ಮೈಸೂರು: ಕೆಎಸ್‌ಸಿಎ ರಣಜಿ ಟ್ರೋಫಿ ತಂಡದಲ್ಲಿ ಅರಮನೆ ನಗರಿಯ ಮೂವರು ಸ್ಥಾನ ಪಡೆದಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಅಂಗಳದಲ್ಲಿ ಅಭ್ಯಾಸ ನಡೆಸಿದ್ದಾರೆ.
ನಗರದ ಎಸ್.ಜೆ.ನಿಕಿನ್ ಜೋಸ್ ಉಪನಾಯಕರಾದರೆ, ಎಂ.ವೆಂಕಟೇಶ್ ಹಾಗೂ ಕಿಶನ್ ಎಸ್.ಬೇದ್ರೆ ಸ್ಥಾನ ಪಡೆದಿದ್ದಾರೆ. ಇಂದಿನಿಂದ (ಡಿ.5) ಹುಬ್ಬಳ್ಳಿಯ ದ.ರಾ.ಬೇಂದ್ರೆ ಕ್ರಿಕೆಟ್ ಮೈದಾನದಲ್ಲಿ ಪಂಜಾಬ್ ವಿರುದ್ಧ ರಣಜಿ ಟ್ರೋಫಿ ಪಂದ್ಯ ಆರಂಭವಾಗಲಿದ್ದು, ಪ್ರತಿಭೆಯನ್ನು ಮೆರೆಯಲಿದ್ದಾರೆ.
ಅಂಗಳಕ್ಕಿಳಿದ ಗಾಯಕ: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಎಂ.ವೆಂಕಟೇಶ್ ಆಸಕ್ತಿ ಹೊರಳಿದ್ದು ಕ್ರಿಕೆಟ್ ಕಡೆಗೆ.
ಅಜ್ಜಿ ಹಾಗೂ ತಾಯಿ ಶಾಸ್ತ್ರೀಯ ಗಾಯಕರು. ಅವರಲ್ಲಿಯೇ ತರಬೇತಿ ಪಡೆದು ಜ್ಯೂನಿಯರ್ ಪರೀಕ್ಷೆಯನ್ನೂ ಪಾಸು ಮಾಡಿದ್ದರು. ಇದೀಗ ರಾಜ್ಯ ತಂಡದ ಎಡಗೈ ಬ್ಯಾಟರ್, ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದಾರೆ.
ನಗರದ ವಿಜಯನಗರ 3ನೇ ಹಂತದ ನಿವಾಸಿ ದಾಕ್ಷಾಯಿಣಿ ಹಾಗೂ ಎಂ.ಮುರಳೀಧರ ದಂಪತಿ ಪುತ್ರ ಎಂ.ವೆಂಕಟೇಶ್. ಬನ್ನಿಮಂಟಪದ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಅವರನ್ನು 3ನೇ ತರಗತಿಯಿಂದಲೇ ಕ್ರಿಕೆಟ್ ತರಬೇತಿ ಶಾಲೆಗೆ ಅವರ ತಂದೆ ಸೇರಿಸಿದರು.
‘ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಡಿಎಂಎಸ್ ಶಾಲೆಯಲ್ಲಿ ಓದಿದ್ದೇನೆ. ಮೊದಲು ಮನ್ಸೂರ್ ಅಹ್ಮದ್ ಅವರಲ್ಲಿ ತರಬೇತಿ ಪಡೆದೆ. ನಂತರ ಸುರೇಂದ್ರ ಅವರಲ್ಲಿ ತರಬೇತಿ ಮುಂದುವರಿಸಿದೆ. ಆಗ ಮೈಸೂರಿಗೆ ಬಂದಿದ್ದ ಕೋಚ್ ಲಿಯಾನ್ ಖಾನ್ ಕ್ರೀಡಾ ಜೀವನವನ್ನೇ ಬದಲಿಸಿದರು. ಬೆಂಗಳೂರಿಗೆ ಕರೆದೊಯ್ದು ತರಬೇತಿ ನೀಡಿದರು’ ಎಂದು ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ಗೆ ಆಡುತ್ತಿದ್ದ. 16 ವರ್ಷದೊಳಗಿನ ಪಂದ್ಯವೊಂದರಲ್ಲಿ ಔಟಾಗದೇ 198 ರನ್ ಗಳಿಸಿದ್ದ. 2023ರಲ್ಲಿ ಫೆಬ್ರುವರಿಯಲ್ಲಿ ಉತ್ತರಾಖಂಡ ವಿರುದ್ಧದ ರಣಜಿ ತಂಡದಲ್ಲಿ ಸ್ಥಾನಗಿಟ್ಟಿಸಿದ್ದ ವೆಂಕಟೇಶ್ ಮೊದಲ ಪಂದ್ಯದಲ್ಲಿಯೇ 5 ವಿಕೆಟ್ ಪಡೆದಿದ್ದ. ಈ ಬಾರಿಯೂ ಉತ್ತಮ ಪ್ರದರ್ಶನ ನೀಡಲಿದ್ದಾನೆ’ ಎಂದು ವೆಂಕಟೇಶ್ ತಾಯಿ ದಾಕ್ಷಾಯಿಣಿ ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.