ADVERTISEMENT

ಉರಿಗೌಡ, ನಂಜೇಗೌಡ ವಿವಾದ: ಬ್ರಿಟಿಷ್‌ ಸೈನಿಕನಿಂದಲೇ ಟಿಪ್ಪು ಮರಣ: ಕೃಷ್ಣೇಗೌಡ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 5:57 IST
Last Updated 26 ಮಾರ್ಚ್ 2023, 5:57 IST
ಮೈಸೂರಿನಲ್ಲಿ ಶನಿವಾರ ಟಿಪ್ಪು ಮರಣ ಕುರಿತು ಪ್ರೊ. ಹಾ.ತಿ. ಕೃಷ್ಣೇಗೌಡ (ಎಡಭಾಗ), ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಮಾಹಿತಿ ನೀಡಿದರು
ಮೈಸೂರಿನಲ್ಲಿ ಶನಿವಾರ ಟಿಪ್ಪು ಮರಣ ಕುರಿತು ಪ್ರೊ. ಹಾ.ತಿ. ಕೃಷ್ಣೇಗೌಡ (ಎಡಭಾಗ), ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಮಾಹಿತಿ ನೀಡಿದರು   

ಮೈಸೂರು: ‘ಟಿಪ್ಪು ಸುಲ್ತಾನ್‌ ಹತ್ಯೆ ಬ್ರಿಟಿಷ್‌ ಸೈನಿಕನಿಂದ ನಡೆದಿದೆ ಎಂಬ ಬಗ್ಗೆ ದಾಖಲೆಗಳಿವೆ. ಆದರೆ, ಉರಿಗೌಡ ಮತ್ತು ನಂಜೇಗೌಡ ಅವರ ಬಗ್ಗೆ ಎಲ್ಲೂ ಉಲ್ಲೇಖಗಳಿಲ್ಲ’ ಎಂದು ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ವಕೋಶ ರಚನೆ ಸಮಿತಿ ಗೌರವ ಅಧ್ಯಕ್ಷ ಪ್ರೊ. ಹಾ.ತಿ. ಕೃಷ್ಣೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೇಖಕ ಹನೂರು ಕೃಷ್ಣಮೂರ್ತಿ ಅವರ ‘ಅನಾಮಧೇಯನ ಆತ್ಮಕತೆ’ ಕೃತಿಯ ಆಯ್ದ ಭಾಗವನ್ನು ಓದಿ ಹೇಳಿದರು. ಈ ಕಾದಂಬರಿ ದಾಖಲೆಗಳು, ಉಲ್ಲೇಖಗಳನ್ನಾಧರಿಸಿ ರಚನೆಯಾಗಿದೆ. ನೈಜತೆಗೆ ಹತ್ತಿರವಾಗಿದೆ. ಇದರಲ್ಲಿ ಟಿಪ್ಪು ಕಾಲದ ದಳವಾಯಿ ಕೈಗೆ ಸಿಕ್ಕಿಬಿದ್ದ ಗಾಯಾಳು ಬ್ರಿಟಿಷ್‌ ಸೈನಿಕ, ‘ಸುಸ್ತಾಗಿದ್ದ ಟಿಪ್ಪುವನ್ನು ನಾನೇ ಗುಂಡಿಟ್ಟು ಕೊಂದೆ, ಆದರೆ ಕೊಂದಾದ ಬಳಿಕ ಅದು ಟಿಪ್ಪು ಎಂದು ತಡವಾಗಿ ಅರಿವಾಯಿತು’ ಎಂಬ ಉಲ್ಲೇಖವನ್ನು ವಿವರಿಸಿದರು.

ಟಿಪ್ಪು ಕುರಿತಾದ ಅನೇಕ ಉಲ್ಲೇಖ, ದಾಖಲೆಗಳು ಲಂಡನ್‌ನ ಬ್ರಿಟಿಷ್‌ ಲೈಬ್ರರಿಯಲ್ಲಿವೆ. ನಮಗೆ ಇನ್ನೂ ಲಭಿಸಿಲ್ಲ. ಕೆಲವರು ಅಧ್ಯಯನ ಮಾಡಿ ಬರೆಯುತ್ತಿದ್ದಾರೆ. ಉರಿಗೌಡ–ನಂಜೇಗೌಡ ಪ್ರಕರಣ ಕಾಲ್ಪನಿಕ ಲಾವಣಿಗಳಲ್ಲಿವೆ. ನೈಜ ಅಂಶಗಳ ಇತಿಹಾಸ ಪುಟಗಳಲ್ಲಿ ಇಲ್ಲ’ ಎಂದರು.

ADVERTISEMENT

ವಿಜಯ್‌ ಪೂಣಚ್ಚ ಬರೆದ ‘1837ರ ಅಮರ ಸುಳ್ಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಕೃತಿಯಲ್ಲಿ ಟಿಪ್ಪು ಕೊಡಗಿನಲ್ಲಿ ನಡೆಸಿದ ಹಿಂಸಾಚಾರ, ಬ್ರಿಟಿಷರ ವಿರುದ್ಧ ತೆರಿಗೆ ವಿರೋಧಿಸಿ ಸುಳ್ಯದ ರೈತ ಕೆದಂಬಾಡಿ ರಾಮಯ್ಯಗೌಡ ನೇತೃತ್ವದ ಕ್ರಾಂತಿಯ ಕುರಿತ ಉಲ್ಲೇಖಗಳಿವೆ. ಟಿಪ್ಪುವಿನ ಹಿಂಸಾಚಾರಗಳು ರಾಜನೊಬ್ಬ ನಡೆಸುವ ದಮನ ನೀತಿಯ ಭಾಗ ವಾಗಿ ತಿಳಿಯಬಹುದು. ಅಂದು ನಮ್ಮ ರಾಜರೂ ಶೂಲಕ್ಕೇ ರಿಸುವ ಭೀಕರ ಕ್ರಮವನ್ನು ಅನುಸರಿಸುತ್ತಿರಲಿಲ್ಲವೇ? ಎಂದು ಸಮರ್ಥಿ ಸಿಕೊಂಡರು.

ನಗರ ಕಾಂಗ್ರೆಸ್‌ ವಕ್ತಾರ ಶ್ರೀನಿವಾಸ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.