾಗುವುದರಲ್ಲಿ ಅನುಮಾನವೇ ಬೇಡ. ಇದಕ್ಕಾಗಿ ನ್ಯಾ. ಚಂದ್ರಚೂಡ್ ಅವರಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲದು’ ಎಂದರು.

‘ಒಳಮೀಸಲಾತಿಯನ್ನು ಮಲ್ಲಿಕಾರ್ಜುನ ಖರ್ಗೆ ವಿರೋಧಿಸುತ್ತಲೇ ಬಂದಿದ್ದರು. ಅವರ ಕಣ್ತೆರೆಯಲು ಸ್ವಲ್ಪ ಸಮಯ ಬೇಕು. ಅದಕ್ಕಾಗಿ ಕಾಯೋಣ. ಗೃಹ ಸಚಿವ ಜಿ.ಪರಮೇಶ್ವರ ಅವರ ಕಣ್ಣು ಸಂಪೂರ್ಣ ತೆರೆದಿದೆ. ದೇವನೂರ ಮಹಾದೇವ ಕೂಡ ಹೇಳಿಕೆ ಬದಲಿಸಿಕೊಂಡು, ಒಳಮಿಸಲಾತಿ ಪರವಾಗಿದ್ದಾರೆ. ಇದೆಲ್ಲವೂ ಚಂದ್ರಚೂಡರ ಮಹಿಮೆ’ ಎಂದು ಹೇಳಿದರು.

ದೇವನೂರ ವಿರುದ್ಧ ಕಿಡಿ: ‘ದಲಿತ ಸಂಘರ್ಷ ಸಮಿತಿಯನ್ನು ಒಡೆದ ದೇವನೂರ ಮಹಾದೇವ ಒಡಕಿನ ಪಿತಾಮಹ. ಅವರಿಂದಾಗಿ ದಲಿತ ಚಳವಳಿ ನಾಶವಾಗಿ ಹೋಗಿದೆ’ ಎಂದು ದೂರಿದರು.

‘ಪ್ರಜಾಪ್ರಭುತ್ವ ಹಾಗೂ‌ ಮೀಸಲಾತಿ ಅಂಬೇಡ್ಕರ್ ನಮಗೆ ನೀಡಿರುವ ಬ್ರಹ್ಮಾಸ್ತ್ರಗಳು. ಅದನ್ನು ಬಳಸಿಕೊಂಡು ಅಸ್ಪೃಶ್ಯತೆಯ ಕೂಪದಿಂದ ಬರುವ ದಾರಿಯನ್ನು ನಾವೆಲ್ಲರೂ ಹುಡುಕಿಕೊಳ್ಳಬೇಕಾಗಿತ್ತು. ಆದರೆ, ಬ್ರಹ್ಮಾಸ್ತ್ರಗಳನ್ನು ಬಿಸಾಡಿ ತುಕ್ಕು ಹಿಡಿಯುವಂತೆ ಮಾಡಿದ್ದೇವೆ. ಅಮೂಲ್ಯ 75 ವರ್ಷಗಳು ದಲಿತರಿಂದಲೇ ಮಣ್ಣು ಪಾಲಾದವು’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸ್ಪೃಶ್ಯ ದಲಿತರು ಅಸ್ಪೃಶ್ಯ ದಲಿತರನ್ನು ಸಹಿಸಿಕೊಳ್ಳುತ್ತಿಲ್ಲ. ಪರಸ್ಪರ ಕಿತ್ತಾಡುತ್ತಿದ್ದೇವೆ. ಅಕ್ಷರಸ್ಥ ಹಾಗೂ ಭ್ರಷ್ಟ ದಲಿತರದ್ದೇ ಕಾರುಬಾರು ನಡೆಯುತ್ತಿದೆ. ಅಂಬೇಡ್ಕರ್ ಅಧ್ಯಯನ ಕೇಂದ್ರಗಳು ದಲಿತ ಜಾತಿ ವಾದ ಹಾಗೂ ನವಬ್ರಾಹ್ಮಣವಾದವನ್ನು ವಿಸ್ತರಿಸುವ ಕೇಂದ್ರವಾಗಿ ಹೋಗಿವೆ. ಈ ಮೂಲಕ ಅಂಬೇಡ್ಕರ್ ತತ್ವಗಳನ್ನು ‌ಕೊಲ್ಲುವ ಕೆಲಸ ನಡೆಯುತ್ತಿದೆ’ ಎಂದು ದೂರಿದರು.

ಕೋರ್ಟ್‌ ಹೇಳದೇ ಇದ್ದಿದ್ದರೆ...
ಜನಚೈತನ್ಯ ಪ್ರತಿಷ್ಠಾನದ ಅಧ್ಯಕ್ಷ ಆರ್.ಲಕ್ಷ್ಮಣ ಮಾತನಾಡಿ, ‘ಒಳಮೀಸಲಾತಿ ಬಹಳ ಅಗತ್ಯ ಎನ್ನುವುದು ಎಲ್ಲರಿಗೂ ಮನವರಿಕೆ ಆಗಿದೆ. ಸುಪ್ರೀಂ ಕೋರ್ಟ್ ಪೀಠ ಹೇಳದೇ ಇದ್ದಿದ್ದರೆ ನಾವು ಒಳಮೀಸಲಾತಿ ಪಡೆದುಕೊಳ್ಳಲು ಇನ್ನೂ ಅದೆಷ್ಟು ವರ್ಷಗಳು ಬೇಕಾಗುತ್ತಿತ್ತೋ ಏನೋ?’ ಎಂದು ಕೇಳಿದರು.

ಆ ಆಳ ಅಗಲ ಬರೆಯಲಿ: ‘ದೇವನೂರ ಮಹಾದೇವ ಅವರು ಭ್ರಷ್ಟ ಅಸ್ಪೃಶ್ಯ ಹಾಗೂ ಅಕ್ಷರಸ್ಥ ದಲಿತರ ಒಡಲಾಳದ ಆಳ ಅಗಲದ ಬಗ್ಗೆ ಇನ್ನಾದರೂ ಪುಸ್ತಕ ಬರೆಯಲಿ’ ಎಂದು ವ್ಯಂಗ್ಯವಾಗಿ ಹೇಳಿದರು.

‘ದೇಶದಲ್ಲಿರುವುದು ಪ್ರಜಾಪ್ರಭುತ್ವ ಅಲ್ಲ. ಇರುವಂಥದ್ದು ಬ್ರಾಹ್ಮಣಪ್ರಭುತ್ವ ಮಾತ್ರವೇ’ ಎಂದರು.

‘ಒಳಮೀಸಲಾತಿ ತೀರ್ಪು ಒಂದೆಡೆ ದಲಿತರ ಅಪಹಾಸ್ಯದಂತೆ ಕಾಣುತ್ತಿದೆ. ಇನ್ನೊಂದೆಡೆ, ಎಲ್ಲರೂ ಒಗ್ಗೂಡಬೇಕೆಂಬ ಅಂತಿಮ ಎಚ್ಚರಿಕೆಯ ಗಂಟೆಯೂ ಆಗಿದೆ. ಒಳಮೀಸಲಾತಿ ಸ್ವಾಗತಿಸುವವರು ಹಾಗೂ ವಿರೋಧಿಸುವವರು ಭಾವಾವೇಷಕ್ಕೆ ಒಳಗಾಗದೆ, ಸಹನೆ ಹಾಗೂ ಮುಕ್ತ ಮನಸ್ಸಿನಿಂದ ಪರಸ್ಪರ ಚರ್ಚೆ ಮಾಡಬೇಕು.’ ಎಂದು ಸಲಹೆ ನೀಡಿದರು.

ಮಾಜಿ ಮೇಯರ್‌ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಆರ್. ತಿಮ್ಮರಾಯಪ್ಪ, ಮಾತಂಗ ಮಹಾಪರಿಷತ್‌ ರಾಜ್ಯಾಧ್ಯಕ್ಷ ಅರಕಲವಾಡಿ ನಾಗೇಂದ್ರ, ವಕೀಲರಾದ ದಾಸಯ್ಯ, ಮಾಳಪ್ಪ ಕುರ್ಕಿ, ಆದಿಜಾಂಬವ ಮಹಾಸಭಾದ ಅಧ್ಯಕ್ಷ ರೈಲ್ವೆ ಗಂಗಯ್ಯ, ಸಾಮಾಜಿಕ ನ್ಯಾಯಪರ ವೇದಿಕೆಯ ಮರಡೀಪುರ ರವಿಕುಮಾರ್ ಪಾಲ್ಗೊಂಡಿದ್ದರು.

ಕಾಲಹರಣ: ಅರುಣ್‌ಕುಮಾರ್

ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್. ಅರುಣ್‌ಕುಮಾರ್‌, ‘ಒಂದೊಂದು ಕಡೆ ಒಂದೊಂದು ತಿರುವುಗಳಲ್ಲಿ ಒಳಮೀಸಲಾತಿಯನ್ನು ಸಿಲುಕಿಸಲಾಗಿದೆ. ಸರ್ಕಾರಿ ಹುದ್ದೆಗಳು ಖಾಲಿಯಾದ ನಂತರ ಒಳಮೀಸಲಾತಿ ಕೊಡಬೇಕು ಎಂಬುದು ವಿರೋಧ ಇರುವವರ ವಿಚಾರವಾಗಿದೆ’ ಎಂದು ಆರೋಪಿಸಿದರು.

‘ಕಾನೂನಿನ ವಿಶ್ಲೇಷಣೆಗೆ ಒಳಪಟ್ಟು ಬಂದಿರುವ ತೀರ್ಪನ್ನು ಜಾರಿ ಮಾಡಲಾಗದೆ ಕಾಲಹರಣ ಮಾಡಲಾಗುತ್ತಿದೆ. ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಆಧರಿಸಿಯೇ ಜಾರಿಗೊಳಿಸಬಹುದಾಗಿದೆ. ಇದನ್ನು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅರಿಯಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.