ಮೈಸೂರು: ನಗರ ಮತ್ತು ಗ್ರಾಮಾಂತರ ಪ್ರದೇಶದ ವಿವಿಧೆಡೆ ಶುಕ್ರವಾರ ರಾತ್ರಿ 8ರಿಂದ ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆಯಾಗಿದೆ.
ದಿನವಿಡೀ ಬಿಸಿಲಿನ ವಾತಾವರಣವಿದ್ದು, ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು. ಸಂಜೆ 7 ಗಂಟೆ ಸುಮಾರು ಆರಂಭವಾದ ತುಂತುರು ಮಳೆ, ನಂತರ ಬಿರುಸು ಪಡೆಯಿತು.
ದಸರಾ ವಸ್ತುಪ್ರದರ್ಶನಕ್ಕೆ ತೆರಳಿದ್ದವರು ಕೊಡೆ ಹಿಡಿದು ಖರೀದಿ ನಡೆಸಿದರು. ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಪಟಾಕಿ ಸಿಡಿಸಲು ಅಣಿಯಾಗಿದ್ದವರು, ಮಳೆಯಾದ್ದರಿಂದ ಪಟಾಕಿಗಳನ್ನು ವಾಪಸಿಟ್ಟರು. ಪಟಾಕಿಯ ಆರ್ಭಟವೂ ನಗರದಲ್ಲಿ ಕಡಿಮೆಯಿತ್ತು.
ಕೆ.ಆರ್.ವೃತ್ತ, ಅಶೋಕಪುರಂ, ವಿದ್ಯಾರಣ್ಯಪುರಂ, ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆ, ಅಶೋಕಪುರಂನ ಅಂಬೇಡ್ಕರ್ ರಸ್ತೆ, ಪಡುವಾರಹಳ್ಳಿಯ ವಿವಿಧ ಭಾಗಗಳಲ್ಲಿ ಒಳಚರಂಡಿಗೆ ಮಳೆ ನೀರು ಸೇರಿದ್ದರಿಂದ ಮ್ಯಾನ್‌ಹೋಲ್ ಮುಚ್ಚಳದ ಬಾಯಿ ತೆರೆದು ನೀರು ಉಕ್ಕಿ ಹರಿಯಿತು.
ಅಶೋಕಪುರಂನ ಅಂಬೇಡ್ಕರ್ ರಸ್ತೆಯ ನಡುವೆಯೇ ಹಾದು ಹೋಗಿರುವ ಚರಂಡಿಯನ್ನು ದುರಸ್ತಿಗೊಳಿಸಿದ್ದರೂ ಮತ್ತೆ ಮ್ಯಾನ್‌ಹೋಲ್ ಕಳಚಿ ನೀರು ಉಕ್ಕಿತು. ಸಯ್ಯಾಜಿ ರಾವ್ ರಸ್ತೆ, ಹುಣಸೂರು ರಸ್ತೆ, ರಾಮಾನುಜ ರಸ್ತೆ, ವಾಣಿವಿಲಾಸ ರಸ್ತೆ, ಜೆಎಲ್‌ಬಿ ರಸ್ತೆ ಹೊಳೆಯಂತಾಗಿದ್ದವು.
ಕೆ.ಆರ್.ಮೊಹಲ್ಲಾ, ಸುಣ್ಣದಕೇರಿ, ಅಗ್ರಹಾರ, ತಿಲಕ್‌ನಗರ, ಬನ್ನಿಮಂಟಪ, ಸಿದ್ದಲಿಂಗಪುರ, ರಾಘವೇಂದ್ರ ನಗರ, ಸಿದ್ಧಾರ್ಥನಗರ, ಗಿರಿಯಾಭೋವಿ ಪಾಳ್ಯ, ಕುವೆಂಪುನಗರ, ಸರಸ್ವತಿಪುರಂ, ಟಿ.ಕೆ.ಬಡಾವಣೆ, ವಿಜಯನಗರ, ಕೆ.ಆರ್.ಮೊಹಲ್ಲಾ, ಚಾಮರಾಜ ಮೊಹಲ್ಲಾ ಸೇರಿದಂತೆ ವಿವಿಧೆಡೆ ಜೋರು ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.