ಹನಗೋಡು: ಸಮೀಪದ ಅಬ್ಬೂರು ಗ್ರಾಮದ ಮಾದೇವ ಶೆಟ್ಟಿ ಅವರ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಸೋಮವಾರ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಗ್ರಾಮದ ಹೊರವಲಯದ ತೋಟದ ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿ ಹಾಕಿ ಅಟ್ಟಣೆಯಲ್ಲಿ ಮಲಗಿದ್ದರು. ಸೋಮವಾರ ರಾತ್ರಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ರಕ್ತ ಹೀರಿದೆ. ಹಸುವಿನ ಚೀರಾಟ ಕೇಳಿ ಎಚ್ಚರಗೊಂಡ ಮಾದೇವ ಶೆಟ್ಟಿ ಕಿರುಚಿಕೊಂಡಾಗ ಹುಲಿ ಓಡಿಹೋಗಿದೆ.
‘ಕೊಟ್ಟಿಗೆಯ ಬಾಗಿಲು ಹಾಕಿಕೊಂಡಿದ್ದರಿಂದ ಹುಲಿ ಮತ್ತೆ ಬರಲಿಲ್ಲ. ಇದರಿಂದ ಪ್ರಾಣಾಪಾಯದಿಂದ ಪಾರಾದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಸಿಬ್ಬಂದಿ ಮಧ್ಯರಾತ್ರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ತೋಟದೊಳಗೆ ಪಟಾಕಿ ಹಾಗೂ ಬೆಚ್ಚುಗುಂಡು ಹಾರಿಸಿ ಹುಲಿಯನ್ನು ಸಮೀಪದ ಅರಣ್ಯಕ್ಕೆ ಓಡಿಸಿದರು’ ಎಂದು ಮಾದೇವಶೆಟ್ಟಿ ತಿಳಿಸಿದರು.
‘ಎರಡು ತಿಂಗಳಿನಿಂದ ಶೆಟ್ಟಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ಬೀಡು ಬಿಟ್ಟಿದ್ದು, ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳತ್ತಿದೆ. ಅಕ್ಕ ಪಕ್ಕದ ಗ್ರಾಮಗಳಲ್ಲಿ ಜಾನುವಾರು ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಬೋನನ್ನು ಇಟ್ಟು ಹುಲಿ ಸೆರೆ ಹಿಡಿಯಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾಸುರೇಶ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.