ADVERTISEMENT

ಮೈಸೂರು | ಕೃಷಿ ಯಾಂತ್ರೀಕರಣ: ಜಾಗೃತಿಗೆ ಸೂಚನೆ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸವಿತಾ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 16:23 IST
Last Updated 1 ಜುಲೈ 2024, 16:23 IST
ಮೈಸೂರಿನ ಮಿನಿ ವಿಧಾನಸೌಧದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸವಿತಾ ಮಾತನಾಡಿದರು. ಇಒ ಎಂ.ಎಸ್.ಗಿರಿಧರ್ ಹಾಗೂ ತಾಲ್ಲೂಕು ಯೋಜನಾಧಿಕಾರಿ ಸುರೇಶ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಮೈಸೂರಿನ ಮಿನಿ ವಿಧಾನಸೌಧದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸವಿತಾ ಮಾತನಾಡಿದರು. ಇಒ ಎಂ.ಎಸ್.ಗಿರಿಧರ್ ಹಾಗೂ ತಾಲ್ಲೂಕು ಯೋಜನಾಧಿಕಾರಿ ಸುರೇಶ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಕೃಷಿ ಯಾಂತ್ರೀಕರಣ ಯೋಜನೆ ಬಗ್ಗೆ ರೈತರಿಗೆ ಹೆಚ್ಚು ಜಾಗೃತಿ ಮೂಡಿಸಬೇಕು ಹಾಗೂ ಮಣ್ಣಿನ ಸತ್ವ ಪರೀಕ್ಷೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯಾಗಿರುವ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸವಿತಾ ಸೂಚಿಸಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಡೆಂಗಿ ಜ್ವರ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಸಲಾಗುತ್ತಿರುವ ಹಾಸ್ಟೆಲ್ ಮಕ್ಕಳಲ್ಲಿ ಯಾರೂ ಅನುತ್ತೀರ್ಣರಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಶಿಕ್ಷಕರಿಗೂ ಮಾರ್ಗದರ್ಶನ ನೀಡಬೇಕು’ ಎಂದು ತಿಳಿಸಿದರು.

ADVERTISEMENT

ಲಿಂಗ ನಿರ್ಧಾರಿತ ವೀರ್ಯ ನಳಿಕೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮ.ಪು.ಪೂರ್ಣಾನಂದ ಮಾತನಾಡಿ, ‘ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಪ್ರಗತಿ ಶೇ 116ರಷ್ಟಿದೆ. ಲಿಂಗ ನಿರ್ಧಾರಿತ ವೀರ್ಯ ನಳಿಕೆಗಳ ಮೂಲಕ ಹೆಣ್ಣು ಕರುಗಳ ಜನನ ಪ್ರಮಾಣ ಹೆಚ್ಚಳಗೊಳಿಸುವ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಯೋಜನೆಯಡಿ ಹಸುಗಳಿಗೆ ಲಿಂಗ ನಿರ್ಧಾರಿತ ವೀರ್ಯ ನಳಿಕೆ ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ಇದಕ್ಕೆ ರಾಸುಗಳ ಮಾಲೀಕರಿಂದ ₹ 250 ಪಡೆಯಲಾಗುತ್ತದೆ. ಇದಕ್ಕೆ ಸರ್ಕಾರ ₹ 400 ಸಹಾಯಧನ ನೀಡುತ್ತದೆ. ಈ ವೀರ್ಯದಿಂದ ಹೆಣ್ಣು ಕರು ಜನಿಸುವ ಸಾಧ್ಯತೆಯು ಶೇ 90ರಷ್ಟು ಇರುತ್ತದೆ. ಅಂದರೆ ಯಶಸ್ಸಿನ ಪ್ರಮಾಣವೂ ಶೇ 90ರಷ್ಟಿದೆ. ಶೇ 10ರಷ್ಟು ಮಾತ್ರವೇ ವಿಫಲವಾಗುವ ಸಾಧ್ಯತೆ ಇದೆ. ಒಮ್ಮೆ ವಿಫಲವಾದರೆ ಫಲಾನುಭವಿಯ ಹಸುವಿಗೆ ಮತ್ತೊಮ್ಮೆ ವೀರ್ಯ ನಳಿಕೆ ಹಾಕಲಾಗುವುದು. ಅದೂ ವಿಫಲವಾದರೆ ಫಲಾನುಭವಿಗೆ ₹ 500 ಹಿಂದಿರುಗಿಸಲಾಗುವುದು. ಹೆಣ್ಣು ಕರುವಿನ ಜನನದ ಖಾತ್ರಿ ಇರುವುದರಿಂದಾಗಿ, ಹೈನುಗಾರರಿಂದ ಬೇಡಿಕೆ ಕಂಡುಬರುತ್ತಿದೆ’ ಎಂದು ಮಾಹಿತಿ ನೀಡಿದರು.

‘ಕಾಲುಬಾಯಿ ಜ್ವರದ ಲಸಿಕೆಯನ್ನೂ ನೀಡಲಾಗುತ್ತಿದೆ. ಹಿಂದೆ ಲಸಿಕೆ ಕೊರತೆ ಇತ್ತು. ಆಗ, ವರ್ಷಕ್ಕೊಮ್ಮೆ ಕೊಡಲಾಗುತ್ತಿತ್ತು. ಈಗ, ವರ್ಷದಲ್ಲಿ 2 ಬಾರಿ ಅಂದರೆ 6 ತಿಂಗಳಿಗೊಮ್ಮೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಬಜೆಟ್‌ಗೆ ಅನುಮೋದನೆ: ಇದೇ ವೇಳೆ, ಸಹಾಯಕ ಲೆಕ್ಕಾಧಿಕಾರಿ ಪ್ರೇಮಾ ಬಜೆಟ್ ಮುಖ್ಯಾಂಶ ಮಂಡಿಸಿದರು. 2024-25ನೇ ಸಾಲಿನಲ್ಲಿ  ಶಿಕ್ಷಣ, ಆರೋಗ್ಯ, ಆಯುಷ್, ಕುಡಿಯುವ ನೀರು ಮತ್ತು ನೈರ್ಮಲ್ಯ, ಪ.ಜಾತಿ, ಪ.ಪಂಗಡ ಕಲ್ಯಾಣ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಮೊದಲಾದವುಗಳಿಗೆ ಒಟ್ಟು ₹ 291.33 ಕೋಟಿ ಬಜೆಟ್‌ಗೆ ಅನುಮೋದನೆ ನೀಡಲಾಯಿತು. 

‘ತಾಲ್ಲೂಕಿನಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಬಿತ್ತನೆ ಕಾರ್ಯ ನಡೆಯುತ್ತಿದೆ. ಮಳೆ ಆಗುತ್ತಿರುವುದರಿಂದ ಬೆಳೆ ಚೆನ್ನಾಗಿದೆ. ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ. ಕೀಟನಾಶಕಗಳನ್ನು ಕೂಡ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದರು.

ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಪಾಲ್ಗೊಂಡಿದ್ದರು.

ಕೋಳಿ ಮರಿಗಳ ವಿತರಣೆ

‘ವರುಣ ಕ್ಷೇತ್ರದ ಫಲಾನುಭವಿಗಳಿಗೆ ನಾಟಿಕೋಳಿಗಳ ವಿತರಣೆ ಕಾರ್ಯಕ್ರಮವನ್ನು ಇದೇ 10ರಂದು ನಂಜನಗೂಡು ತಾಲ್ಲೂಕಿನ ಬಿಳಿಗೆರೆಯಲ್ಲಿ ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿ 2ಸಾವಿರ ಫಲಾನುಭವಿಗಳಿಗೆ ಕೋಳಿ ಮರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ವಿತರಿಸಲಾಗುತ್ತದೆ. ಒಬ್ಬ ಫಲಾನುಭವಿಗೆ 5 ವಾರ ವಯಸ್ಸಿನ 20 ಮರಿಗಳನ್ನು ಕೊಡಲಾಗುವುದು.‌ ಮರಿಯೊಂದಕ್ಕೆ ₹ 120 ಆಗಲಿದೆ. ಅದನ್ನು ಕುಕ್ಕುಟ ಮಹಾಮಂಡಳಿಯಿಂದ ಭರಿಸಲಾಗುತ್ತದೆ. ಮೀಸಲಾತಿ ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮ.ಪು.ಪೂರ್ಣಾನಂದ ತಿಳಿಸಿದರು. ‘ವರುಣ ಕ್ಷೇತ್ರ ವ್ಯಾಪ್ತಿಯ ಮೈಸೂರು ನಂಜನಗೂಡು ಮತ್ತು ತಿ.ನರಸೀಪುರ ತಾಲ್ಲೂಕಿನ ಫಲಾನುಭವಿಗಳಿಗೆ ಕೋಳಿಗಳು ದೊರೆಯಲಿವೆ. ಮೈಸೂರು ತಾಲ್ಲೂಕಿನಿಂದ 550 ಮಂದಿ ಆಯ್ಕೆ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.