ADVERTISEMENT

ಮೈಸೂರು: ದುಃಖ ಮರೆತು, ಖುಷಿ ಹಂಚುವ ಟಾಂಗಾವಾಲಗಳು

ವರ್ಷದ ಆದಾಯದ ನಿರೀಕ್ಷೆಯಲ್ಲಿ ಟಾಂಗಾ ಸಾರಥಿಗಳು; ಸಮವಸ್ತ್ರ ನೀಡಲು ಮನವಿ

ಶಿವಪ್ರಸಾದ್ ರೈ
Published 14 ಅಕ್ಟೋಬರ್ 2023, 5:31 IST
Last Updated 14 ಅಕ್ಟೋಬರ್ 2023, 5:31 IST
<div class="paragraphs"><p>ಜಗನ್ಮೋಹನ ಅರಮನೆ ಮುಂಭಾಗದಲ್ಲಿ ಟಾಂಗಾದಲ್ಲಿ ಪ್ರಯಾಣಿಸಿದ ಪ್ರವಾಸಿಗರು </p></div>

ಜಗನ್ಮೋಹನ ಅರಮನೆ ಮುಂಭಾಗದಲ್ಲಿ ಟಾಂಗಾದಲ್ಲಿ ಪ್ರಯಾಣಿಸಿದ ಪ್ರವಾಸಿಗರು

   

–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಪ್ರವಾಸಿಗರಿಗೆ ಪ್ರಯಾಣದ ಖುಷಿಯನ್ನು ಇಮ್ಮಡಿಗೊಳಿಸುವ ಟಾಂಗಾವಾಲಗಳು ದಸರಾದ ಸಂಭ್ರಮಕ್ಕೆ ಕಳೆ ತುಂಬಲು ತಯಾರಾಗಿದ್ದು, ಸರ್ಕಾರ ತಮ್ಮ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಟಾಂಗಾವಾಲಗಳಿಗೆ ದಸರಾ ಸಮಯದಲ್ಲಿ ಸಮವಸ್ತ್ರ, ಪೇಟ ನೀಡಿದ್ದರು. ಪ್ರವಾಸಿಗರು ತಾವೂ ಆ ಪೇಟ ತೊಟ್ಟು ಖುಷಿಪಟ್ಟಿದ್ದರು. ನಮ್ಮೊಂದಿಗೆ ಫೋಟೋ ಕ್ಲಿಕ್ಕಿಸುತ್ತಿದ್ದರು. ಆ ಬಟ್ಟೆಯಿಂದಾಗಿಯೇ ನಮಗೆ ಸ್ವಲ್ಪ ವ್ಯಾಪಾರ ಹೆಚ್ಚುತ್ತಿತ್ತು. ಆದರೆ, 7–8 ವರ್ಷಗಳಿಂದ ಅದನ್ನು ಕೊಡುತ್ತಿಲ್ಲ. ಈ ಬಾರಿ ಟಾಂಗಾ ಸ್ಟ್ಯಾಂಡ್‌ಗಳಿಗೆ ಬಣ್ಣವನ್ನೂ ಬಳಿದಿಲ್ಲ. ಬಟ್ಟೆ ಕೊಡಬಹುದೆಂಬ ನಿರೀಕ್ಷೆಯಿದೆ’ ಎಂದು ಫಯಾಜ್‌ ಆಸೆಯ ಕಣ್ಣುಗಳಿಂದ ಹೇಳಿದರು.

ಮೈಸೂರಿನ ಶಾಹ್ ಪಸಂದ್ ಟಾಂಗಾ ಹಾಗೂ ಸಾರೋಟು ಪ್ರವಾಸಿಗರ ಪ‍್ರಮುಖ ಆಕರ್ಷಣೆಯಾಗಿದ್ದು, ಅದರಲ್ಲೇ ನಗರದ ಪ್ರಮುಖ ಬೀದಿಗಳಲ್ಲಿ ತೆರಳಿ ಪ್ರವಾಸಿ ತಾಣ ವೀಕ್ಷಿಸಲು ಬಯಸುತ್ತಾರೆ. ಮನೆಯಲ್ಲಿ ಹತ್ತಾರು ಸಮಸ್ಯೆಗಳಿದ್ದರೂ  ಟಾಂಗಾವಾಲಗಳು ಮೃಗಾಲಯ, ಫಿಲೋಮಿನಾ ಚರ್ಚ್‌, ಅರಮನೆ, ಮ್ಯೂಸಿಯಂ, ಜಗನ್ಮೋಹನ, ದೇವರಾಜ ಮಾರುಕಟ್ಟೆಯ ಮುಂತಾದ ಸ್ಥಳಗಳ ಸೊಬಗನ್ನು ಪ್ರವಾಸಿಗರಿಗೆ ನಗುಮೊಗದಿಂದ ವಿವರಿಸುತ್ತಾರೆ. ಸದ್ಯ, ನಗರದಲ್ಲಿ 30 ಸಾರೋಟು, 45 ಟಾಂಗಾಗಳು ಕಾರ್ಯನಿರ್ವಹಿಸುತ್ತಿವೆ.

‘ಕುದುರೆಗೆ ನೀಡುವ ಹುರುಳಿ, ಬೂಸಕ್ಕಾಗಿ ₹600 ಖರ್ಚಾಗುತ್ತದೆ. ದಿವಸದಲ್ಲಿ ಒಂದೆರಡು ಸುತ್ತು ಹೋಗುವಷ್ಟು ಪ್ರಯಾಣಿಕರು ಸಿಕ್ಕರೆ, ದಿನದಲ್ಲಿ ಸುಮಾರು ₹700 ಉಳಿಯುತ್ತದೆ. ಇದರಲ್ಲಿ ಗಾಡಿ, ಮನೆ ಹಾಗೂ ಇತರೆ ಖರ್ಚು ನೋಡಿಕೊಳ್ಳಬೇಕಿದೆ’ ಎನ್ನುತ್ತಾರೆ ಪವನ್‌.

ನಗರಸಭೆಯು ಟಾಂಗಾ ಹಾಗೂ ಕುದುರೆ ಖರೀದಿಗೆ ಸಹಾಯ ಮಾಡಿತ್ತು. ಟಾಂಗಾ ಸ್ಟ್ಯಾಂಡ್‌ಗಳೂ ನಿರ್ಮಾಣವಾಗಿವೆ. ಆದರೆ, ನಿರ್ವಹಣೆಯಿಲ್ಲದೆ ಸೊರಗುತ್ತಿವೆ. ಕುದುರೆಗಳಿಗೆ ನಿಲ್ಲಲು ಸರಿಯಾದ ಸ್ಥಳದ ಕೊರತೆ ಇರುವುದರಿಂದ ಅವು ಕಾಲಿಗೆ ಗಾಯ ಮಾಡಿಕೊಂಡ ಪರಿಸ್ಥಿತಿಯೂ ನಿರ್ಮಾಣವಾಗಿದೆ ಎಂದು ಟಾಂಗಾವಾಲಗಳು ಅಲವತ್ತುಕೊಂಡರು.

ಅರಮನೆ ಮುಂಭಾಗ ಪ್ರವಾಸಿಗರಿಗಾಗಿ ಕಾಯುತ್ತಿರುವ ಸಾರೋಟುಗಳು

ಸಾರೋಟುಗಳಿಗೆ ಸಂಖ್ಯೆ ಅಳವಡಿಸಿರುವುದು

ಸಮಸ್ಯೆ ತಪ್ಪಿಸಲು ಸಾರೋಟು ಸಂಖ್ಯೆ

ಟಾಂಗಾವಾಲಗಳ ಸಂಘವು ಸಾರೋಟುಗಳಿಗೆ ಸಂಖ್ಯೆಯ ಫಲಕ ಅಳವಡಿಸಿದೆ. ಪ್ರವಾಸಿಗರಿಗೆ ಸಮಸ್ಯೆ ಮಾಡಿದರೆ ಸಾರೋಟುಗಳನ್ನು ಗುರುತಿಸಲು ಸಹಾಯಕವಾಗುವ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಪಾಲಿಕೆಗೆ ಸಂಘವು ಮನವಿ ಸಲ್ಲಿಸಿದ್ದು ಅದು ಕಾರ್ಯಗತಗೊಳ್ಳದೇ ಇದ್ದಾಗ ಸಂಘದಿಂದ ಈ ವ್ಯವಸ್ಥೆ ಮಾಡಿಕೊಂಡಿದ್ದಾರೆ. ‘ದಸರಾ ವೇಳೆಗೆ ನಗರದ ಹೊರಭಾಗದಿಂದ ಯುವಕರು ಕುದುರೆ ತರುತ್ತಾರೆ. ಅವರು ಅನುಚಿತವಾಗಿ ವರ್ತಿಸಿದರೂ ನಮ್ಮ ಹೆಸರು ಕೆಡುತ್ತದೆ. ಈಗ ಮೈಸೂರಿನ ಟಾಂಗಾಗಳನ್ನು ಸುಲಭವಾಗಿ ಗುರುತಿಸಬಹುದು’ ಎನ್ನುತ್ತಾರೆ ಸಂಘದ ಅಧ್ಯಕ್ಷ ಫಯಾಜ್‌.

ದಸರೆಗೆ ಅಲಂಕೃತಗೊಂಡ ಟಾಂಗಾಗಳು

ಕೊರೊನಾ ಕರಿಛಾಯೆಯ ಬಳಿಕ ನಡೆಯುತ್ತಿರುವ ಸಂಭ್ರಮದ ದಸರಾಕ್ಕೆ ಟಾಂಗಾವಾಲಗಳು ಸಿದ್ಧರಾಗಿದ್ದಾರೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿರುವ ಅವರು ಪ್ರವಾಸಿಗರನ್ನು ಸೆಳೆಯಲು ತಮ್ಮ ಟಾಂಗಾಗಳಿಗೆ ಅಲಂಕಾರ ಮಾಡಿದ್ದಾರೆ. ಜಗಮಗಿಸುವ ದೀಪಗಳು ಇಂಪಾದ ಹಾಡು ಕೇಳುವ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.